ದೊಡ್ಡಬಳ್ಳಾಪುರ: ಕೊರೊನಾ ಎರಡನೇ ಅಲೆಯ ಅಪಾಯ ಹೆಚ್ಚಿರುವ ಹಿನ್ನೆಲೆಯಲ್ಲಿ ಮೇ 4 ರ ವರೆಗೂ ಶ್ರೀಕ್ಷೇತ್ರ ಘಾಟಿ ಸುಬ್ರಮಣ್ಯ ದೇವಾಲಯದ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಕೇವಲ ಅರ್ಚಕರಿಂದ ಮಾತ್ರ ದೇವಸ್ಥಾನದ ಒಳಭಾಗದಲ್ಲಿ ಪೂಜೆ ನೆರವೇರಿಸಲಾಗುವುದು ಉಳಿದಂತೆ ಸಾರ್ವಜನಿಕರು ಮತ್ತು ಭಕ್ತರ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಈ ತಿಂಗಳ 29 ರಂದು ನಡೆಯಬೇಕಿದ್ದ ಸಾಮೂಹಿಕ ವಿವಾಹದಲ್ಲಿ 43 ಜೋಡಿ ನೊಂದಣಿಯಾಗಿತ್ತು. ಆದರೆ ಈ ಕಾರ್ಯಕ್ರಮವನ್ನು ಕೂಡ ಮುಂದೂಡಲಾಗಿದೆ.
ಪ್ರಸಿದ್ಧ ಗೊರವನಹಳ್ಳಿ ದೇವಾಲಯವನ್ನು 14 ದಿನಗಳ ಕಾಲ ಸಂಪೂರ್ಣವಾಗಿ ಬಂದ್:
ತುಮಕೂರು: ಕೊರೊನಾ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಪ್ರಸಿದ್ಧ ಗೊರವನಹಳ್ಳಿ ದೇವಾಲಯವನ್ನು 14 ದಿನಗಳ ಕಾಲ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಭಕ್ತರ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದು, ಗೊರವನಹಳ್ಳಿ ಸೇರಿದಂತೆ ಜಿಲ್ಲೆಯ ಇನ್ನಿತರ ಪ್ರಸಿದ್ಧ ದೇವಾಲಯಗಳನ್ನು ಮುಚ್ಚಲಾಗಿದೆ.
ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿಷೇಧ
ಶಿವಮೊಗ್ಗ: ಇಂದಿನಿಂದ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ನಿಷೇಧ ಹೇರಲಾಗಿದೆ. ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ಇರುವ ಈ ದೇವಸ್ಥಾನದಲ್ಲಿ ಇಂದಿನಿಂದ ಪ್ರಸಾದ ಭೋಜನ, ವಸತಿ ವ್ಯವಸ್ಥೆ ಯಾವುದು ಸಹ ಇರುವುದಿಲ್ಲ. ಕೊರೊನಾ ಹೆಚ್ಚಳವಾದ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಸರಕಾರದ ಮುಂದಿನ ಆದೇಶ ಬರುವವರೆಗೆ ದೇವಸ್ಥಾನಕ್ಕೆ ಭಕ್ತರ ಭೇಟಿ ನಿಷೇಧಿಸಲಾಗಿದೆ.
ಐತಿಹಾಸಿಕ ಯಲ್ಲಮ್ಮ ದೇವಸ್ಥಾನಕ್ಕೆ ಬೀಗ ಜಡಿದ ಆಡಳಿತ ಮಂಡಳಿ
ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ಭೀಮಾ ನದಿಯಲ್ಲಿರುವ ಐತಿಹಾಸಿಕ ಯಲ್ಲಮ್ಮ ದೇವಸ್ಥಾನಕ್ಕೆ ಆಡಳಿತ ಮಂಡಳಿ ಬೀಗ ಹಾಕಿದೆ. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದಲ್ಲಿರುವ ಈ ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಬಂದು ದರ್ಶನ ಪಡೆಯುತ್ತಿದ್ದರು. ನೆರೆಯ ಮಹಾರಾಷ್ಟ್ರದಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರು ಹೀಗಾಗಿ ದೇವಿಯ ದರ್ಶನಕ್ಕೆ ಯಾರೂ ಬರಬಾರದು ಎಂದು ಮನವಿ ಮಾಡಿರುವ ದೇವಸ್ಥಾನದ ಆಡಳಿತ ಮಂಡಳಿ ದೇವಾಲಯದ ಬಾಗಿಲನ್ನು ಮುಚ್ಚಿದೆ.
ಇದನ್ನೂ ಓದಿ:
ನಾವು ಲಸಿಕೆ ಹಾಕಿಸಿಕೊಳ್ಳೋದಿಲ್ಲ; ಇಲ್ಲಿ ಬಂದು ಕೊರೊನಾ ಹಬ್ಬಿಸಬೇಡಿ ಎಂದು ವಿಶ್ವನಾಥ್ ವಿರುದ್ಧ ಗರಂ ಆದ ಹಾಡಿ ಜನ
(Goravanahalli Lakshmi and ghati subrahmanya temple locked for devotees as surge of covid 19)