ಗದಗ: ಚುನಾವಣೆ ಮಹಾಸಮರದಲ್ಲಿ ಹಣ, ಹೆಂಡದ ಜೊತೆ ಈ ಬಾರಿ ಗಾಂಜಾ ಘಾಟು

|

Updated on: Mar 27, 2023 | 11:27 AM

ಚುನಾವಣೆಯಲ್ಲಿ ಹಣ, ಹೆಂಡದ ಹೊಳೆ ಹರಿಯೋದು ಸಾಮಾನ್ಯ. ಆದರೆ ಈ ಬಾರಿ ಆ ಜಿಲ್ಲೆಯಲ್ಲಿ ಗಾಂಜಾ ಗಮ್ಮತ್ತು ಬಲು ಜೋರಾಗಿದ್ದು, ಚುನಾವಣೆ ಗಾಂಜಾ ಮತ್ತಿನಲ್ಲಿ ತೇಲಾಡಲಿದೆಯಾ ಎನ್ನುವ ಚರ್ಚೆ ಬಲು ಜೋರಾಗಿದೆ. ಈಗಾಗಲೇ ಗಾಂಜಾ ಗಿರಾಕಿಗಳನ್ನು ಗದಗ ಪೊಲೀಸರು ಬೇಟೆಯಾಡಿದ್ದು, ಲಕ್ಷಾಂತರ ಮೌಲ್ಯದ ಗಾಂಜಾ ಸಾಗಾಟವನ್ನ ಸೀಜ್ ಮಾಡಿದ್ದೇವೆ ಎನ್ನುತ್ತಿದ್ದಾರೆ ಪೊಲೀಸರು.

ಗದಗ: ಚುನಾವಣೆ ಮಹಾಸಮರದಲ್ಲಿ ಹಣ, ಹೆಂಡದ ಜೊತೆ ಈ ಬಾರಿ ಗಾಂಜಾ ಘಾಟು
ಗದಗ ಎಸ್ಪಿ ಬಿ ಎಸ್ ನೇಮಗೌಡ
Follow us on

ಗದಗ: ವಿಧಾನಸಭೆ ರಣರಂಗಕ್ಕೆ ಇನ್ನೇನೂ ದಿನಗಣನೆ ಶುರುವಾಗಿದೆ. ಇನ್ನೊಂದು ವಾರದೊಳಗೆ ಚುನಾವಣೆ ಘೋಷಣೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಈಗಾಗಲೇ ರಾಜಕೀಯ ಪಕ್ಷಗಳು ರಣಾಂಗಣದಲ್ಲಿ ಹೋರಾಟಕ್ಕೆ ಸಜ್ಜಾಗಿದ್ದು, ನಾನಾ ಕಸರತ್ತು ನಡೆಸಿದ್ದಾರೆ. ರಾಜ್ಯದಲ್ಲಿ ಮತದಾರರ ಮನವೊಲಿಸಲು ನಾನಾ ಗಿಫ್ಟ್​ಗಳನ್ನು ನೀಡುವ ಮೂಲಕ ಕಸರತ್ತು ಮಾಡುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಮಾತ್ರ ಹಣ, ಮದ್ಯದ ಜೊತೆ ಇದೀಗ ಗಾಂಜಾ ಘಾಟು ಬಲು ಜೋರಾಗಿದೆ. ಹೌದು ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆ ಗಾಂಜಾ ಅಮಲಿನಲ್ಲಿ ತೇಲಾಡುತ್ತಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಈಗಾಗಲೇ ಚುನಾವಣೆ ಅಕ್ರಮ ತಡೆಯಲು ಜಿಲ್ಲಾಡಳಿತ ಜಿಲ್ಲೆಯಾದ್ಯಂತ 17 ಚೆಕ್ ಪೋಸ್ಟ್ ಆರಂಭ ಮಾಡಿ ಹದ್ದಿನ ಕಣ್ಣು ಇಟ್ಟಿದೆ. ಈ ಮೂಲಕ ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ, ನಗದು, ಲಕ್ಷಾಂತರ ಮೌಲ್ಯದ ಸೀರೆಗಳನ್ನ ಸೀಜ್ ಮಾಡಲಾಗಿದೆ. ಈ ಮೂಲಕ ಅಕ್ರಮಕ್ಕೆ ಬ್ರೇಕ್ ಹಾಕಲು ಕಠಿಣ ಕ್ರಮ ಕೈಗೊಂಡಿದ್ದಾರೆ.

