ವಿದ್ಯುತ್​​ ಕೊರತೆ ನೀಗಿಸಲು ಸರ್ಕಾರದಿಂದ ದಿಟ್ಟ ಕ್ರಮ: ಸಿಎಂ ಸಿದ್ದರಾಮಯ್ಯ

|

Updated on: Oct 21, 2023 | 11:02 PM

ವಿದ್ಯುತ್​​ ಕೊರತೆ ನೀಗಿಸಲು ರಾಜ್ಯ ಸರ್ಕಾರ ದಿಟ್ಟ ಕ್ರಮ ಕೈಗೊಂಡಿರುವ ಕುರಿತಾಗಿ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಉತ್ಪಾದನೆ ಕಡಿಮೆಯಿದ್ದು, ಬೇಡಿಕೆ ಹೆಚ್ಚಿರುವುದರಿಂದ ಅನಿವಾರ್ಯವಾಗಿ ತಾತ್ಕಾಲಿಕ ಒಡಂಬಡಿಕೆಯ ಮೇರೆಗೆ ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಗೆ ನಾವು ಮುಂದಾಗಿದ್ದೇವೆ ಎಂದಿದ್ದಾರೆ.

ವಿದ್ಯುತ್​​ ಕೊರತೆ ನೀಗಿಸಲು ಸರ್ಕಾರದಿಂದ ದಿಟ್ಟ ಕ್ರಮ: ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Follow us on

ಬೆಂಗಳೂರು, ಅಕ್ಟೋಬರ್​​​ 21: ರಾಜ್ಯದಲ್ಲಿ ಲೋಡ್‌ಶೆಡ್ಡಿಂಗ್‌ಗೆ ಆಕ್ರೋಶ ಭುಗಿಲೆದ್ದಿದೆ. ರೈತರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ವಿದ್ಯುತ್‌ ಸಮಸ್ಯೆಯಿಂದ ಕಂಗಾಲಾಗಿರುವ ಅನ್ನದಾತರು ಕಚೇರಿಗೆ ಮುತ್ತಿಗೆ ಹಾಕಿದ್ದರು. ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಗೆ ನಾವು ಮುಂದಾಗಿದ್ದೇವೆ ಎಂದು ಕಾಂಗ್ರೆಸ್​ ನಾಯಕರು ಹೇಳಿದ್ದರು. ಇದೀಗ ವಿದ್ಯುತ್​​ ಕೊರತೆ ನೀಗಿಸಲು ರಾಜ್ಯ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಮಾಹಿತಿ ನೀಡಿದ್ದಾರೆ.

ಈ ಕುರಿತಾಗಿ ಎಕ್ಸ್​ನಲ್ಲಿ ಟ್ವೀಟ್​ ಮಾಡಿರುವ ಸಿಎಂ ಸಿದ್ದರಾಮಯ್ಯ, ಮಳೆ ಕೊರತೆಯಿಂದಾಗಿ ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕನಿಷ್ಠ ಮಟ್ಟಕ್ಕೆ ಕುಸಿದಿದೆ, ಇದರಿಂದಾಗಿ ಜಲವಿದ್ಯುತ್ ಉತ್ಪಾದಕ ಘಟಕಗಳು ತಮ್ಮ ಸಾಮರ್ಥ್ಯಕ್ಕೆ ಸಮನಾಗಿ ವಿದ್ಯುತ್ ಉತ್ಪಾದಿಸಲು ಸಾಧ್ಯವಿಲ್ಲದಂತಾಗಿದೆ. ಉತ್ಪಾದನೆ ಕಡಿಮೆಯಿದ್ದು, ಬೇಡಿಕೆ ಹೆಚ್ಚಿರುವುದರಿಂದ ಅನಿವಾರ್ಯವಾಗಿ ತಾತ್ಕಾಲಿಕ ಒಡಂಬಡಿಕೆಯ ಮೇರೆಗೆ ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಗೆ ನಾವು ಮುಂದಾಗಿದ್ದೇವೆ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಟ್ವೀಟ್​


