Gadag News: ಜಿಲ್ಲೆಯಾದ್ಯಂತ ಹೆಚ್ಚುತ್ತಿವೆ ಬಾಲ್ಯ ವಿವಾಹ‌ ಪ್ರಕರಣಗಳ ಸಂಖ್ಯೆ; 5 ವರ್ಷದಲ್ಲೇ 171 ಬಾಲ್ಯ ವಿವಾಹಕ್ಕೆ ಬ್ರೇಕ್​, 115 ಫೋಕ್ಸೋ ಕೇಸ್ ದಾಖಲು

|

Updated on: May 27, 2023 | 2:46 PM

ಸರ್ಕಾರ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಯೋದಕ್ಕಾಗಿ ಸಾಕಷ್ಟು ಕಾರ್ಯಕ್ರಮಗಳನ್ನ ರೂಪಿಸಿದೆ‌. ಅಷ್ಟಾದರೂ ಕೂಡ ಮಕ್ಕಳ ಮೇಲೆ ಅತ್ಯಾಚಾರ, ಶೋಷಣೆ, ದೌರ್ಜನ್ಯ, ಬಾಲ್ಯ ವಿವಾಹ, ಹೀಗೆ ಇಂಥಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಪೋಕ್ಸೋ ಕಾಯಿದೆ ಜಾರಿಯಲ್ಲಿದ್ದರೂ ಪ್ರಕರಣಗಳ‌ ಸಂಖ್ಯೆ ಏರಿಕೆ ಆಗುತ್ತಿರೋದು ಆತಂಕಕಾರಿಯಾಗಿದೆ. ಏನೂ ಅರಿಯದ ಮುಗ್ಧ ಕಂದಮ್ಮಗಳ ಮೇಲಿನ ದೌರ್ಜನ್ಯಕ್ಕೆ ಮಾತ್ರ ಕಡಿವಾಣ ಬೀಳುತ್ತಿಲ್ಲ. ಇದನ್ನ ನಿಯಂತ್ರಿಸೋದೆ ಮಕ್ಕಳ‌ ರಕ್ಷಣಾ ಘಟಕಕ್ಕೆ ಸವಾಲಾಗಿ ಪರಿಣಮಿಸಿದೆ.

Gadag News: ಜಿಲ್ಲೆಯಾದ್ಯಂತ ಹೆಚ್ಚುತ್ತಿವೆ ಬಾಲ್ಯ ವಿವಾಹ‌ ಪ್ರಕರಣಗಳ ಸಂಖ್ಯೆ; 5 ವರ್ಷದಲ್ಲೇ 171 ಬಾಲ್ಯ ವಿವಾಹಕ್ಕೆ ಬ್ರೇಕ್​, 115 ಫೋಕ್ಸೋ ಕೇಸ್ ದಾಖಲು
ಗದಗ
Follow us on

ಗದಗ: ಮುದ್ರಣ ಕಾಶಿ ಜಿಲ್ಲೆಯಲ್ಲಿ ಇನ್ನೂ ಅನಿಷ್ಠ ಪದ್ದತಿ ತಾಂಡವಾಡುತ್ತಿವೆ. ಎಲ್ಲ ಮಕ್ಕಳಂತೆ ಆಟವಾಡಿ ನಲಿಯಬೇಕಾದ ಮಕ್ಕಳ ಬಾಲ್ಯವೇ ಕಸಿದುಕೊಳ್ಳುವಂತ ಸ್ಥಿತಿ ಬಂದಿದೆ. ಆಟವಾಡುವ ವಯಸ್ಸಿನಲ್ಲಿ ಮಕ್ಕಳಿಗೆ ಮದುವೆ ಮಾಡಲು ಪೋಷಕರು ಮುಂದಾಗುತ್ತಿರುವ ಆಘಾತಕಾರಿ ವಿಷಯ ಜಿಲ್ಲೆಯಲ್ಲಿ ಪತ್ತೆಯಾಗಿವೆ. ಜಾಗೃತಿ ಕಾರ್ಯಕ್ರಮಗಳ ನಡುವೆಯೂ ಜಿಲ್ಲೆಯಲ್ಲಿ ಲೈಂಗಿಕ ದೌರ್ಜ್ಯನ್ಯ, ಮತ್ತು ಬಾಲ್ಯ ವಿವಾಹ(Child Marriage) ದಂತಹ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಕಳೆದ ಐದು ವರ್ಷದಲ್ಲಿ 171 ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ತಡೆಯಲು ಸಫಲರಾಗಿದ್ದಾರೆ.ಇನ್ನು 5 ವರ್ಷದಲ್ಲಿ 115 ಮಕ್ಕಳ ಮೇಲೆ ದೌರ್ಜನ್ಯ ನಡೆದಿರುವುದರಿಂದ ಫೋಕ್ಸೋ ಪ್ರಕರಣಗಳು ದಾಖಲಾಗಿವೆ. 2022-23 ನೇ ಸಾಲಿನಲ್ಲಿ 31 ಪೋಕ್ಸೋ ಪ್ರಕರಣ, 47 ಬಾಲ್ಯ ವಿವಾಹಗಳನ್ನ ತಡೆದ ಪ್ರಕರಣಗಳು ದಾಖಲಾಗಿವೆ.

