ಅಂಜಲಿ ಅಂಬಿಗೇರ ಕುಟುಂಬಕ್ಕೆ ಆಕಾಶ ತೋರಿಸಿದ್ದ ಪರಮೇಶ್ವರ್​ಗೆ ನೀಡಿದ ಭರವಸೆಗಳು ನೆನಪಿಲ್ಲ!

ಅಂಜಲಿ ಅಂಬಿಗೇರ ಕುಟುಂಬಕ್ಕೆ ಆಕಾಶ ತೋರಿಸಿದ್ದ ಪರಮೇಶ್ವರ್​ಗೆ ನೀಡಿದ ಭರವಸೆಗಳು ನೆನಪಿಲ್ಲ!

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 24, 2024 | 8:25 PM

ಈ ಪ್ರಶ್ನೆಗೆ ಪರಮೇಶ್ವರ್ ಅವರು ಉತ್ತರಿಸಬೇಕು. ನಿಮ್ಮಿಂದ ಅಥವಾ ನಿಮ್ಮ ಸರ್ಕಾರದಿಂದ ಈಡೇರಿಸಲಾಗದ ಆಶ್ವಾಸನೆಗಳನ್ನು ಗಂಗಮ್ಮನಂಥ ಅಮಾಯಕರಿಗೆ ಯಾಕೆ ನೀಡುತ್ತೀರಿ? ನಿಮ್ಮ ಮಾತು ನಂಬಿಕೊಂಡ ಇವರ ಕುಟುಂಬ ಇವತ್ತು ಒಂದ್ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿಯಲ್ಲಿದೆ. ಅವರ ಮೊರೆ ನಿಮ್ಮ ಶ್ರವಣದೋಶದ ಕಿವಿಗಳಿಗೆ ಯಾವತ್ತಾದರೂ ಬಿದ್ದಿತೇ?

ಹುಬ್ಬಳ್ಳಿ: ನಗರದ ಯುವತಿ ಅಂಜಲಿ ಅಂಬಿಗೇರ ಹತ್ಯೆ ನಡೆದು ಮೂರೂವರೆ ತಿಂಗಳಾಯಿತು. ಆಗಿನ್ನೂ ಲೋಕಸಭಾ ಚುನಾವಣೆ ನಡೆಯುತ್ತಿದ್ದವು. ಆ ಸಂದರ್ಭದಲ್ಲಿ ಅಂಜಲಿಯ ಮನೆಗೆ ಭೇಟಿ ಆಕೆಯ ಅಜ್ಜಿ ಗಂಗಮ್ಮ ಮತ್ತು ಸಹೋದರಿಯರಿಗೆ ಸಾಂತ್ವನ ಹೇಳಿದ್ದ ಗೃಹ ಸಚಿವ ಜಿ ಪರಮೇಶ್ವರ್ ಗೌಪ್ಯವಾಗಿ ಹಲವು ಆಶ್ವಾಸನೆಗಳನ್ನೂ ನೀಡಿದ್ದರು. ಕುಟುಂಬಕ್ಕೊಂದು ಮನೆ, ₹ 25 ಲಕ್ಷ ಪರಿಹಾರ ಮತ್ತು ಸಹೋದರಿಯರಲ್ಲಿ ಒಬ್ಬಳಿಗೆ ನೌಕರಿ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಪರಮೇಶ್ವರ್ ಯಾವ ನೆರವಿನ ಬಗ್ಗೆಯೂ ಬಹಿರಂಗ ಹೇಳಿಕೆ ನೀಡಿರಲಿಲ್ಲ. ಆದರೆ, ಇವತ್ತು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗಂಗಮ್ಮ, ಸರ್ಕಾರದ ₹ 25 ಲಕ್ಷ ಪರಿಹಾರದ ಮಾತು ಹಾಗಿರಲಿ, ಇದುವರೆಗೆ ಹತ್ತು ರೂಪಾಯಿ ಕೂಡ ಸಿಕ್ಕಿಲ್ಲ ಅಂತ ಹೇಳಿದರು.

ಸುಮಾರು ಎರಡು ತಿಂಗಳು ಹಿಂದೆ ಅಧಿಕಾರಿಗಳು ಬಂದು ಕೆಲ ಪೇಪರ್ ಗಳ ಮೇಲೆ ಗಂಗಮ್ಮನವರ ಸಹಿ ಮಾಡಿಸಿಕೊಂಡು ನಿಮಗೆ ₹ 5ಲಕ್ಷ ಸಿಗಲಿದೆ ಅಂತ ಹೇಳಿದ್ದರಂತೆ. ಇದುವರೆಗೆ ನಯಾ ಪೈಸೆ ಸಿಕ್ಕಿಲ್ಲ ಎಂದು ಗಂಗಮ್ಮ ಹೇಳುತ್ತಾರೆ. ದುಡಿದು ಕುಟುಂಬಕ್ಕೆ ಅನ್ನ ಸಂಪಾದಿಸುತ್ತಿದ್ದ ಅಂಜಲಿ ಸಾವಿನ ನಂತರ ಗಂಗಮ್ಮನ ಕುಟುಂಬ ಅಕ್ಷರಶಃ ಅನಾಥವಾಗಿದೆ. ಪರಮೇಶ್ವರ್ ಅವರಿಗೆ ಗಂಗಮ್ಮಗೆ ನೀಡಿದ ಭರವಸೆಗಳು ನೆನಪಿವೆಯೇ?

ಆಶ್ರಯ ಯೋಜನೆ ಅಡಿ ಮನೆ ಕೊಡುವುದಾಗಿ ಹೇಳಿದ ಕಾರ್ಮಿಕ ಮಂತ್ರಿ ಸಂತೋಷ್ ಲಾಡ್ ಎಲ್ಲಿ ಹೋದರು? ಹುಬ್ಬಳ್ಳಿಯ ಹೋಟೆಲೊಂದರ ಮೆಟ್ಟಿಲುಗಳ ಮೇಲೆ ಕೂತು ಪೋಟೋ ಆ್ಯಪ್ ಗಾಗಿ ದೋಸೆ ತಿನ್ನುವ ಲಾಡ್ ಗೆ ಉಪವಾಸದಿಂದ ನರಳುತ್ತಿರುವ ಅಂಜಲಿಯ ಕುಟುಂಬದ ಹಸಿವು ನೆನಪಾಗಲಿಲ್ಲವೇ?

ಅಂಜಲಿ ಮತ್ತು ನೇಹಾ ಹಿರೇಮಠ ಎರಡೂ ಪ್ರಕರಣಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಚೆನ್ನಾಗಿ ಗೊತ್ತು. ಬಡವರ ಬಂಧು ಅಂತ ಬಾಯಲ್ಲಿ ಹೇಳಿಕೊಂಡರೆ ಸಾಕೇ ಅಹಿಂದ ನಾಯಕರೇ? ಗಂಗಮ್ಮನ ಕಥೆ ಕೇಳುತ್ತಿದ್ದರೆ ಭಯಂಕರ ವ್ಯಥೆಯಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    CID ಹಿಂಗ್​​ ಮಾಡಿದ್ರೆ ಬಾಳ ನೋವಾಗುತ್ತೆ; ಮೃತ ಅಂಜಲಿ ಸಹೋದರಿ ಬೇಸರ