ಕೊಲೆಯಾದ ಹುಬ್ಬಳ್ಳಿ ಅಂಜಲಿ ಅಂಬಿಗೇರ ಕುಟುಂಬಕ್ಕೆ ಮನೆ: ಸಿಎಂ ಮುಂದೆ ಕಣ್ಣೀರಿಟ್ಟ ಅಜ್ಜಿ
ಕರ್ನಾಟಕದಲ್ಲಿ ಅಂಜಲಿ ಅಂಬಿಗೇರ ಕೊಲೆ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಸರ್ಕಾರ ಮೃತಳ ಕುಟುಂಬಕ್ಕೆ ಕೆಲ ಭರವಸೆಗಳನ್ನು ನೀಡಿತ್ತು. ಆ ಪೈಕಿ ಇದೀಗ ಹುಬ್ಬಳ್ಳಿಯಲ್ಲಿ ಮನೆ ನೀಡಿದೆ. ಸಿಎಂ ಸಿದ್ದರಾಮಯ್ಯ ಮೃತ ಅಂಜಲಿಯ ಅಜ್ಜಿಗೆ ಮನೆಯ ಬೀಗ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅಜ್ಜಿ ತಮ್ಮ ಮೊಮ್ಮಗಳನ್ನು ನೆನೆದು ಕಣ್ಣೀರಿಟ್ಟರು.

ಹುಬ್ಬಳ್ಳಿ, ಜನವರಿ 24: ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ್ ಪುತ್ರಿ ನೇಹಾಳ ಬರ್ಬರ ಹತ್ಯೆ ಬಳಿಕ ರಾಜ್ಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದು, ಅಂಜಲಿ ಅಂಬಿಗೇರ ಕೊಲೆ ಕೇಸ್. ಇದೇ ಪ್ರಕರಣ ರಾಜಕೀಯ ತಿಕ್ಕಾಟಕ್ಕೂ ಕಾರಣವಾಗಿತ್ತು. ಅಂದು ಕುಟುಂಬಕ್ಕೆ ಸಾಂತ್ವನ ಹೇಳಿದ್ದ ಸರ್ಕಾರ ಇಂದು ಮನೆ ನೀಡಿದೆ. ಸಚಿವ ಜಮೀರ್ ಅಹ್ಮದ್ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah ಕೊಲೆಯಾಗಿರುವ ಅಂಜಲಿ ಅಂಬಿಗೇರ (Anjali Ambiger) ಪೋಷಕರಿಗೆ ಮನೆ ಹಂಚಿಕೆ ಮಾಡಲಾಗಿದ್ದು, ಈ ವೇಳೆ ಮೊಮ್ಮಗಳನ್ನು ನೆನೆದು ಅಜ್ಜಿ ಭಾವುಕರಾದರು.
ಹುಬ್ಬಳ್ಳಿಯಲ್ಲಿ ಎರಡು ವರ್ಷಗಳ ಹಿಂದೆ ಅಂಜಲಿ ಅಂಬಿಗೇರ ಕೊಲೆ ನಡೆದಿತ್ತು. ದುಷ್ಕರ್ಮಿ ಮನೆಗೆ ನುಗ್ಗಿ ಅಂಜಲಿಯನ್ನ ಕೊಲೆ ಮಾಡಿದ್ದ. ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆ ಸಂದರ್ಭದಲ್ಲಿ ಅಂಜಲಿಯ ಮನೆಗೆ ಭೇಟಿ ಮಾಡಿದ್ದ ಗೃಹ ಸಚಿವ ಜಿ ಪರಮೇಶ್ವರ್, ಅಜ್ಜಿ ಗಂಗಮ್ಮ ಮತ್ತು ಸಹೋದರಿಯರಿಗೆ ಸಾಂತ್ವನ ಹೇಳಿದ್ದರು. ಜೊತೆಗೆ ಗೌಪ್ಯವಾಗಿ ಹಲವು ಆಶ್ವಾಸನೆಗಳನ್ನೂ ನೀಡಿದ್ದರು. ಇದೀಗ ಆ ಪೈಕಿ ಕುಟುಂಬಕ್ಕೆ ಮನೆ ಹಂಚಿಕೆ ಮಾಡಲಾಗಿದೆ. ಕೊಲೆಯಾಗಿರುವ ಅಂಜಲಿ ಪೋಷಕರಿಗೆ ಸಿಎಂ ಸಿದ್ದರಾಮಯ್ಯ ಮನೆ ಹಂಚಿಕೆ ಮಾಡಿದ್ದಾರೆ. ಸಿಎಂ ಕೈಯಿಂದ ಮನೆ ಬೀಗ ಪಡೆಯುವಾಗ ಅಂಜಲಿ ಅಜ್ಜಿ ಮೊಮ್ಮಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.
