ಶಾಲೆ ಆವರಣದಲ್ಲಿ ಧರೆಗೆ ಉರುಳಿದ ಮರ: ಮಕ್ಕಳನ್ನು ಸೇವ್ ಮಾಡಿದ್ದು ಶವ ಯಾತ್ರೆ

| Updated By: ಆಯೇಷಾ ಬಾನು

Updated on: Jul 18, 2022 | 7:25 PM

ಎರಡು ತಿಂಗಳ ಹಿಂದೆಯೇ ಶಾಲೆ ಮುಖ್ಯ ಶಿಕ್ಷಕರು ಮರ ತೆರವಿಗೆ ಅರಣ್ಯ ಇಲಾಖೆ ಹಾಗೂ ನಗರಸಭೆಗೆ ಪತ್ರ ಬರೆದಿದ್ದರು. ಆದ್ರೂ ಅರಣ್ಯ ಇಲಾಖೆ ನಿರ್ಲಕ್ಷ್ಯ ತೋರಿತ್ತು. ಆದ್ರೆ ಈಗ ಮರ ಬಿದ್ದಿದೆ.

ಶಾಲೆ ಆವರಣದಲ್ಲಿ ಧರೆಗೆ ಉರುಳಿದ ಮರ: ಮಕ್ಕಳನ್ನು ಸೇವ್ ಮಾಡಿದ್ದು ಶವ ಯಾತ್ರೆ
ಶಾಲೆ ಆವರಣದಲ್ಲಿ ಧರೆಗೆ ಉರುಳಿದ ಮರ
Follow us on

ಗದಗ: ಜಿಲ್ಲೆಯ ಶಾಲೆ ಆವರಣದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಶವ ಯಾತ್ರೆಯಿಂದಾಗಿ ಹಾಗೂ ಶಿಕ್ಷಕನಿಂದಾಗಿ ಮಕ್ಕಳ ಪ್ರಾಣ ಉಳಿದಿದೆ. ಗದಗ ನಗರದ ಹುಡ್ಕೋ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆ ನಂಬರ್-15 ರ ಶಾಲೆ ಆವರಣದಲ್ಲಿ ಮರ ಬಿದ್ದಿದ್ದು ಭಾರಿ ದುರಂತ ತಪ್ಪಿದೆ.

ಶವಯಾತ್ರೆಯೊಂದು ಪುಟಾಣಿಗಳ ಪ್ರಾಣವನ್ನೇ ಉಳಿಸಿದೆ. ಗದಗದ ಹುಡ್ಕೋ ಬಡಾವಣೆಯಲ್ಲಿನ ಸರ್ಕಾರಿ ಶಾಲೆಯಲ್ಲಿ 1ರಿಂದ 7ನೇ ತರಗತಿ ತನಕ ಇರುವ ಶಾಲಾ ಆವರಣದಲ್ಲೇ ಅಂಗನವಾಡಿ ಕೇಂದ್ರವೂ ಇದೆ. ಇವತ್ತು ಬೆಳಗ್ಗೆ 10 ಗಂಟೆಗೆ ಮಕ್ಕಳೆಲ್ಲ ಪ್ರಾರ್ಥನೆ ಮಾಡಿ ಕೆಲವರು ಕೊಠಡಿಗೆ ತೆರಳಿದ್ರೆ, ಕೆಲವರು ಶಾಲಾ ಆವರಣದಲ್ಲೇ ಆಡ್ತಿದ್ರು. ಆದ್ರೆ, ಏರಿಯಾದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಶಾಲೆ ಮುಂದಿನ ರಸ್ತೆಯಲ್ಲೇ ಶವಯಾತ್ರೆ ಬರುತ್ತಿತ್ತು. ಈ ವೇಳೆ ಪಟಾಕಿ ಹಚ್ತಾರೆ ಅಂತ ಮಕ್ಕಳನ್ನೆಲ್ಲ ಶಿಕ್ಷಕಿ ಕೊಠಡಿಗೆ ಕಳಿಸಿದ್ರು. ನಂತರ ಅವರು ಕೊಠಡಿಯೊಳಗೆ ಇನ್ನೂ ಕಾಲೇ ಇಟ್ಟಿರಲಿಲ್ಲ. ಅಷ್ಟ್ರಲ್ಲೇ, ಶಾಲಾ ಆವರಣದಲ್ಲಿನ ಮರದ ಬೃಹತ್ ರೆಂಬೆಯೊಂದು ಧರೆಗೆ ಉರುಳಿದೆ. ಮಕ್ಕಳ ಆಡುತ್ತಿದ್ದ ಜಾಗದಲ್ಲೇ ರೆಂಬೆ ಬಿದಿದ್ರಿಂದ ಶಿಕ್ಷಕಿಯರು ಶಾಕ್ ಆಗಿದ್ರು. ಮಕ್ಕಳು ಪಾರಾಗಿದ್ದನ್ನ ನೋಡಿ ಸ್ಥಳೀಯರು ನಿಟ್ಟುಸಿರು ಬಿಟ್ರು. ಶೋಕದಿಂದ ಸಾಗಿದ್ದ ಅಂತಿಮಯಾತ್ರೆಯೇ ಪುಟಾಣಿಗಳ ಜೀವವನ್ನ ಉಳಿಸಿದೆ.