ಅಕ್ರಮ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ

ಆದರೂ ಈ ಬಾರಿ ಜಿಲ್ಲೆಯಲ್ಲಿ ಗಾಂಜಾ ಘಾಟು ಬಲುಜೋರಾಗಿದೆ. ಹೌದು ಹೇಗಾದರೂ ಮಾಡಿ ಯುವ ಮತದಾರರನ್ನು ಬಲೆಗೆ ಹಾಕಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಗಾಂಜಾ ಆಮಿಷವೊಡ್ಡುತ್ತಿದ್ದಾರಾ ಎನ್ನುವ ಅನುಮಾನ ಮೂಡಿದೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲೆಯ ಪೊಲೀಸರು ಚೆಕ್ ಪೋಸ್ಟ್ ಸೇರಿದಂತೆ ವಿವಿಧೆಡೆ 2ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ಸೀಜ್ ಮಾಡುವ ಮೂಲಕ ಈ ಎಲ್ಲ ಅಕ್ರಮಕ್ಕೆ ಬ್ರೇಕ್ ಹಾಕಲಾಗಿದೆ ಎಂದು ಎಸ್ಪಿ ಬಿ ಎಸ್ ನೇಮಗೌಡ ಅವರು ಹೇಳಿದ್ದಾರೆ.

ಇದನ್ನೂ ಓದಿ:ಗಾಂಜಾ ಗುಂಗಿನಲ್ಲೇ ತೇಲಾಡುತ್ತಿರುವ ನೂರಾರು ಸಾಧುಗಳು, ಭಕ್ತಿಯಿಂದ ಸಾಧುಗಳಿಗೆ ಗಾಂಜಾ ಹಂಚುತ್ತಿರುವ ಭಕ್ತರು, ಅದರ ಝಲಕ್​ ಇಲ್ಲಿದೆ ನೋಡಿ

ಚೆಕ್ ಪೋಸ್ಟ್​ನಲ್ಲಿ ಲಕ್ಷ ಲಕ್ಷ ಮೌಲ್ಯದ ಗಾಂಜಾ ಸೀಜ್

ಜಿಲ್ಲೆಯ ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಎರಡು ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. ಗದಗ ಶಹರ, ಬೆಟಗೇರಿ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಪ್ರಕರಣ ಮೂವರು ಸೇರಿದಂತೆ 5 ಜನ ಗಾಂಜಾ ಗಿರಾಕಿಗಳನ್ನು ಅರೆಸ್ಟ್ ಮಾಡಿದ್ದಾರೆ. ಒಟ್ಟು 2ಲಕ್ಷ 2ಸಾವಿರ ಮೌಲ್ಯದ 2.829 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಗದಗ ಜಿಲ್ಲೆಯಲ್ಲಿ ಚುನಾವಣೆ ಕಣ ರಂಗೇರಿದೆ. ಹಣ, ಮದ್ಯ, ಗಾಂಜಾ ಘಾಟು ಜೋರಾಗಿದೆ. ಚುನಾವಣೆ ಮುಗಿಯುವರೆಗೆ ಏನೇನಾಗುತ್ತೆ ಎಂಬುದನ್ನ ಕಾದು ನೋಡಬೇಕಿದೆ.

ಗೂಂಡಾ ಕಾಯ್ದೆಯಡಿ 20ಕ್ಕೂ ಅಧಿಕ ಗೂಂಡಾಗಳ ಗಡಿಪಾರು

ಇನ್ನು ಜಿಲ್ಲೆಯಾದ್ಯಂತ ಶಾಂತಿ, ಸುವ್ಯವಸ್ಥಿತ ಚುನಾವಣೆಗೆ ಜಿಲ್ಲಾಧಿಕಾರಿ ವೈಶಾಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ರೌಡಿ ಶೀಟರ್ ಹಾಗೂ ಗೂಂಡಾಗಳನ್ನು ಹದ್ದುಬಸ್ತಿನಲ್ಲಿಡಲು ಪೊಲೀಸ್ ಇಲಾಖೆ ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಂಡಿದೆ. ಗದಗ, ಲಕ್ಷ್ಮೇಶ್ವರ, ನರಗುಂದ, ಮುಂಡರಗಿ ಸೇರಿ ಜಿಲ್ಲೆಯಲ್ಲಿ ಗೂಂಡಾ ಕಾಯ್ದೆಯಡಿ 20 ಜನರನ್ನ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಈಗಾಗಲೇ ಈ ಆದೇಶ ಜಾರಿಯಾಗಿದೆ. ಹೆಚ್ಚಿನ ಮಾಹಿತಿ ನೀಡಲು ಕಾನೂನು ಅಡ್ಡಿದೆ. ಹೆಚ್ಚೆನೂ ಹೇಳಲ್ಲ. ಶಾಂತಿ, ಸುವ್ಯವಸ್ಥೆ, ಪಾರದರ್ಶಕ ಚುನಾವಣೆಗೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಲ್ಲವೂ ತೆಗೆದುಕೊಳ್ಳಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ.

ವರದಿ: ಸಂಜೀವ ಪಾಂಡ್ರೆ ಟಿವಿ9 ಗದಗ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಲ್ಲಿ ಕ್ಲಿಕ್ ಮಾಡಿ