ಸರ್ಕಾರಿ ಅಧಿಕಾರಿಗಳು ಇನ್ಮುಂದೆ ಜನಪ್ರತಿನಿಧಿಗಳ ಫೋನ್ ಕಾಲ್ ಸ್ವೀಕರಿಸಲೇಬೇಕು!

ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳ ದೂರವಾಣಿ ಕರೆಗಳನ್ನು ಸ್ವೀಕರಿಸದೆ ಇರುವ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ಶಾಸಕರು, ಪರಿಷತ್ ಸದಸ್ಯರ, ಸಂಸದರ ಫೋನ್ ಕರೆ ಸ್ವೀಕರಿಸುವ ಸಂಬಂಧ ಸರ್ಕಾರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಆ ಕುರಿತು ಮಾಹಿತಿ ಇಲ್ಲಿದೆ.

ಸರ್ಕಾರಿ ಅಧಿಕಾರಿಗಳು ಇನ್ಮುಂದೆ ಜನಪ್ರತಿನಿಧಿಗಳ ಫೋನ್ ಕಾಲ್ ಸ್ವೀಕರಿಸಲೇಬೇಕು!
ಸಾಂದರ್ಭಿಕ ಚಿತ್ರ (ಎಡ) ಮತ್ತು ಸುತ್ತೋಲೆಯ ಪ್ರತಿ

Updated on: Jan 24, 2026 | 12:43 PM

ಬೆಂಗಳೂರು, ಜನವರಿ 24: ಸರ್ಕಾರಿ ಅಧಿಕಾರಿಗಳು ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ದೂರವಾಣಿ ಕರೆಗಳನ್ನು ಸ್ವೀಕರಿಸದೆ ಇರುವುದು, ಮರಳಿ ಕರೆ ಮಾಡದೇ ಇರುವ ಬಗ್ಗೆ ಕರ್ನಾಟಕ (Karnataka) ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮಹತ್ವದ ಸೂಚನೆಯೊಂದನ್ನು ನೀಡಿದ್ದಾರೆ. ಈ ವಿಚಾರವಾಗಿ ಸುತ್ತೋಲೆ ಹೊರಡಿಸಿರುವ ಅವರು, ಇನ್ನು ಮುಂದೆ ಎಲ್ಲ ಸರ್ಕಾರಿ ಅಧಿಕಾರಿಗಳು ಎಂಎಲ್ಎಗಳ ತ್ತು ಎಂಎಲ್‌ಸಿಗಳ ದೂರವಾಣಿ ಕರೆಗಳನ್ನು ಸ್ವೀಕರಿಸಲೇಬೇಕು. ಒಂದು ವೇಳೆ ಕರೆ ಬಂದಾಗ ಇತರ ಕೆಲಸಗಳಲ್ಲಿ ವ್ಯಸ್ತರಾಗಿದ್ದಲ್ಲಿ, ಮರಳಿ ಕರೆ ಮಾಡಿ ಮಾತನಾಡಬೇಕು ಎಂದು ಸೂಚನೆ ನೀಡಿದ್ದಾರೆ.

ಮುಖ್ಯ ಕಾರ್ಯದರ್ಶಿಗಳ ಪತ್ರದಲ್ಲೇನಿದೆ?

ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯವರು ದಿನಾಂಕ 16-12-2025 ರಂದು ಬರೆದ ಪತ್ರದಲ್ಲಿ ತಿಳಿಸಿದಂತೆ, ರಾಜ್ಯದ ವಿವಿಧ ಭಾಗಗಳಿಂದ ಸಾರ್ವಜನಿಕರು ಅವರ ಸಮಸ್ಯೆಗಳನ್ನು ಮತ್ತು ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳುವ ಉದ್ದೇಶದಿಂದ ಮಾನ್ಯ ವಿಧಾನಸಭಾ ಹಾಗೂ ವಿಧಾನಪರಿಷತ್ತಿನ ಸದಸ್ಯರುಗಳಿಗೆ ವಿನಂತಿಸಿಕೊಂಡಾಗ ಅನಿವಾರ್ಯವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಬೇಕಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಜನಪ್ರತಿನಿಧಿಗಳ ದೂರವಾಣಿ ಕರೆಗಳನ್ನು ಕೆಲವು ಅಧಿಕಾರಿಗಳು ಸ್ವೀಕರಿಸದೇ ಇರುವುದು ಹಾಗೂ ಒಂದು ವೇಳೆ ಆ ಸಮಯದಲ್ಲಿ ಬೇರೆ ತುರ್ತು ಕಾರ್ಯದಲ್ಲಿ ನಿರತರಾಗಿದ್ದಲ್ಲಿ ತದನಂತರ ಸೌಜನ್ಯಕ್ಕಾದರೂ ಮರು ಕರೆ ಮಾಡದೆ ಇರುವುದು ನನ್ನ ಗಮನಕ್ಕೆ ಬಂದಿದೆ.

ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಇನ್ನು ಮುಂದೆ ಎಲ್ಲಾ ಅಧಿಕಾರಿಗಳು ಜನಪ್ರತಿನಿಧಿಗಳಾದ ಮಾನ್ಯ ವಿಧಾನಸಭಾ ಹಾಗೂ ವಿಧಾನಪರಿಷತ್ತಿನ ಸದಸ್ಯರು ಮತ್ತು ಮಾನ್ಯ ಲೋಕಸಭಾ ಹಾಗೂ ಸಭಾ ರಾಜ್ಯ ಸಭಾ ಸದಸ್ಯರುಗಳ ದೂರವಾಣಿ ಸಂಖ್ಯೆಯನ್ನು ತಮ್ಮ ಬಳಿ ಕಡ್ಡಾಯವಾಗಿ ಇಟ್ಟುಕೊಳ್ಳತಕ್ಕದ್ದು ಹಾಗೂ ಅವರು ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸುವುದು, ಒಂದು ವೇಳೆ ತಾವು ಅನ್ಯ ಕರ್ತವ್ಯದಲ್ಲಿ ನಿರತರಾಗಿದ್ದಲ್ಲಿ ಅವರುಗಳಿಗೆ ತಮ್ಮ ಕರ್ತವ್ಯ ಮುಗಿದ ನಂತರ ಮರು ಕರೆಯನ್ನು ಮಾಡುವುದರ ಮೂಲಕ ಸೂಕ್ತವಾಗಿ ಸಮಸ್ಯೆಗಳ ಕುರಿತು ಸ್ಪಂದಿಸುವಂತೆ ಈ ಮೂಲಕ ಸೂಚನೆಯನ್ನು ನೀಡಿದೆ ಎಂದು ಮುಖ್ಯ ಕಾರ್ಯದರ್ಶಿಗಳು ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಮನೆ ಹಂಚಿಕೆಗೆ ಕೇಂದ್ರ ಸಚಿವರ ಆಹ್ವಾನಿಸದೆ ಶಿಷ್ಟಾಚಾರ ಮರೆತ ಸಿದ್ದರಾಮಯ್ಯ ಸರ್ಕಾರ: ಬಿಜೆಪಿ ಆರೋಪ

ಈ ಸೂಚನೆಯನ್ನು ತಮ್ಮ ಆಪ್ತ ಶಾಖೆ ಸಿಬ್ಬಂದಿಗಳಿಗೂ ನೀಡಬೇಕು ಎಂದು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಇತರ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