ಶಾಲೆ ಮುಂದೆ ನಾಲ್ಕೈದು ಮರಗಳು ಇವೆ. ಇವುಗಳಲ್ಲಿ ಕೆಲವು ಒಣಗಿ ಹೊಗಿ ಈಗಲೋ ಆಗಲೋ ಬಿಳುವ ಹಂತ ತಲುಪಿವೆ. ಹೀಗಾಗಿ ಮೇ ತಿಂಗಳಲ್ಲೇ ಅರಣ್ಯ ಇಲಾಖೆ ಹಾಗೂ ನಗರಸಭೆಗೆ ಪತ್ರ ಬರೆದು ತಿಳಿಸಿದ್ರು. ಆದ್ರೆ, ಯಾರೊಬ್ಬರೂ ತಲೆ ಕೆಡಿಸಿಕೊಂಡಿರಲಿಲ್ಲ. ಆದ್ರೆ, ಇವತ್ತು ಮರದ ರೆಂಬೆ ಬೀಳುವ ಮೂಲಕ ಮುನ್ಸೂಚನೆ ಕೊಟ್ಟಿದೆ. ರಸ್ತೆಯಲ್ಲಿ ಸಾಗಿದ ಶವಯಾತ್ರೆಯಿಂದಲೇ, ಶಿಕ್ಷಕಿ ಹಾಗೂ ಮಕ್ಕಳೆಲ್ಲ ಪಾರಾಗಿದ್ದಾರೆ. ಇನ್ನು ಈ ಸುದ್ದಿ ಕೇಳಿ ಪಾಲಕರು, ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಯತ್ತ ಓಡಿ ಬಂದಿದ್ದಾರೆ. ಇದೇ ಶಾಲೆ ಆವರಣದಲ್ಲಿ ಅಂಗನವಾಡಿ ಕೇಂದ್ರ ಕೂಡ‌ ಇದೆ. ನಗರಸಭೆ, ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ತಕ್ಷಣ ಅಪಾಯಕಾರಿ ಮರಗಳ ತೆರವಿಗೆ ಒತ್ತಾಯ ಮಾಡಿದ್ದಾರೆ.

ಶಾಲೆಗೆ ಬಂದ ಬೃಹತ್ ಹಾವು

ಗದಗ: ನರಗುಂದ ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ ಕೊಠಡಿಯ ಗೋಡೆ ಮೇಲೆ ಕೆರೆ ಹಾವು ಪ್ರತ್ಯಕ್ಷವಾಗಿದೆ. ಹಾವು ಕಂಡ ಮಕ್ಕಳು ಗಾಬರಿಯಿಂದ ಕೊಠಡಿಯಿಂದ ಓಡಿಹೋಗಿದ್ದಾರೆ. ಉರಗ ರಕ್ಷಕ ಸುರೇಬಾನ ಹಾವನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಶಾಲೆಯ ನಲಿ ಕಲಿ ಕ್ಲಾಸ್ ರೂಂನಲ್ಲಿ ಬಿಡಾರ ಹೊಡಿದ್ದ ಹಾವನ್ನು ನೋಡದೆ ಶಿಕ್ಷಕರು ಕೆಲವು ಸಮಯ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೊಠಡಿಯ ಗೋಡೆಯ ಮೇಲೆ ಹಾವು ಇದ್ದರೆ ಮಕ್ಕಳು ಕೆಳಗೆ ಪಾಠ ಕೇಳುತ್ತಿದ್ದರು. ಕೆಲವು ಸಮಯದ ನಂತರ ಹಾವನ್ನು ಗಮನಿಸಿದ ಮಕ್ಕಳು ಭಯಗೊಂಡು ಕ್ಲಾಸ್ ರೂಂನಿಂದ ಓಡಿ ಹೋಗಿದ್ದಾರೆ. ಬಳಿಕ ಶಿಕ್ಷಕರು ಉರಗ ರಕ್ಷಕ ಬುಡ್ಡಾ ಸುರೇಬಾನ ನನ್ನು ಕರಿಸಿ, ಹಾವು ರಕ್ಷಣೆ ಮಾಡಿದ್ದಾರೆ. ಐದು ಅಡಿ ಉದ್ದದ ಕೆರೆ ಹಾವನ್ನು ರಕ್ಷಣೆ ಮಾಡಿ ಸುರಕ್ಷಿತ ಪ್ರದೇಶಕ್ಕೆ ತಲುಪಿಸಲಾಗಿದೆ.

ಹಾಸನದಲ್ಲಿ ಶಾಲೆ ಗೋಡೆ ಕುಸಿತ

ಹಾಸನ: ಭಾರಿ ಮಳೆಯಿಂದ ಶಾಲೆ ಗೋಡೆ ಕುಸಿದು ಬಿದ್ದಿದ್ದು ಭಾರಿ ಅನಾಹುತ ತಪ್ಪಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಚಿನ್ನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಮುಂಜಾನೆ ಮಕ್ಕಳು ಶಾಲೆಗೆ ಬರೋ ಮೊದಲೇ ಗೋಡೆ ಕುಸಿದು ಬಿದ್ದಿದೆ. ಕೊಠಡಿಯಲ್ಲಿ ಮಕ್ಕಳಿಲ್ಲದ ಕಾರಣ ಭಾರೀ ದುರಂತ ತಪ್ಪಿದೆ.

ಕಳೆದ ಎರಡು ವಾರಗಳಿಂದ ಸಕಲೇಶಪುರ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಒಂದು ವಾರದ ರಜೆ ಬಳಿಕ ಇಂದು ಶಾಲೆಗಳು ಆರಂಭವಾಗಿವೆ. ಅದೃಷ್ಟವಶಾತ್ ಶಾಲೆಗೆ ಮಕ್ಕಳು ಬರೋ ಮೊದಲೇ ಗೋಡೆ ಕುಸಿದಿದೆ. ಶೀಘ್ರವಾಗಿ ಶಾಲಾ ಕೊಠಡಿ ದುರಸ್ತಿ ಮಾಡಲು ಪೋಷಕರ ಮನವಿ ಮಾಡಿದ್ದಾರೆ.

Published On - 6:34 pm, Mon, 18 July 22