ಕರ್ನಾಟಕದ ಕೈತಪ್ಪಿದ ಗೂಗಲ್ AI ಹಬ್ ಆಂಧ್ರದ ಪಾಲಾಗಿದ್ದೇಕೆ: ಕಾರಣ ಕೊಟ್ಟ ಜೆಡಿಎಸ್, ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಗೂಗಲ್‌ನ 1.3 ಲಕ್ಷ ಕೋಟಿ ರೂ. ಮೊತ್ತದ AI ಹಬ್ ಯೋಜನೆ ಕರ್ನಾಟಕದಿಂದ ಆಂಧ್ರ ಪ್ರದೇಶಕ್ಕೆ ಸ್ಥಳಾಂತರಗೊಂಡಿರುವ ಬಗ್ಗೆ ಕಾಂಗ್ರೆಸ್ ಸರ್ಕಾರ ವಿರುದ್ಧ ಜೆಡಿಎಸ್ ವಾಗ್ದಾಳಿ ನಡೆಸಿದೆ. ಬೆಂಗಳೂರಿನ ಮೂಲಸೌಕರ್ಯ ಕೊರತೆ, ರಸ್ತೆ ಗುಂಡಿಗಳು ಹಾಗೂ ಸರ್ಕಾರದ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂದು ಜೆಡಿಎಸ್ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.

ಕರ್ನಾಟಕದ ಕೈತಪ್ಪಿದ ಗೂಗಲ್ AI ಹಬ್ ಆಂಧ್ರದ ಪಾಲಾಗಿದ್ದೇಕೆ: ಕಾರಣ ಕೊಟ್ಟ ಜೆಡಿಎಸ್, ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಹೆಚ್​ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

Updated on: Oct 15, 2025 | 11:34 AM

ಬೆಂಗಳೂರು, ಅಕ್ಟೋಬರ್ 15: ತಂತ್ರಜ್ಞಾನ ದಿಗ್ಗಜ ಕಂಪನಿ ಗೂಗಲ್ (Google) 1.3ಲಕ್ಷ ಕೋಟಿ ರೂ. ಮೊತ್ತದ ಹೂಡಿಕೆಯೊಂದಿಗೆ ಭಾರತದಲ್ಲಿ ಆರಂಭಿಸಲಿರುವ ಎಐ ಹಬ್ ಕರ್ನಾಟಕದ ಕೈತಪ್ಪಿದ್ದು ಆಂಧ್ರ ಪ್ರದೇಶದ ಪಾಲಾಗಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿರುವ ಜೆಡಿಎಸ್ (JDS), ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಜತೆಗೆ, ಗೂಗಲ್ ಎಐ ಹಬ್ ಕೈತಪ್ಪಲು ಕಾರಣವೇನು ಎಂಬುದನ್ನೂ ವಿವರಿಸಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಿಲಿಕಾನ್ ಸಿಟಿ ಬೆಂಗಳೂರಿಗೆ ಗ್ರಹಣ ಹಿಡಿಸಿ ಬಿಟ್ಟಿದೆ. ಬೆಂಗಳೂರಿನ ಗುಂಡಿಗಳು, ಐಟಿ ಸಚಿವ ಪ್ರಿಯಾಂಕ್ ಖರ್ಗೆ ನಿರ್ಲಕ್ಷ್ಯತನದಿಂದ 1.3ಲಕ್ಷ ಕೋಟಿ ರೂ. ಹೂಡಿಕೆಯ ಯೋಜನೆಯೊಂದು ರಾಜ್ಯದ ಕೈತಪ್ಪಿದ್ದು ಕರ್ನಾಟಕಕ್ಕೆ ದೊಡ್ಡ ಹೊಡೆತ ಎಂದು ಜೆಡಿಎಸ್ ಹೇಳಿದೆ.

ಗೂಗಲ್ ಎಐ ಹಬ್ ಕೈತಪ್ಪಲು ಜೆಡಿಎಸ್ ಕೊಟ್ಟ ಕಾರಣವಿದು!