ವಿದ್ಯುತ್ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ನವೀಕರಿಸಬಹುದಾದ ಇಂಧನ ಮೂಲಗಳ ಪರಿಣಾಮಕಾರಿ ಬಳಕೆಯ ಮೂಲಕ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವ ಕಡೆಗೂ ಗಮನ ಹರಿಸಿದ್ದೇವೆ. ನಾವು ವೆಸ್ಟಂಡ್‌ ಹೋಟೆಲ್‌ನಲ್ಲಿ ಕೂತು ಸರ್ಕಾರ ನಡೆಸುತ್ತಿಲ್ಲ, ಜನರ ನಡುವೆ ಇದ್ದು ಅವರ ಕಷ್ಟಕ್ಕೆ ಹೆಗಲಾಗಿ ನಿಂತಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಸರ್ಕಾರ ಕೈಗೊಂಡಿರುವ ದಿಟ್ಟ ಕ್ರಮಗಳು ಹೀಗಿವೆ

  • ರೈತರಿಗೆ ಮೂರು ಪಾಳಿಯಲ್ಲಿ ನಿರಂತರ 5 ಗಂಟೆಗಳ ವಿದ್ಯುತ್‌ ಪೂರೈಕೆಗೆ ಸೂಚನೆ.
  • ಉತ್ತರ ಪ್ರದೇಶದಿಂದ 300 ಮೆ.ವ್ಯಾ ಮತ್ತು ಪಂಜಾಬ್‌ನಿಂದ 600 ಮೆ.ವ್ಯಾ ವಿದ್ಯುತ್ ಖರೀದಿಗೆ ಸೂಚನೆ.
  • ವಿದ್ಯುತ್ ಕಾಯ್ದೆಯ ಸೆಕ್ಷನ್ 11 ಜಾರಿ, ರಾಜ್ಯದ ಎಲ್ಲಾ ವಿದ್ಯುತ್‌ ಉತ್ಪಾದನಾ ಘಟಕಗಳು ಗರಿಷ್ಠ ವಿದ್ಯುತ್ ಉತ್ಪಾದಿಸಿ ರಾಜ್ಯದ ಗ್ರಿಡ್​​ಗೆ ಪೂರೈಸುವಂತೆ ಆದೇಶ.
  • ರಾಜ್ಯದ ಶಾಖೋತ್ಪನ್ನ ವಿದ್ಯುತ್‌ ಘಟಕಗಳಿಗೆ ಮರುಚಾಲನೆ.
  • ಎಲ್ಲಾ ಕಲ್ಲಿದ್ದಲು ಸಂಸ್ಥೆಗಳಿಂದ 15 ಲಕ್ಷ ಮೆಟ್ರಿಕ್ ಟನ್ ಪಡೆಯಲು ಕ್ರಮ.
  • ಅಲ್ಪಾವಧಿ ಆಧಾರದಲ್ಲಿ 1300 ಮೆ.ವ್ಯಾ ವಿದ್ಯುತ್ ಖರೀದಿಗೆ ಕ್ರಮ.
  • ಕೆಪಿಸಿಎಲ್​ನ ಅನಿಲ ವಿದ್ಯುತ್‌ ಉತ್ಪಾದನಾ ಘಟಕಗಳಲ್ಲಿ ಕಾರ್ಯಾಚರಣೆ ಆರಂಭಕ್ಕೆ ಕ್ರಮ.
  • ಪಾವಗಡದಲ್ಲಿ ಹೆಚ್ಚುವರಿಯಾಗಿ 300 ಮೆ.ವ್ಯಾ ಮತ್ತು ಕಲಬುರಗಿಯಲ್ಲಿ 500 ಮೆ.ವ್ಯಾ ಸೋಲಾರ್ ಪಾರ್ಕ್ ಸ್ಥಾಪನೆ.
  • ಛತ್ತೀಸ್ ಗಡದಲ್ಲಿಖಾಸಗಿ/ಜಂಟಿ ಹೂಡಿಕೆಯಡಿ ಕ್ಯಾಪ್ಟಿವ್ ಕಲ್ಲಿದ್ದಲು ಗಣಿ ಆರಂಭಕ್ಕೆ ಕ್ರಮ.
  • ಇತರೆ ರಾಜ್ಯಗಳಲ್ಲಿನ stressed out ವಿದ್ಯುತ್‌ ಸ್ಥಾವರಗಳಿಂದ ವಿದ್ಯುತ್‌ ಖರೀದಿಸಲು ಪ್ರಸ್ತಾಪ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:55 pm, Sat, 21 October 23