AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ ಮನೆ ಹಂಚಿಕೆಗೆ ಕೇಂದ್ರ ಸಚಿವರ ಆಹ್ವಾನಿಸದೆ ಶಿಷ್ಟಾಚಾರ ಮರೆತ ಸಿದ್ದರಾಮಯ್ಯ ಸರ್ಕಾರ: ಬಿಜೆಪಿ ಆರೋಪ

ಹುಬ್ಬಳ್ಳಿಯಲ್ಲಿ ಕರ್ನಾಟಕ ಸ್ಲಂ ಅಭಿವೃದ್ಧಿ ಮಂಡಳಿ ನಿರ್ಮಿತ ಮನೆಗಳ ಹಕ್ಕುಪತ್ರ ಹಂಚಿಕೆ ಕಾರ್ಯಕ್ರಮ ಈಗ ರಾಜಕೀಯ ವಿವಾದಕ್ಕೆ ಗ್ರಾಸವಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ಹಂಚಿಕೆಯಾದ, ಸ್ಲಂ ಬೋರ್ಡ್ ನಿರ್ಮಿಸಿರುವ ಮನೆಗಳ ವಿತರಣೆ ಕಾರ್ಯಕ್ರಮದಲ್ಲಿ ಪ್ರೋಟೋಕಾಲ್ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ಆರೋಪಿಸಿದ್ದು, ಪ್ರತಿಭಟನೆಗೆ ಮುಂದಾಗಿದೆ.

ಹುಬ್ಬಳ್ಳಿ ಮನೆ ಹಂಚಿಕೆಗೆ ಕೇಂದ್ರ ಸಚಿವರ ಆಹ್ವಾನಿಸದೆ ಶಿಷ್ಟಾಚಾರ ಮರೆತ ಸಿದ್ದರಾಮಯ್ಯ ಸರ್ಕಾರ: ಬಿಜೆಪಿ ಆರೋಪ
ಕೇಂದ್ರ ಸಚಿವರ ಆಹ್ವಾನಿಸದೆ ಶಿಷ್ಟಾಚಾರ ಮರೆತ ಸಿದ್ದರಾಮಯ್ಯ ಸರ್ಕಾರ: ಬಿಜೆಪಿ ಆರೋಪ
ಸಂಜಯ್ಯಾ ಚಿಕ್ಕಮಠ
| Edited By: |

Updated on: Jan 24, 2026 | 7:57 AM

Share

ಹುಬ್ಬಳ್ಳಿ, ಜನವರಿ 24: ಕರ್ನಾಟಕ ಸ್ಲಂ ಅಭಿವೃದ್ಧಿ (Karnataka Slum Board) ಮಂಡಳಿಯಿಂದ ನಿರ್ಮಾಣಗೊಂಡ ಮನೆಗಳ ಹಕ್ಕುಪತ್ರ ಹಂಚಿಕೆ ಕಾರ್ಯಕ್ರಮ ಇಂದು ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ನಡೆಯಲಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ (PMAY) ಮಂಜೂರಾದ ಮನೆಗಳ ಹಂಚಿಕೆ ನೆಪದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಾರ್ಯಕ್ರಮಕ್ಕೆ ಕೇಂದ್ರ ಸಚಿವರು ಹಾಗೂ ಬಿಜೆಪಿ (BJP) ಶಾಸಕರನ್ನು ಆಹ್ವಾನಿಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಇಂದು ಬೆಳಗ್ಗೆ 11.30ಕ್ಕೆ ಪ್ರತಿಭಟನೆ ನಡೆಸಲಿದೆ. ಸರ್ಕಾರ ಶಿಷ್ಟಾಚಾರ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿರುವ ಬಿಜೆಪಿ, ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಂತೆಯೇ ಆಯೋಜನೆಯಾಗಿದೆ ಎಂದು ಟೀಕಿಸಿದೆ. ಪ್ರತಿಭಟನೆಯ ಭಾಗವಾಗಿ ದುರ್ಗದಬೈಲ್ ವೃತ್ತದಿಂದ ಬಸವೇಶ್ವರ ನಗರವರೆಗೆ ರ್ಯಾಲಿ ನಡೆಯಲಿದ್ದು, ಶಾಸಕ ಮಹೇಶ್ ಟೆಂಗಿನಕಾಯಿ, ಶಾಸಕ ಎಂ.ಆರ್. ಪಾಟೀಲ್ ಹಾಗೂ ವಿಧಾನಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಭಾಗಿಯಾಗಲಿದ್ದಾರೆ.

