ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ಶಿಕ್ಷಕರಿಂದ ಹೊಸ ಪ್ರಯತ್ನ, ಅಚ್ಚರಿಯಂತೆ ಮಕ್ಕಳ ಹಾಜರಾತಿ ಏರಿಕೆ

| Updated By: ಆಯೇಷಾ ಬಾನು

Updated on: Dec 12, 2021 | 1:14 PM

ಅದೆಷ್ಟೇ ಸರ್ಕಸ್ ನಡೆಸಿದ್ರೂ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆತರೋದೆ ಇತ್ತೀಚಿನ ದಿನಗಳಲ್ಲಿ ದೊಡ್ಡ ಸವಾಲಾಗಿದೆ. ಆದ್ರೆ ಇಲ್ಲೊಂದು ಶಾಲೆ ಆ ಸವಾಲು ಗೆದ್ದಿದೆ. ಶಿಕ್ಷಕರ ಮಾಸ್ಟರ್ ಪ್ಲ್ಯಾನ್ಗೆ ಶಾಲೆಯಲ್ಲಿ ಮಕ್ಕಳು ತುಂಬಿ ತುಳುಕುತ್ತಿದ್ದಾರೆ.

ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ಶಿಕ್ಷಕರಿಂದ ಹೊಸ ಪ್ರಯತ್ನ, ಅಚ್ಚರಿಯಂತೆ ಮಕ್ಕಳ ಹಾಜರಾತಿ ಏರಿಕೆ
ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ಶಿಕ್ಷಕರಿಂದ ಹೊಸ ಪ್ರಯತ್ನ, ಅಚ್ಚರಿಯಂತೆ ಮಕ್ಕಳ ಹಾಜರಾತಿ ಏರಿಕೆ
Follow us on

ಗದಗ: ತಾಲೂಕಿನ ಹೊಸಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು ಹೊಸದೊಂದು ಪ್ರಯತ್ನ ಮಾಡಿ ಯಶಸ್ಸು ಕಂಡಿದ್ದಾರೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸೋ ಸಲುವಾಗಿ ಹೊಸ ಯೋಜನೆ ಹಾಕಿಕೊಂಡಿರೋ ಶಿಕ್ಷಕವೃಂದ, ಸರಕಾರದ ಮೆನ್ಯೂವಿನಲ್ಲಿ ಇರದೇ ಇದ್ರು ಮಕ್ಕಳಿಗೆ ಬಗೆ ಬಗೆಯ ತಿಂಡಿ ನೀಡೋ ಕೆಲಸ ಮಾಡ್ತಿದೆ. ಉಪ್ಪಿಟ್ಟು, ಪಲಾವ್ ಜೊತೆಗೆ ಪ್ರತಿ ಶನಿವಾರ ಮಕ್ಕಳಿಗೆ ಇಡ್ಲಿ ಸಾಂಬಾರ್ ನೀಡಲಾಗುತ್ತೆ. ಹೀಗಾಗಿ ಮಕ್ಕಳು ತಪ್ಪದೇ ಶಾಲೆಗೆ ಬರ್ತಿದ್ದಾರೆ. ಕೇವಲ ಮಕ್ಕಳಿಗೆ ಬಗೆ ಬಗೆಯ ಉಪಾಹಾರ ನೀಡೋದು ಮಾತ್ರವಲ್ಲದೆ ಪೌಷ್ಠಕತೆಯತ್ತಲೂ ಶಿಕ್ಷಕರು ಗಮನ ನೀಡ್ತಿದ್ದಾರೆ.

ಇನ್ನು ಶಿಕ್ಷಕರು ಈ ರೀತಿಯ ಪ್ರಯತ್ನಕ್ಕೆ ಕೈಹಾಕೋಕೆ ಮೂಲ ಕಾರಣವೇ ಶಾಲೆಯಲ್ಲಿ ಇಳಿಕೆ ಕಾಣ್ತಿದ್ದ ಮಕ್ಕಳ ಸಂಖ್ಯೆ. ಇದಕ್ಕೆ ಕಾರಣವಾಗಿದ್ದಿದ್ದು ಗ್ರಾಮದಲ್ಲಿರೋ ಖಾಸಗಿ ಶಾಲೆ, ಸಮೀಪವೇ ಇರುವ ಹುಲಕೋಟಿ, ಗದಗ ನಗರಗಳು. ಮಕ್ಕಳು, ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡ್ತಿರೋದ್ರಿಂದ, ಹೊಸಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು ಇಂಥಹದ್ದೊಂದು ಪ್ರಯತ್ನವನ್ನು ಮಾಡಲೇಬೇಕಾಯ್ತು. ಕೇವಲ ವಿವಿಧ ಬಗೆಯ ತಿಂಡಿ ನೀಡುವುದು ಮಾತ್ರವಲ್ಲದೆ, ಗುಣಮಟ್ಟದ ಶಿಕ್ಷಣದಿಂದಲೂ ಶಾಲೆ ಸದ್ಯ ಹೆಸರುವಾಸಿಯಾಗಿದೆ.

