Tv9 Impact: ಟಿವಿ9 ವರದಿ ಬಳಿಕ ಬಗೆಹರಿದ ಸಮಸ್ಯೆ, ಬಾಣಂತಿ, ಮಗು ಮನೆಗೆ ಸೇಫಾಗಿ ಹೋಗಲು ನಗುಮಗು ಯೋಜನೆ ಮೂಲಕ ವಾಹನ ವ್ಯವಸ್ಥೆ

| Updated By: ಆಯೇಷಾ ಬಾನು

Updated on: Oct 21, 2021 | 9:12 AM

ಆ ಆಸ್ಪತ್ರೆಯ ಹೆರಿಗೆ ವಾರ್ಡ್ನಲ್ಲಿ ಬಾಣಂತಿಯರು ಹಾಗೂ ಮಕ್ಕಳು ಗೋಳಾಡ್ತಿದ್ರು. ಇನ್ನೂ ಡಿಸ್ಚಾರ್ಜ್ ಮಾಡಿದರೂ ಮನೆಗೆ ಹೋಗಲು ನರಳಾಡುವ ಸ್ಥಿತಿ ಇತ್ತು. ಈ ಬಗ್ಗೆ ಟಿವಿ9 ವಿಸ್ತೃತ ವರದಿ ಪ್ರಸಾರ ಮಾಡಿತ್ತು. ತಕ್ಷಣ ಎಚ್ಚೆತ್ತುಕೊಂಡ ಆಸ್ಪತ್ರೆಯ ಆಡಳಿತ ಮಂಡಳಿ ವಾಹನ ಸಮಸ್ಯೆಗೆ ಪರಿಹಾರ ಕಂಡುಕೊಂಡಿದೆ.

Tv9 Impact: ಟಿವಿ9 ವರದಿ ಬಳಿಕ ಬಗೆಹರಿದ ಸಮಸ್ಯೆ, ಬಾಣಂತಿ, ಮಗು ಮನೆಗೆ ಸೇಫಾಗಿ ಹೋಗಲು ನಗುಮಗು ಯೋಜನೆ ಮೂಲಕ ವಾಹನ ವ್ಯವಸ್ಥೆ
Tv9 Impact: ಟಿವಿ9 ವರದಿ ಬಳಿಕ ಬಗೆಹರಿದ ಸಮಸ್ಯೆ, ಬಾಣಂತಿ, ಮಗು ಮನೆಗೆ ಸೇಫಾಗಿ ಹೋಗಲು ನಗುಮಗು ಯೋಜನೆ ಮೂಲಕ ವಾಹನ ವ್ಯವಸ್ಥೆ
Follow us on

ಗದಗ: ಜಿಲ್ಲೆಯ ಜಿಮ್ಸ್ ಆಡಳಿತವನ್ನ ಪ್ರಶ್ನೆ ಮಾಡೋರೆ ಇಲ್ವಾ ಅನ್ನೋ ಪ್ರಶ್ನೆ ಎಲ್ಲರನ್ನ ಕಾಡ್ತಿತ್ತು. ಯಾಕಂದ್ರೆ ‘ಜಿಮ್ಸ್’ ಆಸ್ಪತ್ರೆ ರೋಗಿಗಳ ಗೋಳಾಟಕ್ಕೆ ಕೊನೆಯೇ ಇಲ್ಲವಾಗಿತ್ತು. ಪ್ರತಿನಿತ್ಯ ಒಂದಿಲ್ಲೊಂದು ಯಡವಟ್ಟಿನಿಂದಾಗಿ ಸದಾ ಸುದ್ದಿ ಮಾಡುತ್ತಿದೆ ಜಿಮ್ಸ್. ಇದೇ ರೀತಿ ಜಿಮ್ಸ್ ಮಾಡಿಕೊಂಡ ಎಡವಟ್ಟಿನ ಬಗ್ಗೆ ಟಿವಿ9 ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಹೀಗೆ ಟಿವಿ9ನಲ್ಲಿ ವರದಿ ಪ್ರಸಾರವಾದ ಬಳಿಕ ಕಡೆಗೂ ‘ಜಿಮ್ಸ್’ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.

ಟಿವಿ9 ವರದಿ ಬಳಿಕ ಬಗೆಹರಿದ ಸಮಸ್ಯೆ
ಅಂದಹಾಗೆ ಬಾಣಂತಿ, ಮಗು ಮನೆಗೆ ಸೇಫಾಗಿ ಹೋಗಲಿ ಅಂತ ನ್ಯಾಷನಲ್ ಹೆಲ್ತ್ ಮಷಿನ್ ಯೋಜನೆಯಡಿ ನಗುಮಗು ಯೋಜನೆ ಮೂಲಕ ವಾಹನ ವ್ಯವಸ್ಥೆ ಮಾಡ್ಲಾಗಿತ್ತು. ಆದ್ರೆ ಗದಗದಲ್ಲಿ ಆರೋಗ್ಯ ಇಲಾಖೆ ಮತ್ತು ಜಿಮ್ಸ್ ಜಂಗಿ ಕುಸ್ತಿಯಲ್ಲಿ ಯೋಜನೆ ಹಳ್ಳಹಿಡಿದಿತ್ತು. ವಾಹನಗಳು ಗ್ಯಾರೇಜ್ ಸೇರಿ ತಿಂಗಳಾದ್ರು ಡೋಂಟ್ ಕೇರ್ ಅಂತಿದ್ರು ಅಧಿಕಾರಿಗಳು. ಆರೋಗ್ಯ ಇಲಾಖೆ, ಜಿಮ್ಸ್ ಆಡಳಿತದ ಕಚ್ಚಾಟದಲ್ಲಿ ಬಾಣಂತಿಯರು, ಶಿಶುಗಳ ಪರದಾಟದ ಕುರಿತು ಟಿವಿ9 ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಸೂಕ್ತ ನಿರ್ವಹಣೆ ಇಲ್ದೇ ನಗುಮಗು ವಾಹನಗಳು ಗುಜರಿಗೆ ಸೇರಿದ್ದು, ಬಡ ಜನರ ಪಾಲಿಗೆ ಈ ಸೇವೆ ಮರಿಚೀಕೆಯಾಗಿತ್ತು.

