
ಕಾರವಾರ, ಅಕ್ಟೋಬರ್ 12: ಎಲ್ಲ ಕ್ಷೇತ್ರಗಳನ್ನು ಎಐ (artificial intelligence) ವ್ಯಾಪಿಸುತ್ತಿರುವ ನಡುವೆ ರಾಜ್ಯ ಪ್ರವೇಶಿಸುವ ವಾಹನಗಳ ತಪಾಸಣೆಗೂ ಈ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಲು ನೆರೆ ರಾಜ್ಯ ಗೋವಾ ಮುಂದಾಗಿದೆ. ವಾಹನಗಳ ದಾಖಲೆಗಳು ಸರಿಯಾಗಿ ಇಲ್ಲದಿದ್ದರೆ ನಿಮ್ಮ ಮನೆಗೇ ನೊಟೀಸ್ ಬರಲಿದ್ದು, ಸ್ವತಃ ನೀವೇ ಹೋಗಿ ಅಲ್ಲಿ ದಂಡ ತುಂಬಿ ಬರಬೇಕಾಗುತ್ತೆ. ಹೀಗಾಗಿ ಗೋವಾಕ್ಕೆ ಸ್ವಂತ ವಾಹನಗಳಲ್ಲಿ ಪ್ರಯಾಣಿಸುವ ಮೊದಲು ಈ ವಿಷಯ ನೆನಪಲ್ಲಿ ಇಟ್ಟುಕೊಂಡೇ ತೆರಳಬೇಕಿದೆ.
ಕರ್ನಾಟಕದಿಂದ ಗೋವಾಕ್ಕೆ ತೆರಳುವ ಮೊಲ್ಲೆಂ ಗಡಿಯಲ್ಲಿ ‘ಗೋವಾ ವೆಹಿಕಲ್ ಆಥೆಂಟಿಕೇಶನ್ ಸಿಸ್ಟಂ’ (GoVA) ಎಂದು ಕರೆಯಲ್ಪಡುವ ಅತ್ಯಾಧುನಿಕ ಎಲೆಕ್ಟ್ರಾನಿಕ್ ತಪಾಸಣೆ ಕೇಂದ್ರ ಈಗಾಗಲೇ ಆರಂಭವಾಗಿದೆ. ಕಾರವಾರದಿಂದ ಗೋವಾಕ್ಕೆ ತೆರಳುವ ಮಾರ್ಗ ಪೊಳೆಂನಲ್ಲೂ ಈ ವ್ಯವಸ್ಥೆ ಸದ್ಯವೇ ಶುರುವಾಗಲಿದೆ. ಗೋವಾ ಸರ್ಕಾರ ಮತ್ತು ಮಿಸ್ಟೋಟೆಕ್ಸ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ‘GoVA’ ವ್ಯವಸ್ಥೆ, ಕೃತಕ ಬುದ್ಧಿಮತ್ತೆ (AI) ಮತ್ತು ನೈಜ ಕಾಲದ ಡೇಟಾಬೇಸ್ ಸಂಪರ್ಕ ಬಳಸಿ ವಾಹನಗಳ ದಾಖಲೆ ಪರಿಶೀಲನೆ ನಡೆಸಲಿದೆ. ಕ್ಷಣದಲ್ಲಿಯೇ ವಾಹನಗಳ ನೋಂದಣಿ, ವಿಮೆ ಹಾಗೂ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರಗಳ ಪರಿಶೀಲನೆ ನಡೆಯಲ್ಲಿದ್ದು, ದಾಖಲೆ ಸರಿ ಇಲ್ಲದಿದ್ದರೆ ಅಥವಾ ಅವಧಿ ಮೀರಿದ್ದರೆ ತಕ್ಷಣವೇ ದಂಡ ವಿಧಿಸುವ ಸಾಮರ್ಥ್ಯವನ್ನು ಈ ವ್ಯವಸ್ಥೆ ಹೊಂದಿದೆ.
ಇದನ್ನೂ ಓದಿ: ವಿಶ್ವಮಟ್ಟದಲ್ಲೂ ಸದ್ದು ಮಾಡಿದ ಬೆಂಗಳೂರು ಟ್ರಾಫಿಕ್..!
ವಿಮೆ ಇಲ್ಲದ ವಾಹನಗಳಿಗೆ ಮೊದಲ ಬಾರಿಗೆ 2 ಸಾವಿರ ರೂ. ಹಾಗೂ ಪುನಃ ತಪ್ಪಿದರೆ 4 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಇಲ್ಲದಿದ್ದರೆ 10 ಸಾವಿರ ರೂ. ದಂಡ ನಿಗದಿಪಡಿಸಲಾಗಿದೆ. ಅಲ್ಲದೇ ನಿಗದಿತ ಮಿತಿಯ ವರ್ಷ ಮೀರಿದ ವಾಹನಗಳಿಗೆ ಗೋವಾಕ್ಕೆ ಪ್ರವೇಶ ನಿರ್ಬಂಧ ವಿಧಿಸಲಾಗಿದ್ದು, ಪಾರದರ್ಶಕವಾಗಿ ದಂಡ ಸಂಗ್ರಹಿಸಲು ಗೋವಾ ಸರ್ಕಾರ ಮುಂದಾಗಿದೆ.
ಪ್ರವಾಸಿಗರ ಹಾಟ್ ಸ್ಪಾಟ್ ಆಗಿರೋ ಗೋವಾಗೆ ಪ್ರತಿನಿತ್ಯ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಅವರಲ್ಲಿ ಹಲವರು ವಾಹನಗಳ ದಾಖಲೆ ಸರಿ ಇಲ್ಲದೆ ರಾಜ್ಯ ಪ್ರವೇಶಿಸುತ್ತಿದ್ದು, ಅಂತವರ ನಿಯಂತ್ರಣಕ್ಕೆ ಈ ವ್ಯವಸ್ಥೆ ಜಾರಿಗೆ ಬಂದಿದೆ. ಆದರೆ ಗೋವಾ ಸರ್ಕಾರ ತಂದಿರುವ ಈ ಆಧುನಿಕ ವ್ವವಸ್ಥೆ ಪ್ರವಾಸೋದ್ಯಮ ಮತ್ತು ಸಂಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರೆ, ವಾಹನಗಳ ದಾಖಲೆ ಸರಿ ಇದ್ದಲ್ಲಿ ಏನು ಸಮಸ್ಯೆ ಆಗುತ್ತೆ ಎಂದು ಇನ್ನು ಕೆಲವರು ಪ್ರಶ್ನಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:15 pm, Sun, 12 October 25