ಕಳಸಾಪುರ: ಮನೆಯ ಮುದ್ದಿನ ಮಗ ಬೈಕ್ ಆಕ್ಸಿಡೆಂಟ್​​ನಲ್ಲಿ ಮೃತಪಟ್ಟನಾ ಅಥವಾ ಕೊಲೆಯಾದನಾ?

| Updated By: ಸಾಧು ಶ್ರೀನಾಥ್​

Updated on: Apr 05, 2023 | 12:08 PM

ಸುನಿಲ್ ಚಲವಾದಿಯ ತಲೆಗೆ ರಾಡ್ ನಿಂದ ಬಲವಾಗಿ ಹೊಡೆದಿದ್ದು ಕೊಲೆ ಮಾಡಿ, ನಂತ್ರ ಆತನ ಶವವನ್ನು ರಸ್ತೆಯಲ್ಲಿ ಹಾಕಿದ್ದಾರೆ. ಹೀಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಸುನೀಲನ ಕುಟುಂಬಸ್ಥರಲ್ಲಿ ಹಾಗೂ ಗ್ರಾಮದಲ್ಲಿ ಯಾರೂ ವೈರಿಗಳು ಇಲ್ವಂತೆ.

ಕಳಸಾಪುರ: ಮನೆಯ ಮುದ್ದಿನ ಮಗ ಬೈಕ್ ಆಕ್ಸಿಡೆಂಟ್​​ನಲ್ಲಿ ಮೃತಪಟ್ಟನಾ ಅಥವಾ ಕೊಲೆಯಾದನಾ?
ಕಳಸಾಪುರ: ಮನೆಯ ಮುದ್ದಿನ ಮಗ ಬೈಕ್ ಆಕ್ಸಿಡೆಂಟ್​​ನಲ್ಲಿ ಮೃತ
Follow us on