ಜಾಗತಿಕ ಟೆಕ್ ದಿಗ್ಗಜ ಗೂಗಲ್ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಸುಮಾರು 1.3 ಲಕ್ಷ ಕೋಟಿ ರೂ. ಹೂಡಿಕೆಯೊಂದಿಗೆ #AIHub ಸ್ಥಾಪಿಸಲು ಆಂಧ್ರ ಪ್ರದೇಶ ಸರಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. 30,000 ಉದ್ಯೋಗ ಜೊತೆಗೆ ವಾರ್ಷಿಕ 10,000 ಕೋಟಿ ರೂ. ಆದಾಯಗಳಿಸ ಬಹುದಾಗಿದ್ದ ಯೋಜನೆಯ ಕರ್ನಾಟಕದ ಕೈತಪ್ಪಿ ಅನ್ಯ ರಾಜ್ಯಕ್ಕೆ ಹೋಗಿದೆ. ಗಾರ್ಡನ್ ಸಿಟಿಯ ರಸ್ತೆ ಗುಂಡಿ, ಕಸ ಹಾಗೂ ಮೂಲ ಸೌಕರ್ಯ ಸಮಸ್ಯೆ ಕಾರಣಕ್ಕೆ ಕಾರ್ಪೊರೇಟ್ ವಲಯದ ಕೆಂಗಣ್ಣಿಗೆ ಗುರಿಯಾಗಿರುವ ಸಮಯದಲ್ಲೇ ಜಾಗತಿಕ ಬೃಹತ್ ಹೂಡಿಕೆಯ ಯೋಜನೆ ನೆರೆ ರಾಜ್ಯ‌ ಆಂಧ್ರ ಪಾಲಾಗಿದೆ. ಉದ್ಯಮ ಸ್ನೇಹಿ ವಾತಾವರಣ ಕಲ್ಪಿಸುವುದನ್ನು ಬಿಟ್ಟು ಉದ್ಯಮಿಗಳು ಬೆಂಗಳೂರು ಬಿಟ್ಟು ಹೋದರೆ ಹೋಗಲಿ ಎಂದು ಧಮ್ಕಿ ಹಾಕುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್, ನಿಷ್ಪ್ರಯೋಜಕ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಗೂಗಲ್ AI ಹಬ್ ಕರ್ನಾಟಕದ ಕೈತಪ್ಪಲು‌ ನೀವು ಮತ್ತು ನಿಮ್ಮ ಸರ್ಕಾರದ ನಿರ್ಲಕ್ಷತನವೇ ಕಾರಣ ಎಂದು ಜೆಡಿಎಸ್ ಕಿಡಿಕಾರಿದೆ.

ಜೆಡಿಎಸ್ ಎಕ್ಸ್ ಸಂದೇಶ


ಕಿರಣ್ ಮಜುಂದಾರ್ ಸತ್ಯ ಹೇಳಿದರೆ ಇಡೀ ಸರ್ಕಾರವೇ ಅವರ ಮೇಲೆ ಮುಗಿ ಬೀಳುತ್ತದೆ. ಈ ಸರ್ಕಾರ ದಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಬಳಕೆದಾರರೊಬ್ಬರು ಜೆಡಿಎಸ್ ಟ್ವೀಟ್​ಗೆ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರನ್ನು ಅವೈಜ್ಞಾನಿಕವಾಗಿ ವಿಸ್ತರಿಸಿದ ಪರಿಣಾಮ ನಗರವೀಗ ತಿಪ್ಪೆಗುಂಡಿಯಂತಾಗಿದೆ ಎಂದು ಮತ್ತೊಬ್ಬ ಬಳಕೆದಾರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಚರ್ಚೆಗೆ ಕಾರಣವಾಯಿತು ರಾಜನ್ ಆನಂದನ್ ಟ್ವೀಟ್, ಬೆಂಗಳೂರು ಟ್ರಾಫಿಕ್ ನೈಜತೆ ಬಯಲು!

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