ವನ್ಯಜೀವಿ ಅಂಗಾಂಗ ಹಿಂದಿರುಗಿಸಲು 3 ತಿಂಗಳ ಅವಧಿ ವಿಸ್ತರಿಸಿದ ಸರ್ಕಾರ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 05, 2024 | 10:17 PM

ಹುಲಿ ಉಗುರು, ಆನೆ ದಂತ, ಜಿಂಕೆಕೊಂಬು ಸೇರಿದಂತೆ ಅಕ್ರಮವಾಗಿಟ್ಟುಕೊಂಡಿರುವ ಯಾವುದೇ ವನ್ಯ ಜೀವಿಯ ಅಂಗಾಂಗ, ಟ್ರೋಫಿಯನ್ನು ಸರ್ಕಾರಕ್ಕೆ ಹಿಂತಿರುಗಿಸಲು ಒಂದು ಬಾರಿ ಕಾಲಾವಕಾಶ ನೀಡಲು ಇಂದು ನಡೆದ ಸಚಿವ ಸಂಪುಟ ಸಭೆ ನಿರ್ಧಾರ ಕೈಗೊಳ್ಳಲಾಗಿದೆ.

ವನ್ಯಜೀವಿ ಅಂಗಾಂಗ ಹಿಂದಿರುಗಿಸಲು 3 ತಿಂಗಳ ಅವಧಿ ವಿಸ್ತರಿಸಿದ ಸರ್ಕಾರ
vidhana soudha
Follow us on

ಬೆಂಗಳೂರು, ಜನವರಿ 05: ವನ್ಯಜೀವಿ ಸಂರಕ್ಷಣೆ ಅಡಿ (Wildlife Protect Act) ಹುಲಿ ಉಗುರು, ಹುಲಿ ಚರ್ಮ ಸೇರಿದಂತೆ ವನ್ಯಜೀವಿ ಅಂಗಾಂಗ ಹಿಂದಿರುಗಿಸಲು 3 ತಿಂಗಳ ಅವಧಿಯನ್ನು ರಾಜ್ಯ ಸರ್ಕಾರ ವಿಸ್ತರಿಸಿದೆ. ಶೀಘ್ರವೇ ಅಧಿಸೂಚನೆ ಹೊರಡಿಸಲು ಕ್ಯಾಬಿನೆಟ್ ನಿರ್ಧಾರ ಮಾಡಿದೆ. ಹುಲಿ ಉಗುರು, ಆನೆ ದಂತ, ಜಿಂಕೆಕೊಂಬು ಸೇರಿದಂತೆ ಅಕ್ರಮವಾಗಿಟ್ಟುಕೊಂಡಿರುವ ಯಾವುದೇ ವನ್ಯ ಜೀವಿಯ ಅಂಗಾಂಗ, ಟ್ರೋಫಿಯನ್ನು ಸರ್ಕಾರಕ್ಕೆ ಹಿಂತಿರುಗಿಸಲು ಒಂದು ಬಾರಿ ಕಾಲಾವಕಾಶ ನೀಡಲು ಇಂದು ನಡೆದ ಸಚಿವ ಸಂಪುಟ ಸಭೆ ನಿರ್ಧಾರ ಕೈಗೊಳ್ಳಲಾಗಿದೆ.

ಯಾವುದೇ ವನ್ಯಜೀವಿಯ ಅಂಗಾಂಗವನ್ನು ಅಕ್ರಮವಾಗಿ ದಾಸ್ತಾನು ಮಾಡುವುದು, ಸಾಗಾಟ ಮಾಡುವುದು, ಮನೆಯಲ್ಲಿ ಇಟ್ಟುಕೊಳ್ಳುವುದು, ಮಾರಾಟ ಮಾಡುವುದು, ಧರಿಸುವುದು, ವನ್ಯಜೀವಿಗಳ ಮಾಂಸ ಭಕ್ಷಿಸುವುದು ಶಿಕ್ಷಾರ್ಹ ಅಪರಾಧವಾಗಿದೆ.

