ಗದಗ: ಸಬ್ ರಿಜಿಸ್ಟ್ರಾರ್ ಕಚೇರಿ ಎಂದರೆ ಅಲ್ಲಿ ಜನರಿಗೆ ನೆರವಾಗುವ ಒಂದಷ್ಟು ಕಾರ್ಯಗಳು ನಡೆಯಬೇಕು. ಆದರೆ ಗದಗ ಜಿಲ್ಲೆಯ ಸಬ್ ರಿಜಿಸ್ಟ್ರಾರ್ ಕಚೇರಿಯೊಂದು ಇವುಗಳಿಗೆ ವಿರುದ್ಧವಾಗಿದೆ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಕಾರಣ ಈ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ. ಒಂದು ಕಡೆ ಕಚೇರಿ ಸುತ್ತ ತಲೆ ಎತ್ತಿರುವ ಎಜೆಂಟರ ಕೂಟದ ಮೂಲಕ ಭ್ರಷ್ಟಾಚಾರ ನಡೆದರೆ. ಇನ್ನೊಂದೆಡೆ ನಕಲಿ ನೌಕರರಿಂದ ಅಧಿಕಾರಿಗಳು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬುವುದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಒಂದು ಕೆಲಸ ಆಗಬೇಕು ಅಂದರೆ ಬರೋಬ್ಬರಿ 15 ರಿಂದ 20 ದಿನಗಳು ಬೇಕಾಗುತ್ತದೆ. ಕೆಲವು ಬಾರಿ ಸಾರ್ವಜನಿಕರು ಕೊಟ್ಟ ಅರ್ಜಿಗಳೇ ನಾಪತ್ತೆ ಆಗುತ್ತದೆ. ಅಲ್ಲದೆ ಈ ಅರ್ಜಿ ಎಲ್ಲಿಟ್ಟಿದ್ದಾರೆ ಎನ್ನುವುದು ಕೂಡ ಇಲ್ಲಿನ ಅಧಿಕಾರಿಗಳಿಗೆ ಗೊತ್ತಿರುವುದಿಲ್ಲ. ಇನ್ನು ಸಾರ್ವಜನಿರನ್ನು ಹೇಗೆ ಅಲೆದಾಡಿಸುತ್ತಾರೆ ಎಂದರೆ ಅಲೆದಾಡಿ ಅಲೆದಾಡಿ ಸುಸ್ತಾಗಿ ಕೊನೆಗೆ ತಮಗೇ ಆಗಬೇಕಾಗಿರುವ ಕೆಲಸವನ್ನೇ ಕೈಬಿಟ್ಟು ಮನೆಯಲ್ಲಿ ಕೂರುವಂತೆ ಮಾಡುತ್ತಾರೆ. ಆದರೆ ಕೆಲಸ ಆಗಲೇಬೇಕು ಎಂದರೆ ಏಜೆಂಟರ ಮೂಲಕ ಮಾಡಿಸಬಹುದು. ಇದಕ್ಕಾಗಿ ಲಂಚ ಕೊಟ್ಟರೆ ಸಬ್ ರಿಜಿಸ್ಟ್ರಾರ್ ಸಾಹೇಬರು ಸಹಿ ಹಾಕುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ
ಒಂದು ಖರೀದಿ ಆಗಬೇಕಾದರೆ ತಿಂಗಳುಗಟ್ಟಲೇ ಅಲೆದಾಡಬೇಕಾಗುತ್ತದೆ. ಇದರಿಂದ ಸಾರ್ವಜನಿಕರು ನಿತ್ಯ ಜಗಳವಾಡುವಂತಾಗಿದೆ. ಸಿಬ್ಬಂದಿ ಕೊರತೆ ಎಂದು ಜನರಿಗೆ ಸತಾಯಿಸುತ್ತಾರೆ. ಹೀಗಾಗಿ ಗದಗ ಶಹರ, ಗದಗ ಗ್ರಾಮೀಣ ಅಂತ ವಿಂಗಡಣೆ ಮಾಡಬೇಕು ಎಂದು ಖರೀದಿದಾರ ದೀಪಕ್ ಶೆಟ್ಟಿ ಒತ್ತಾಯಿಸಿದ್ದಾರೆ.
ಏಜೆಂಟರ ಹಾವಳಿ ಒಂದು ಕಡೆಯಾದರೆ ಇನ್ನೊಂದೆಡೆ ನಕಲಿ ನೌಕರರ ಹಾವಳಿ ಹೆಚ್ಚಾಗಿದೆ. ಇವರಿಗೆ ಕಚೇರಿಯಲ್ಲಿಯೇ ಪ್ರತ್ಯೇಕ ಕೊಠಡಿ ಮಾಡಿಕೊಡಲಾಗಿದೆ. ಇವರ ಕೆಲಸ ಹೇಗೆ ಅಂದರೆ ಥಟ್ ಅಂತಾ ಆಗಿಬಿಡುತ್ತದೆ. ಏಜೆನ್ಸಿಗಳಿಂದ ಸ್ವಲ್ಪ ತಡವಾಗಬಹುದು. ಆದರೆ ಈ ನಕಲಿ ನೌಕರರಿಂದ ಆ ಕ್ಷಣದಲ್ಲಿಯೇ ಕೆಲಸ ಆಗುತ್ತದೆ. ಈ ಕೆಲಸಕ್ಕಾಗಿ ಇಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತದೆ ಎಂದು ಇಲ್ಲಿನ ಸ್ಥಳೀಯರು ಆರೋಪಿಸಿದ್ದಾರೆ.
ಈ ಸಂಬಂಧ ಸಬ್ ರಿಜಿಸ್ಟ್ರಾರ್ ಡಿ.ಕೆ. ನಡುವಲಮನಿ ಸಾಹೇಬರನ್ನು ಕೇಳಿದರೆ, ನಕಲಿ ನೌಕರರು ಯಾರು ಅಂತ ನನಗೆ ಗೊತ್ತಿಲ್ಲ. ಅಂತಹ ಯಾವ ನೌಕರರು ನಮ್ಮಲ್ಲಿ ಇಲ್ಲ. ಇದ್ದರೆ ಅಂತವರನ್ನು ವಿಚಾರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಸದ್ಯ ಅಧಿಕಾರಿಗಳ ಉಪಟಳಕ್ಕೆ ಪ್ರತಿನಿತ್ಯ ನೂರಾರು ಜನ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಅದರಲ್ಲೂ ಕೊವಿಡ್ ನಿಯಮಗಳನ್ನು ಪಾಲನೆ ಮಾಡದೆ. ನೂರಾರು ಜನರನ್ನು ಕಚೇರಿ ತುಂಬ ನಿಲ್ಲಿಸಿಕೊಂಡು ಗದ್ದಲ ಮಾಡಲಾಗುತ್ತದೆ ಎನ್ನುವುದು ಕೂಡ ತಿಳಿದು ಬಂದಿದೆ.
ವರದಿ: ಸಂಜೀವ ಪಾಂಡ್ರೆ
ಇದನ್ನೂ ಓದಿ:
ಭ್ರಷ್ಟಾಚಾರ ಆರೋಪ: ಟಿಎಂಸಿ ಪಕ್ಷದ ಮಾಜಿ ಸಚಿವ ಶ್ಯಾಮಪ್ರಸಾದ್ ಮುಖರ್ಜಿ ಬಂಧನ