ಡಿ.ಜೆ.ಹಳ್ಳಿ ಪೊಲೀಸರ ಭರ್ಜರಿ ಕಾರ್ಯಚರಣೆ, ಅಜ್ಜು, ನವಾಜ್ ಅರೆಸ್ಟ್,: 2.47 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ
ಸಿಲಿಕಾನ್ ಸಿಟಿಯಲ್ಲಿ ಡ್ರಗ್ಸ್ ಮಾಫಿಯಾದ ಮೇಲೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಇಬ್ಬರು ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.
ಬೆಂಗಳೂರು(ಮಾ.05): ರಾಜಧಾನಿಯಲ್ಲಿನ ಡ್ರಗ್ಸ್ ಮಾಫಿಯಾದ ಮೇಲೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಇಬ್ಬರು ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. 2.47 ಕೋಟಿ ರೂ. ಮೌಲ್ಯದ ನಾಲ್ಕು ಕ್ವಿಂಟಾಲ್ ಗಾಂಜಾ ಜಪ್ತಿ ಮಾಡಿದ್ದಾರೆ. ಲಿಂಗರಾಜಪುರದ ಅಬ್ದುಲ್ ರೆಹಮಾನ್ ಅಲಿಯಾಸ್ ಅಜ್ಜು ಹಾಗೂ ನವಾಜ್ ಬಂಧಿತರಾಗಿದ್ದು, ಆರೋಪಿಗಳಿಂದ 2.47 ಕೋಟಿ ಮೌಲ್ಯದ 410 ಕೇಜಿ ಗಾಂಜಾ ಜಪ್ತಿ ಮಾಡಲಾಗಿದೆ. ಈ ವೇಳೆ ತಪ್ಪಿಸಿಕೊಂಡಿರುವ ಪ್ರಮುಖ ಗಾಂಜಾ ಪೂರೈಕೆದಾರರಾದ ಆಂಧ್ರಪ್ರದೇಶ ಮೂಲದ ಫೈರೋಜ್ ಖಾನ್ ಹಾಗೂ ಪ್ರಸಾದ್ ಪತ್ತೆಗೆ ಬಲೆ ಬೀಸಿದ್ದಾರೆ.
ಇತ್ತೀಚೆಗೆ ಟ್ಯಾನರಿ ರಸ್ತೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ನವಾಜ್‌ನನ್ನು ಬಂಧಿಸಿ .3 ಲಕ್ಷ ಮೌಲ್ಯದ 3 ಕೇಜಿ ಗಾಂಜಾ ಜಪ್ತಿ ಮಾಡಲಾಯತು. ವಿಚಾರಣೆ ವೇಳೆ ಆತ ನೀಡಿದ ಸುಳಿವು ಆಧರಿಸಿ ಮತ್ತೆ ಕಾರ್ಯಾಚರಣೆ ನಡೆಸಿ ಮತ್ತೊಬ್ಬನನ್ನು ಬಂಧಿಸಿ .2.43 ಕೋಟಿ ಮೌಲ್ಯದ ಗಾಂಜಾವನ್ನು ಡಿ.ಜೆ.ಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ಆರ್.ಪ್ರಕಾಶ್ ಹಾಗೂ ಸಬ್ ಇನ್‌ಸ್ಪೆಕ್ಟರ್ ನಾಗದೇವ್ ತಂಡ ಜಪ್ತಿ ಮಾಡಿದೆ ಎಂದು ಪೂರ್ವ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್.ಚಂದ್ರಶೇಖರ್ ತಿಳಿಸಿದ್ದಾರೆ.
ಅಬ್ದುಲ್ ಹಾಗೂ ನವಾಜ್ ವೃತ್ತಿಪರ ಪೆಡ್ಲರ್‌ಗಳಾಗಿದ್ದು, ಅಬ್ದುಲ್ ರೆಹಮಾನ್ ವಿರುದ್ಧ ಬಾಣಸವಾಡಿ, ವೈಯಾಲಿಕಾವಲ್ ಹಾಗೂ ಡಿ.ಜೆ.ಹಳ್ಳಿ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಇಬ್ಬರಿಗೆ ಆಂಧ್ರಪ್ರದೇಶದ ಕುಖ್ಯಾತ ಗಾಂಜಾ ಪೂರೈಕೆದಾರರಾದ ಫೈರೋಜ್ ಖಾನ್ ಹಾಗೂ ಪ್ರಸಾದ್ ಜತೆ ಸಂಪರ್ಕವಿತ್ತು. ಈ ಬಗ್ಗೆ ಮಾಹಿತಿ ಪಡೆದು ನವಾಜ್‌ನನ್ನು ಬಂಧಿಸಲಾಯಿತು. ನಂತರ ಆತನ ನೀಡಿದ ಸುಳಿವಿನಿಂದ ರೆಹಮಾನ್‌ನನ್ನು ಬಂಧಿಸಲಾಯಿತು. ಈ ವೇಳೆ ಫೈರೋಜ್ ಹಾಗೂ ಪ್ರಸಾದ್ ತಪ್ಪಿಸಿಕೊಂಡಿದ್ದಾರೆ.
ಆಂಧ್ರ ಪೆಡ್ಲರ್‌ಗಳು ರೈಲು, ಬಸ್ ಹಾಗೂ ಕಾರುಗಳ ಮೂಲಕ ಬೆಂಗಳೂರಿಗೆ ಗಾಂಜಾ ಸಾಗಿಸಿ ಬಳಿಕ ಸಬ್ ಪೆಡ್ಲರ್‌ಗಳ ಮುಖಾಂತರ ಗ್ರಾಹಕರಿಗೆ ತಲುಪಿಸುತ್ತಿದ್ದರು. ಆಂಧ್ರಪ್ರದೇಶದಲ್ಲಿ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ನಗರದಲ್ಲಿ ದುಬಾರಿ ಬೆಲೆ ಮಾರುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ನಗರದಲ್ಲಿ ಚಿಕ್ಕ ಚಿಕ್ಕ ಪೊಟ್ಟಣಗಳಲ್ಲಿ ತುಂಬಿ ಗ್ರಾಹಕರಿಗೆ ಅಬ್ದುಲ್ ಹಾಗೂ ನವಾಜ್ ಗಾಂಜಾ ಮಾರುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.