ವನ್ಯಜೀವಿ (ಸಂರಕ್ಷಣಾ) (ಕರ್ನಾಟಕ ನಿಯಮಗಳು) 1973 ರ ನಿಯಮ 34 (1) ರಡಿಯಲ್ಲಿ ನಿಯಮ ಜಾರಿಯಾದ ಸಂದರ್ಭದಲ್ಲಿ 1973ರಲ್ಲಿ 30 ದಿನಗಳ ಕಾಲ ನಂತರ 2003 ರಲ್ಲಿ ಮತ್ತೊಮ್ಮೆ 180 ದಿನಗಳ ಕಾಲಾವಕಾಶ ನೀಡಿದ್ದ ಸರ್ಕಾರ, ತಲತಲಾಂತರದಿಂದ ತಮ್ಮಲ್ಲಿರುವ ವನ್ಯಜೀವಿ/ಪ್ರಾಣಿಗಳ ಅಂಗಾಂಗಗಳ ಪದಾರ್ಥಗಳು, ಟ್ರೋಫಿಗಳು ಮತ್ತು ಸಂಸ್ಕರಿಸಿದ ಅಥವಾ ಸಂಸ್ಕರಿಸದ ಟ್ರೋಫಿಗಳ ಬಗ್ಗೆ ಘೋಷಣೆ ಮಾಡಿ, ಮಾಲೀಕತ್ವದ ಹಕ್ಕಿನ ಪ್ರಮಾಣಪತ್ರ ಪಡೆದು ಇಟ್ಟುಕೊಳ್ಳಲು ಕಾಲಾವಾಕಾಶ ನೀಡಲಾಗಿತ್ತು.

ಇದನ್ನೂ ಓದಿ: ಒಂದು ವರ್ಷಕ್ಕೆ ರಾಜ್ಯಕ್ಕೆ ಬರಬೇಕಾದ 14 ಸಾವಿರ ಕೋಟಿ ರೂ. ಪಾಲು ಕುಂಟಿತ: ಕೃಷ್ಣ ಭೈರೇಗೌಡ

ಆ ರೀತಿ ಪ್ರಮಾಣ ಪತ್ರ ಪಡೆದಿರುವವರಿಗೆ ಈಗಲೂ ಅಂತಹ ವಸ್ತು ಇಟ್ಟುಕೊಳ್ಳಲು ಅವಕಾಶ ಇದೆ. ಆದರೆ ಹಲವು ಜನರಿಗೆ ಈ ಹಿಂದೆ ನೀಡಲಾಗಿದ್ದ ಕಾಲಾವಕಾಶದ ಬಗ್ಗೆ ಸಾರ್ವಜನಿಕ ಮಾಹಿತಿಯ ಕೊರತೆ ಇದ್ದು, ಇದು ಶಿಕ್ಷಾರ್ಹ ಅಪರಾಧ ಎಂಬುದೂ ಬಹುತೇಕರಿಗೆ ತಿಳಿದಿರುವುದಿಲ್ಲ. ಈ ಕಾರಣಕ್ಕೆ ಸರ್ಕಾರ 3 ತಿಂಗಳ ಕಾಲಾವಕಾಶ ನೀಡಲು ಇಂದು ಸಚಿವ ಸಂಪುಟದಲ್ಲಿ ಅಂಗೀಕಾರ ಮಾಡಲಾಗಿದ್ದು, ಸದ್ಯದಲ್ಲೇ ಈ ಬಗ್ಗೆ  ಸರ್ಕಾರ ಅಧಿಸೂಚನೆ ಹೊರಡಿಸಲಿದೆ.

ಕೇಂದ್ರ ಪುರಸ್ಕೃತ ASCAD ಯೋಜನೆಯಡಿ ರಾಜ್ಯದ ಜಾನುವಾರುಗಳಿಗೆ ಜಂತುನಾಶಕ ಔಷಧಿಗಳನ್ನು ರೂ. 31.15 ಕೋಟಿಗಳ ವೆಚ್ಚದಲ್ಲಿ (ಕೇಂದ್ರದ ಪಾಲು ಶೇ. 60 ಮತ್ತು ರಾಜ್ಯದ ಪಾಲು ಶೇ. 40) ಒದಗಿಸುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ವಿದ್ಯಾರ್ಥಿನಿಲಯಗಳಿಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಸಂಬಂಧ ಪ್ರಸ್ತುತ ಇರುವ ಆರ್ಥಿಕ ಮಿತಿಯನ್ನು ಸಡಿಲಗೊಳಿಸಿ, ಎರಡು ವರ್ಷಗಳ ಅವಧಿಗೆ ಅಗತ್ಯವಿರುವ ಮೊತ್ತದಷ್ಟು ಖರೀದಿಸಲು ಜಿಲ್ಲೆಗೆ ಟೆಂಡರ್ ಕರೆದು ಅನುಮೋದಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲು ಅನುಮೋದಿಸಲಾಗಿದೆ.

2023-24ನೇ ಸಾಲಿನ ನಬಾರ್ಡ್ ಆರ್‌ಐಡಿಎಫ್ ಯೋಜನೆಯಡಿಯಲ್ಲಿ ಕೃಷಿ ಮಾರುಕಟೆ ಇಲಾಖೆಯಿಂದ ಮೂರು ಜಿಲ್ಲೆಗಳ ಎಪಿಎಂಸಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಒಟ್ಟು ರೂ. 33 ಕೋಟಿಗಳ ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.