2023-24 ನೇ ಎಪ್ರೀಲ್ ತಿಂಗಳಲ್ಲಿ 8 ಪೋಕ್ಸೋ, 3 ಬಾಲ್ಯ ವಿವಾಹ ಪ್ರಕರಣ ಜರುಗಿವೆ. ಈ ರೀತಿ‌ ಘನಘೋರ ಅಪರಾಧ ಮಾಡೋರಿಗೆ ಶಿಕ್ಷೆ ವಿಧಿಸಲು ಬಾಲ್ಯ ವಿವಾಹ ನಿಷೇಧ ಕಾಯಿದೆ ಮತ್ತು ಪೋಕ್ಸೋ ಕಾಯಿದೆ ಜಾರಿಯಲ್ಲಿದೆ. ಆದರೂ ಸಹ ಇದಕ್ಕೆಲ್ಲ ಕ್ರಮಬದ್ಧ ಕಡಿವಾಣ ಬೀಳದೇ ಇರೋದು‌ ಪ್ರಕರಣಗಳ‌ ಸಂಖ್ಯೆ ಏರಿಕೆ ಆಗುವಂತೆ ಮಾಡಿದೆ.‌ ಆದ್ರು, ಕೂಡ ಇಲ್ಲಿನ ಅಧಿಕಾರಿಗಳು ಬಾಲ್ಯ ವಿವಾಹಗಳನ್ನು ತಡೆಯುತ್ತಿದ್ದೇವೆ ಎನ್ನುತ್ತಿದ್ದಾರೆ. ಇನ್ನು ಹುಡುಗ ಹುಡುಗಿಯರ‌ ನಡುವಿನ ಪ್ರೇಮಪಾಶವೇ ಬಹುತೇಕ ಪೋಕ್ಸೋ ಪ್ರಕರಣಗಳಿಗೆ ಕಾರಣ ಎಂಬುದು ತನಿಖೆಯಿಂದ ಬೆಳಕಿಗೆ‌ ಬಂದಿವೆ. ವಿವಾಹವಾದ ಬಾಲಕಿಯರ ಪೈಕಿ ಸರಾಸರಿ 2 ರಿಂದ 3 ಬಾಲಕಿಯರಿಗೆ ಹೆರಿಗೆ ಆಗಿವೆಯಂತೆ. ಇಂತಹ ಪ್ರಕರಣಗಳಲ್ಲಿ ಪಾಲಕರಿಗೆ ಬೇಡವಾದ ಶಿಶುಗಳನ್ನ ಕಾನೂನು ದತ್ತು ಮುಕ್ತ ನಿಯಮದಡಿ ಮತ್ತೊಬ್ಬರಿಗೆ ನೀಡಲಾಗುತ್ತಿದೆ ಎಂದು ಇಲಾಖೆಯ ಮೂಲಗಳು ತಿಳಿಸುತ್ತವೆ‌.

ಇದನ್ನೂ ಓದಿ:Raichur News: ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪದ್ದತಿ ಜೀವಂತ; ಅಪ್ರಾಪ್ತೆಗೆ ಮದ್ವೆ ಮಾಡಲು ಖತರ್ನಾಕ್ ಪ್ಲ್ಯಾನ್ ‌ಮಾಡಿದ ಕುಟುಂಬಸ್ಥರು

ಪಾಲಕರಲ್ಲಿ ಈ ಬಗ್ಗೆ ಅರಿವಿನ ಕೊರತೆ, ಪಿಡಿಓಗಳಿಂದ ಕಾವಲು ಸಮಿತಿ ತಡೆಯಲು ವೈಫಲ್ಯ, ಗ್ರಾಮ ಪಂಚಾಯತ ಹಾಗೂ ತಾಲೂಕು ಪಂಚಾಯತ ಮಟ್ಟದಲ್ಲಿ ಬಾಲ್ಯ ವಿವಾಹ‌ ತಡೆಯುವಲ್ಲಿ ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ. ಇನ್ನು ಜಿಲ್ಲಾಡಳಿತ ಹಾಗೂ ಮಕ್ಕಳ ರಕ್ಷಣಾ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯ ಸಭೆ ನಡೆಸಿ, ಬಾಲ್ಯ ವಿವಾಹಗಳನ್ನು ತಡೆಯುತ್ತಿದ್ದೇವೆ ಅಂತಾರೆ ಜಿಲ್ಲಾಧಿಕಾರಿಗಳು. ಇನ್ನು ಇಂತಹ ಪ್ರಕರಣ ತಡೆಗಟ್ಟಲು 1098 ಸಹಾಯವಾಣಿ ಪರಿಣಾಮಕಾರಿ ಆದರೂ ಯಾವುದೇ ಪ್ರಕರಣ ದಾಖಲಾಗುತ್ತಿಲ್ಲ. ಅದೇನೆ ಇರಲಿ, ಬೆಳೆಯುವ ಸಿರಿಯನ್ನ ಮೊಳೆಕೆಯಲ್ಲೇ ಚಿವುಟಿದ ಹಾಗೆ ಸ್ವತಃ ತಂದೆ ತಾಯಿ‌ ಪಾಲಕರು ತಮ್ಮ ಮಕ್ಕಳ ಭವಿಷ್ಯವನ್ನ ಬಲಿ‌ ಕೊಡೋದನ್ನ ನಿಲ್ಲಿಸಬೇಕಾಗಿದೆ. ಅಧಿಕಾರಿ ವರ್ಗವೂ ಸಹ ಈ ಬಗ್ಗೆ ಎಚ್ಚೆತ್ತು, ಶಿಕ್ಷೆ ಪ್ರಮಾಣವನ್ನ ಬದಲು ಮಾಡಿ, ಸಮಾಜದಲ್ಲಿ ಮತ್ತಷ್ಟು ಜಾಗೃತಿ ಮೂಡಿಸುವ ಕೆಲಸವನ್ನ ಮಾಡಬೇಕಿದೆ. ಅಂದಾಗ ಮಾತ್ರ ಇಂಥಹ ಪ್ರಕರಣಗಳಿಗೆ ಕೊನೆ ಹಾಡಲು ಸಾಧ್ಯ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