ಆತ ಆ ಮನೆಯ ಮುದ್ದಿನ ಮಗ, ಇನ್ನೆರಡು ವರ್ಷದಲ್ಲಿ ಮದುವೆ ಮಾಡಬೇಕು ಅಂತಾ ಹತ್ತಾರು ಕನಸು ಕಂಡಿದ್ರು‌. ಆತನು ಕೂಡಾ ಇಡೀ ಕುಟುಂಬದ ಜವಾಬ್ದಾರಿ ತೆಗೆದುಕೊಂಡು ಜೀವನ ನಡೆಸುತ್ತಿದ್ದ. ಕುಟುಂಬ ಹಾಗೂ ಗ್ರಾಮದಲ್ಲಿ ಒಳ್ಳೆಯ ಯುವಕ (youth) ಅಂತಾ ಹೆಸರು ಮಾಡಿದ್ದ. ಆದ್ರೆ, ಈಗ ಆತನ ಹೆಣ ಬಿದ್ದಿದೆ. ಹೌದು ಅಪಘಾತದಿಂದ ಮೃತಪಟ್ಟ ರೀತಿಯಲ್ಲಿ ಶವ ಪತ್ತೆಯಾಗಿದೆ. ಆದ್ರೆ ಇದು ಅಪಘಾತ ಅಲ್ಲ, ಪಕ್ಕಾ ಕೊಲೆ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ಪೊಲೀಸರು ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮೇಲ್ನೋಟಕ್ಕೆ ಬೈಕ್ ಆಕ್ಸಿಡೆಂಟ್ (accident), ನಡೆದಿರುವುದು ಕೊಲೆ ಅಂತಾ ಆರೋಪಿಸಲಾಗಿದೆ. ಹಾಗಾದರೆ ಹಂತಕರು ಆ ಯವಕನ ಕೊಲೆ ಮಾಡಿ ಅಪಘಾತದ ಕಥೆ ಕಟ್ಟಿದ್ದಾರಾ..!? ಹದಿಹರೆಯದ ಮಗನನ್ನು ಕಳೆದುಕೊಂಡು ಕಣ್ಣೀರು ಹಾಕ್ತಾಯಿರೋ ಹೆತ್ತವರ ಗೋಳಂತೂ ಕರುಳುಕಿತ್ತುಬರುವಂತಿದೆ! ಈ ಮಧ್ಯೆ, ತಮ್ಮನನ್ನು ಕೊಲೆ ಮಾಡಿದ ಹಂತಕರಿಗೆ ಶಿಕ್ಷೆಯಾಗಬೇಕು ಅಂತಾ ಸಹೋದರಿ ಒತ್ತಾಯ ಮಾಡುತ್ತಿದ್ದರೆ, ಕೊಲೆ ಮಾಡಿ ಅಪಘಾತದ ಕಥೆ ಕಟ್ಟಿದವರಿಗೆ ಶಿಕ್ಷೆಯಾಗಬೇಕು ಅಂತಾ ಗ್ರಾಮಸ್ಥರು ಸಹ ಆಗ್ರಹಿಸುತ್ತಿದ್ದಾರೆ. ಈ ಎಲ್ಲಾ ದೃಶ್ಯಗಳು ಕಂಡಿದ್ದು, ಗದಗ (gadag) ತಾಲೂಕಿನ ಕಳಸಾಪುರ ಗ್ರಾಮದಲ್ಲಿ. ಇನ್ನು ಗದಗ ಗ್ರಾಮೀಣ ಪೊಲೀಸರು (gadag rural police) ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಅಂದಹಾಗೇ ಕಳಸಾಪುರ ಗ್ರಾಮದ ನಿವಾಸಿಯಾದ ಸುನೀಲ್ ಚಲವಾದಿ ಭೀಕರ ಅಪಘಾತವಾಗಿ ಮೃತ ಪಟ್ಟಿದ್ದಾನೆ. ಮೃತ ಸುನಿಲ್ ಟೈಲ್ಸ್ ಕೆಲಸ ಮಾಡಿಕೊಂಡು, ತನ್ನ ಇಡೀ ಕುಟುಂಬವನ್ನು ಸಲುಹುತ್ತಿದ್ದ. ಹಾಗೇಯೇ ಏಪ್ರಿಲ್ 01 ರಂದು ಆಸ್ಪತ್ರೆಗೆ ಹೋಗುತ್ತೇನೆ ಅಂತಾ ಹೇಳಿ ಹೋದವರನು ವಾಪಸ್ಸು ಬಂದಿದ್ದು, ಹೆಣವಾಗಿ. ಹೌದು ಗದಗ ತಾಲೂಕಿನ ಅಡಿವಿಸೋಮಾಪುರ ಗ್ರಾಮದ ಬಳಿ, ಹೆದ್ದಾರಿಯಲ್ಲಿ ಬೈಕ್ ಅಪಘಾತವಾಗಿದ್ದು, ಸುನೀಲ್ ಚಲವಾದಿ ಸಾವನ್ನಪ್ಪಿದ್ದಾನೆ ಎಂದು ಕುಟುಂಬಸ್ಥರಿಗೆ ಮಾಹಿತಿ ಸಿಕ್ಕಿತ್ತು. ಕಣ್ಣೀರು ಹಾಕುತ್ತಾ ಶವವನ್ನು ನೋಡಿದಾಗ ಕುಟುಂಬಸ್ಥರಿಗೆ ಇದು ಅಪಘಾತವಲ್ಲ, ಪಕ್ಕಾ ಕೊಲೆಯಾಗಿದೆ ಅಂತಾ ಗೊತ್ತಾಗಿದೆ. ಸಾವನ್ನಪ್ಪಿದ್ದ ಸುನೀಲ್ ಚಲವಾದಿ ಸಹೋದರ ನಾಗಪ್ಪ ಚಲವಾದಿ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ಹಂತಕರನ್ನು ಪತ್ತೆ ಮಾಡಿ ನ್ಯಾಯ ಕೊಡಿಸಿ ಅಂತಾ ಹೆತ್ತ ತಾಯಿ ಗಂಗವ್ವ ಒತ್ತಾಯ ಮಾಡ್ತಾಯಿದ್ದಾರೆ.