ಶಾಲೆಯನ್ನ ಆಕರ್ಷಣೆಗೊಳಿಸುವುದು ಒಂದು ಉದ್ದೇಶ. ಜೊತೆಗೆ ಒಳ್ಳೆಯ ಪೌಷ್ಠಿಕ ಆಹಾರ ಮಕ್ಕಳ ನೀಡಬೇಕು ಅನ್ನೋ ಸದುದ್ದೇಶದಿಂದ ಎಲ್ಲ ಶಿಕ್ಷಕರು ಚರ್ಚೆ ಮಾಡಿದ್ದೇವೆ. ಸರ್ಕಾರದ ಮೆನ್ಯೂವಿನಲ್ಲಿ ಇಡ್ಲಿ ಬೇರೆ ತಿಂಡಿ ಇಲ್ಲ. ಇಡ್ಲಿ, ಪಲಾವ್, ಉಪ್ಪಿಟ್ಟು ಹೀಗೆ ಆಹಾರ ನೀಡುವ ಮೂಲಕ ಮಕ್ಕಳ ಆಕರ್ಷಣೆ ಮಾಡುತ್ತಿದ್ದೇವೆ. ಜೊತೆಗೆ ಗುಣಮಟ್ಟದ ಪಾಠ ಮಾಡುವ ಉದ್ದೇಶ ಸಫಲವಾಗಿದೆ ಎಂದು ಶಾಲೆಯ ಸಹ ಶಿಕ್ಷಕ ಬಿ.ಎಸ್. ತಳವಾರ ಹೇಳಿದ್ದಾರೆ.

ನಮ್ಮ ಶಾಲೆಯಲ್ಲಿ ವಿಶೇಷ ತಿಂಡಿ ಕೊಡ್ತಾರೆ. ಎಲ್ಲ ಕಡೆ ಅನ್ನ ಸಾರು ಕೊಟ್ರೆ ಪ್ರತಿ ಶನಿವಾರ ಉಪ್ಪಿಟ್ಟು, ಪಲಾವ್, ಇಡ್ಲಿ ಕೊಡ್ತಾರೆ. ಹೀಗಾಗಿ ನಾವು ಶಾಲೆ ತಪ್ಪಿಸುವುದಿಲ್ಲ. ಭಾಳ ಖುಷಿಯಾಗುತ್ತೆ ಅಂತ ವಿದ್ಯಾರ್ಥಿನಿ ಪ್ರೇಮಾ ಶಾಲೆಯ ವಿಶೇಷತೆಯ ಬಗ್ಗೆ ಮಾತನಾಡಿದ್ದಾರೆ.

ಲಕ್ಷಾಂತರ ರೂಪಾಯಿ ಡೋನೇಶನ್, ಫೀಸ್ ಕೊಟ್ಟು ಪೋಷಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನ ಕಳಿಸೋದು ಇತ್ತೀಚೆಗೆ ಟ್ರೆಂಡ್ ಆಗಿದೆ. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಕೀಳು ಎಂಬ ಮನೋಭಾವ ಹಲವರಲ್ಲಿದೆ. ಆದ್ರೆ ಈ ಎಲ್ಲಾ ಅಪವಾದಗಳಿಗೆ ಹೊಸಳ್ಳಿ ಗ್ರಾಮದ ಸರಕಾರಿ ಶಾಲೆ ಮತ್ತು ಶಿಕ್ಷಕರು ಹೊರತಾಗಿದ್ದಾರೆ ಎಂದ್ರೆ ತಪ್ಪಾಗಲ್ಲ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

ಹೊಸಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ

ಹೊಸಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ

ಹೊಸಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ

ಇದನ್ನೂ ಓದಿ: ಶತಕ ದಾಟಿದ ತರಕಾರಿಗಳ ಬೆಲೆ! ಬೆಂಗಳೂರಿನಲ್ಲಿ ತರಕಾರಿಗಳ ದರ ಹೀಗಿದೆ ನೋಡಿ

Published On - 10:51 am, Sun, 12 December 21