ಏನಿದು ಪ್ರಕರಣ?
ಅಂಜಲಿ ಅಂಬಿಗೇರ ಕೊಲೆ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಎರಡು ವರ್ಷಗಳ ಹಿಂದೆ ಅಂಜಲಿ ಕೊಲೆಗೆ ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಬಂದಿದ್ದ ಅಂಜಲಿ ಸ್ನೇಹಿತ ವಿಶ್ವ ಅಲಿಯಾಸ್ ಗಿರೀಶ್, ಮುಂಜಾನೆ ಮನೆಯ ಬಾಗಿಲು ಬಡಿದಿದ್ದ. ಸ್ವತಃ ಅಂಜಲಿಯೇ ಬಂದು ಬಾಗಿಲು ತೆಗೆದಿದ್ದಳು. ಪರ್ಸನಲ್ ಆಗಿ ಮಾತನಾಬೇಕು ಬಾ ಅಂತ ಕರೆದೋನೇ ಏಕಾಏಕಿ ಚಾಕುವಿನಿಂದ ಇರಿದಿದ್ದ.
ಇದನ್ನೂ ಓದಿ: ಅಂಜಲಿ ಅಂಬಿಗೇರ ಕುಟುಂಬಕ್ಕೆ ಆಕಾಶ ತೋರಿಸಿದ್ದ ಪರಮೇಶ್ವರ್ಗೆ ನೀಡಿದ ಭರವಸೆಗಳು ನೆನಪಿಲ್ಲ!
ಅಂಜಲಿ ಜೋರಾಗಿ ಕೂಗಿಕೊಳ್ತಿದ್ದಂತೆ ಕುತ್ತಿಗೆ ಹಿಡಿದು ಒಳಗೆ ಎಳೆದುಕೊಂಡು ಹೋಗಿದ್ದ. ಅಜ್ಜಿ ಹಾಗೂ ಅಂಜಲಿ ತಂಗಿ ತಡೆಯಲು ಬಂದರೂ ಅವರೇ ಎದುರೇ ಕ್ರೌರ್ಯ ಮೆರೆದಿದ್ದ. ಮನೆಯೆಲ್ಲಾ ಯುವತಿಯನ್ನ ಹಿಡಿದು ಎಳೆದಾಡಿ ಹತ್ತಾರು ಬಾರಿ ಚಾಕುವಿನಿಂದ ಚುಚ್ಚಿ ಕೊಂದಿದ್ದ. ಅಂಜಲಿ ಸತ್ತಿದ್ದು ಪಕ್ಕಾ ಮಾಡಿಕೊಂಡ ಬಳಿಕವೇ ಮನೆಯಿಂದ ಕಾಲ್ಕಿತ್ತಿದ್ದ.
ಇದನ್ನೂ ಓದಿ: ನೇಹಾ, ಅಂಜಲಿ ಕೊಲೆ: ಹುಬ್ಬಳ್ಳಿಯ ಕಾಲೇಜು, ಮನೆಗಳಲ್ಲಾದ ಬದಲಾವಣೆ ಕುರಿತು ಪ್ರಾಂಶುಪಾಲರ, ಪೋಷಕರ ಮಾತು ಟಿವಿ9 ಸಂದರ್ಶನದಲ್ಲಿ
ಅಂಜಲಿ ಹಾಗೂ ಗಿರೀಶ್ ಇಬ್ಬರೂ ಸಹಪಾಠಿಗಳಾಗಿದ್ದರು. ಲವ್ ಬ್ರೇಕಪ್ ಆಗಿತ್ತು. ಅಂಜಲಿ ತನ್ನ ಜೊತೆ ಕ್ಲೋಸ್ ಆಗಿರೋದನ್ನೇ ಅಪಾರ್ಥ ಮಾಡಿಕೊಂಡಿದ್ದ ಪಾಗಲ್, ಅಲ್ಲಿ ಇಲ್ಲಿ ಸುತ್ತಾಡಲು ಕರೆಯುತ್ತಿದ್ದ. ಒಲ್ಲೆ ಎಂದ ಒಂದೇ ಒಂದು ಕಾರಣಕ್ಕೆ ಮಸಣ ಸೇರಿಸಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:27 pm, Sat, 24 January 26