ಇನ್ನು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಸುನೀಲ್ ಕುಟುಂಬಸ್ಥರಲ್ಲಿ ಹಾಗೂ ಗ್ರಾಮದಲ್ಲಿ ಯಾರೂ ವೈರಿಗಳು ಇಲ್ವಂತೆ. ಆದ್ರೆ, ಸುನಿಲ್ ಚಲವಾದಿ ಕೊಲೆಗೆ ಕಾರಣ ಮಾತ್ರ ಗೊತ್ತಾಗುತ್ತಿಲ್ಲ ಅಂತಾರೆ ಕುಟುಂಬಸ್ಥರು. ಸುನಿಲ್ ಚಲವಾದಿಯ ತಲೆಗೆ ರಾಡ್ ನಿಂದ ಬಲವಾಗಿ ಹೊಡೆದಿದ್ದು ಕೊಲೆ ಮಾಡಿ, ನಂತ್ರ ಆತನ ಶವವನ್ನು ರಸ್ತೆಯಲ್ಲಿ ಹಾಕಿದ್ದಾರೆ.

ಆದ್ರೆ ಅಪಘಾತವಾದರೆ ಕೈ, ಕಾಲುಗಳಿಗೆ ಗಾಯಗಳಾದ ಗುರುತುಗಳು ಇರ್ತಾವೆ. ಆದರೆ ಸುನೀಲ್ ದೇಹದಲ್ಲಿ ಯಾವ ಗುರುತುಗಳೂ ಇಲ್ವಂತೆ. ಆತನನ್ನು ಪಕ್ಕಾ ಜಮೀನಿನಲ್ಲಿ ಕೊಲೆ ಮಾಡಿದ್ದು, ಆತನ ದೇಹವನ್ನು ನೋಡಿದ್ರೆ ಗೊತ್ತಾಗುತ್ತೇ ಅಂತಾ ಕುಟುಂಬಸ್ಥರು ಆರೋಪಿಸಿದ್ದಾರೆ. ಕೇವಲ ತಲೆಗೆ ಮಾತ್ರ ಗಂಭೀರವಾದ ಗಾಯವಾಗಿದ್ದು, ಬೈಕ್ ಕಲ್ಲಿನಿಂದ ಜಖಂಗೊಳಿಸಿ ಹಂತಕರು ಅಪಘಾತ ಕಥೆಯನ್ನು ಕಟ್ಟಿದ್ದಾರೆ ಅಂತ ಆರೋಪಿಸಿದ್ದಾರೆ. ಪೊಲೀಸ್​ ತನಿಖೆಯಿಂದ, ಶವಪರೀಕ್ಷೆಯಿಂದ ಅದು ಹತ್ಯೆಯೋ, ಅಪಘಾತದಲ್ಲಿ ಮೃತಪಟಗ್ಟಿದ್ದೋ ಎಂಬುದು ತಿಳಿದುಬರಲಿದೆ. ಜೊತೆಗೆ ಕೊಲೆ ಮಾಡಿದ ಆರೋಪಿಗಳು ಬಯಲಿಗೆ ಬರಬೇಕಿದೆ. ಹೀಗಾಗಿ ಸೂಕ್ತವಾದ ತನಿಖೆ ಮಾಡಿ, ನಮಗೆ ನ್ಯಾಯ ಕೊಡಿಸಬೇಕು ಅಂತಾ ಸಹೋದರಿ ಇಂದಿರವ್ವಾ ಕಣ್ಣೀರು ಹಾಕ್ತಾಯಿದ್ದಾರೆ.

ಬಾಳಿ ಬದುಕಬೇಕಾದ ಹದಿಹರೆಯದ ಸುನೀಲ್ ನನ್ನು ಕಳೆದುಕೊಂಡು ಇಡೀ ಕುಟುಂಬ ಕಣ್ಣೀರು ಹಾಕ್ತಾಯಿದೆ. ಗದಗ ಗ್ರಾಮೀಣ ಪೊಲೀಸರು ಪ್ರಕಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಒಟ್ನಲ್ಲಿ ಸುನಿಲ್ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಪೊಲೀಸ್​​ ತನಿಖೆಯಿಂದ ಸುನೀಲ್ ಸಾವಿನ ರಹಸ್ಯ ಬಯಲಾಗಬೇಕಾಗಿದೆ.

ವರದಿ: ಸಂಜೀವ ಪಾಂಡ್ರೆ, ಟಿವಿ 9, ಗದಗ

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