ಸಚಿವ ಜಮೀರ್ ಅಹ್ಮದ್ ಹೇಳಿದ್ದೇನು?

ಕೇಂದ್ರ ಸಚಿವರಿಗೆ ಆಹ್ವಾನ ನೀಡಿಲ್ಲ ಎಂಬ ಆರೋಪವನ್ನು ವಸತಿ ಸಚಿವ ಜಮೀರ್ ಅಹ್ಮದ್ ಅಲ್ಲಗಳೆದಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಆಹ್ವಾನ ನೀಡಿದ್ದೆವು. ಆದರೆ ಅವರು, ವಿದೇಶ ಪ್ರವಾಸ ನಿಗದಿಯಾಗಿರುವುದರಿಂದ ದಿನಾಂಕ ಬದಲಾಯಿಸಲು ಮನವಿ ಮಾಡಿದ್ದರು ಎಂದು ಜಮೀರ್ ಅಹ್ಮದ್ ತಿಳಿಸಿದ್ದಾರೆ.

ಇಂದು ನಡೆಯುವ ಮನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಸೇರಿದಂತೆ ಹಲವು ಹಿರಿಯ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ. ಐದು ಜಿಲ್ಲೆಗಳ 20,360 ಫಲಾನುಭವಿಗಳಿಗೆ ಇಂದು ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದ್ದು, ಕಾರ್ಯಕ್ರಮಕ್ಕೆ ಸುಮಾರು ಮೂರು ಲಕ್ಷ ಜನ ಸೇರುವ ನಿರೀಕ್ಷೆ ಇದೆ.

ರಾಜ್ಯಾದ್ಯಂತ ಒಟ್ಟು 42,345 ಮನೆಗಳ ಹಸ್ತಾಂತರದ ನೆಪದಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನವೆಂದು ವಿರೋಧ ಪಕ್ಷಗಳು ವ್ಯಾಖ್ಯಾನಿಸುತ್ತಿವೆ. ವಿಶೇಷವಾಗಿ ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ರಾಜಕೀಯ ಮಹತ್ವ ಪಡೆದುಕೊಂಡಿದೆ.

ಮನೆ ಹಂಚಿಕೆ ಹೆಸರಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನವಾ?

ಉತ್ತರ ಕರ್ನಾಟಕದಲ್ಲಿ ತಮ್ಮ ಜನಬೆಂಬಲ ತೋರಿಸುವ ಉದ್ದೇಶದಿಂದಲೇ ಈ ರೀತಿಯ ಭಾರೀ ಜನಸಮಾವೇಶ ಆಯೋಜಿಸಲಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ರಾಜಕೀಯ ಸಂದೇಶ ರವಾನೆಗೂ ಈ ಕಾರ್ಯಕ್ರಮ ಉಪಯೋಗವಾಗಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ಇದನ್ನೂ ಓದಿ: ಧಾರವಾಡ: ಮನೆ ಕೊಟ್ಟ ಸರ್ಕಾರ, ಮೂಲ ಸೌಕರ್ಯ ಕೊಡಲು ಮರೆಯಿತು!

ಲಕ್ಷಾಂತರ ಜನ ಸೇರುವ ಈ ಕಾರ್ಯಕ್ರಮದಿಂದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೂರ ಉಳಿದಿರುವುದು ಸಹ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಒಟ್ಟಾರೆ, ಮನೆಗಳ ಹಸ್ತಾಂತರ ಕಾರ್ಯಕ್ರಮವು ಕೇವಲ ಕಲ್ಯಾಣ ಯೋಜನೆಯಷ್ಟೇ ಅಲ್ಲದೆ, ರಾಜ್ಯ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಅಧ್ಯಾಯಕ್ಕೆ ಸಾಕ್ಷಿಯಾಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