ಇದನ್ನೂ ಓದಿ: ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಯಾರೇ ಉಲ್ಲಂಘಿಸಿದ್ದರೂ ಕ್ರಮ ಜರುಗಿಸಲಾಗುವುದು: ಈಶ್ವರ್ ಖಂಡ್ರೆ, ಆರಣ್ಯ ಖಾತೆ ಸಚಿವ

“ಕರ್ನಾಟಕ ಸಹಕಾರ ಸೇವಾ (ವೃಂದ ಮತ್ತು ನೇಮಕಾತಿ) (ತಿದ್ದುಪಡಿ) ನಿಯಮಗಳು, 2024″ಕ್ಕೆ ಅನುಮೋದನೆ. ಕೇಂದ್ರ ಪುರಸ್ಕೃತ ಯೋಜನೆಯಾದ ಪ್ರಾಥಮಿಕ ಕೃಷಿ ಪತಿನ ಸಹಕಾರ ಸಂಘಗಳ ಗಣಕೀಕರಣ ಯೋಜನೆಯಲ್ಲಿ 5491 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪ್ಯಾಕ್ಸ್‌ಗಳ) Data Digitization and Migration Support ಕಾರ್ಯವನ್ನು ರೂ. 71.38 ಕೋಟಿಗಳ ಮೊತದಲಿ ಪೂರ್ಣಗೊಳಿಸಲು ಆಡಳಿತಾತ್ಮಕ ಅನುಮೋದನೆ.

2023-24ನೇ ಸಾಲಿನಲ್ಲಿ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳನ್ನು ಭರ್ತಿ ಮಾಡಲು KPSC ಹೊರಡಿಸುವ ಅಧಿಸೂಚನೆಯಲ್ಲಿ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ಒಂದು ಬಾರಿಯ ಕ್ರಮವಾಗಿ (One time measure) ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ. ಬಿವಿಬಿ ಇಂಜಿನಿಯರಿಂಗ್ ಮಹಾವಿದ್ಯಾಲಯ ಹುಬ್ಬಳ್ಳಿ – ಇಲ್ಲಿನ ಅನುದಾನಿತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಸೇವೆಯನ್ನು ಕೆ.ಎಲ್.ಇ ತಾಂತ್ರಿಕ ವಿಶ್ವವಿದ್ಯಾಲಯದ ಅನುದಾನಿತ ವಿಭಾಗಗಳಿಗೆ ಮುಂದುವರೆಸಲು ಅನುಮೋದಿಸಲಾಗಿದೆ.

ಬೆಂಗಳೂರಿನ ವಿಶ್ವೇಶ್ವರಯ್ಯ ಕಾಲೇಜ್ ಇಂಜಿನಿಯರಿಂಗ್ ಯೂನಿವರ್ಸಿಟಿಯನ್ನು (UVCE) ಉನ್ನತೀಕರಣಗೊಳಿಸಲು, ಮೂಲಭೂತ ಸೌಕರ್ಯಗಳನ್ನು ಒದಗಿಸಲು 25.00 ಕೋಟಿಗಳ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

“ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣೆ) (ತಿದ್ದುಪಡಿ) ವಿಧೇಯಕ, 2024ಕ್ಕೆ ಅನುಮೋದನೆ
ಬಸವರಾಜ ರಾಯರೆಡ್ಡಿ, ಬಿ ಆರ್ ಪಾಟೀಲ್, ಆರ್ ವಿ ದೇಶಪಾಂಡೆ ಸೇರಿ ಹಲವರ ಹುದ್ದೆ ಗಳಿಗೆ ಸಮಸ್ಯೆ ಬರಬಾರದು ಎಂಬ ಕಾರಣಕ್ಕೆ ತಿದ್ದುಪಡಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ, 2024”ಕ್ಕೆ ಅನುಮೋದನೆ. ಇದರ ಪ್ರಕಾರ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಬಳಕೆ ಮಾಡಬೇಕು.

“ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ,2023”ಕ್ಕೆ ಘಟನೋತ್ತರ, “ಕರ್ನಾಟಕ ಸಿವಿಲ್ ನ್ಯಾಯಾಲಯಗಳ (ತಿದ್ದುಪಡಿ) ವಿಧೇಯಕ,2023”ಕ್ಕೆ ಘಟನೋತ್ತರ, “ಕರ್ನಾಟಕ ಉಚ್ಚ ನ್ಯಾಯಾಲಯ (ತಿದ್ದುಪಡಿ) ವಿಧೇಯಕ, 2023″ಕ್ಕೆ ಘಟನೋತ್ತರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 800 ಕೋಟಿ ರೂ.ಗಳ ಅ‌ನುದಾನದಲ್ಲಿ 43 ಹೊಸ ವೈಟ್ ಟಾಪಿಂಗ್ ಕಾಮಗಾರಿಗಳನ್ನು ಕೈಗೊಳ್ಳುವ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:55 pm, Fri, 5 January 24