ಬಾಣಂತಿ, ಮಗು ಮನೆಗೆ ಸೇಫಾಗಿ ಹೋಗಲಿ ಅಂತ ನ್ಯಾಷನಲ್ ಹೆಲ್ತ್ ಮಷಿನ್ ಯೋಜನೆಯಡಿ ನಗುಮಗು ಯೋಜನೆ ಮೂಲಕ ವಾಹನ ವ್ಯವಸ್ಥೆ

ಬಾಣಂತಿ ಕುಟುಂಬ ನಗುಮಗು ಸಿಬ್ಬಂದಿಗೆ ಫೋನ್ ಮಾಡಿದ್ರು ಕೂಡ ವಾಹನ ಬರುತ್ತಿರಲಿಲ್ಲ. ಬರೋಬ್ಬರಿ 1 ತಿಂಗಳಿಂದ ಆಸ್ಪತ್ರೆಯಲ್ಲಿ ಬಾಣಂತಿಯರು ಗೋಳಾಡುತ್ತಿದ್ರು. ಆದರೆ ಟಿವಿ9 ಸುದ್ದಿ ಪ್ರಸಾರ ಮಾಡಿದ ಬಳಿಕ ‘ಜಿಮ್ಸ್’ ಆಡಳಿತಕ್ಕೆ ಸರ್ಕಾರದ ಹಿರಿಯ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ರು. ಬಳಿಕ ಜಿಮ್ಸ್ ಆಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಪರ್ಯಾಯ ವ್ಯವಸ್ಥೆಯನ್ನ ಕಲ್ಪಿಸಿದ್ದಾರೆ.ಸದ್ಯ ನಗುಮಗು ವಾಹನ ರಿಪೇರಿ ಆಗೋವರೆಗೂ 2 ವಾಹನಗಳನ್ನ ಪ್ರತ್ಯೇಕವಾಗಿ ಹೆರಿಗೆ ಆಸ್ಪತ್ರೆಗೆ ರಿಸರ್ವ್ ಮಾಡಲಾಗಿದೆ.

ಅಂದಹಾಗೆ ಗದಗ ತಾಲೂಕಿನ ಮದಗಾನೂರಿನ ಬಾಣಂತಿಯನ್ನ ವೈದ್ಯರು ಡಿಸ್ಚಾರ್ಜ್ ಮಾಡಿದ್ರು. ಆದ್ರೆ ತಮ್ಮ ಊರಿಗೆ ಹೋಗಲು ಹಣವಿಲ್ಲದೇ ಬಡ ಕುಟುಂಬ 3-4 ಗಂಟೆಯಾದ್ರೂ ಒದ್ದಾಡ್ತಾ ಇತ್ತು. 100 ರೂಪಾಯಿ ಮಾತ್ರ ಇದೆ ಅಂತಾ ಬಾಣಂತಿಯ ಕುಟುಂಬ ಗೋಳಾಡಿತ್ತು. ಟಿವಿ9ನಲ್ಲಿ ಪ್ರಸಾರವಾದ ನಂತ್ರ ನಗುಮಗು ಸೇವೆ ಮತ್ತೊಮ್ಮೆ ಆರಂಭವಾಗಿದೆ. ಇದರಿಂದ ಬಾಣಂತಿಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಹಾಗೇ ಟಿವಿ9 ವರದಿಯ ಕುರಿತು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಟ್ನಲ್ಲಿ ಬಡ ಜನರಿಗಾಗಿ ಸರ್ಕಾರ ಕೋಟಿಕೋಟಿ ಅನುದಾನ ನೀಡುತ್ತಿದೆ. ಆದ್ರೆ ಈ ಸವಲತ್ತು ಪಡೆಯೋದಕ್ಕೆ ಬಡವರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗ್ತಿದೆ. ಈಗಲಾದ್ರೂ ಸಂಬಂಧಪಟ್ಟವರು ಎಚ್ಚೆತ್ತು ಸರ್ಕಾರಿ ಆಸ್ಪತ್ರೆಗಳ ಸಮಸ್ಯೆ ಬಗೆಹರಿಸಬೇಕಿದೆ. ಈ ಮೂಲಕ ಬಡವರಿಗೆ ರಿಲೀಫ್ ನೀಡಬೇಕಿದೆ.

ವರದಿ:ಸಂಜೀವ್

ಇದನ್ನೂ ಓದಿ: Monkey Trouble: ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ‘ಮಂಗ’ಗಳದ್ದೇ ಕಾರ್ಬಾರ್, ವಾನರರ ಉಪಟಳಕ್ಕೆ ರೋಗಿಗಳ ಪರದಾಟ

Published On - 7:39 am, Thu, 21 October 21