ಅಭ್ಯರ್ಥಿಗಳಿಂದ ಆನ್​ಲೈನ್ ತಂತ್ರ.. ಪಂಚಾಯತಿ ಕಟ್ಟೆ ಏರಿದ ಫೇಸ್​ಬುಕ್​, ವಾಟ್ಸ್​ಆ್ಯಪ್!

ನಾವು ಮತಕ್ಕಾಗಿ ಹಣ, ಹೆಂಡ ಹಂಚುವುದಿಲ್ಲ, ನಿಮ್ಮ ಕೆಲಸ ಮಾಡಿಕೊಡಲು ಹಣ ಕೇಳುವುದಿಲ್ಲ, ಮುಂದಿನ ಐದು ವರ್ಷ ನಿಮ್ಮ ಆದೇಶದಂತೆ ನಡೆಯುತ್ತೇವೆ ಎಂಬಿತ್ಯಾದಿ ಸಂದೇಶಗಳನ್ನೊಳಗೊಂಡ ಪೋಸ್ಟ್​ಗಳನ್ನು Gram Panchayat Election 2020 ಅಭ್ಯರ್ಥಿಗಳು ಅಪ್​ಲೋಡ್​ ಮಾಡುತ್ತಿದ್ದಾರೆ.

ಅಭ್ಯರ್ಥಿಗಳಿಂದ ಆನ್​ಲೈನ್ ತಂತ್ರ.. ಪಂಚಾಯತಿ ಕಟ್ಟೆ ಏರಿದ ಫೇಸ್​ಬುಕ್​, ವಾಟ್ಸ್​ಆ್ಯಪ್!
ಪ್ರಾತಿನಿಧಿಕ ಚಿತ್ರ
Edited By:

Updated on: Dec 21, 2020 | 3:14 PM

ರಾಮನಗರ: ರಾಜ್ಯದಲ್ಲಿ ಗ್ರಾಮ ಪಂಚಾಯತಿ ಚುನಾವಣಾ ಕಣ ದಿನೇ ದಿನೆ ರಂಗೇರಿದೆ. ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮನೆಮನೆಗೆ ಹೋಗಿ ಮತ ಯಾಚನೆ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲೂ ಕಂಡುಬರುತ್ತಿದೆ.

ಹೀಗಿರುವಾಗ ರಾಮನಗರ ಜಿಲ್ಲೆಯಲ್ಲಿ ಅಭ್ಯರ್ಥಿಗಳು ಇನ್ನೂ ಸ್ವಲ್ಪ ಹೆಚ್ಚಾಗಿಯೇ ಪ್ರಚಾರ ನಡೆಸುತ್ತಿದ್ದಾರೆ. ಮನೆಮನೆ ಪ್ರಚಾರದ ಜತೆ ಆನ್​ಲೈನ್​ ಮೂಲಕವೂ ಮತ ಯಾಚಿಸುತ್ತಿದ್ದಾರೆ. ಈ ಬಾರಿ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಗೆ ಇಳಿದಿದ್ದು, ಫೇಸ್​ಬುಕ್, ಇನ್​ಸ್ಟಾಗ್ರಾಂಗಳನ್ನು ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಆನ್​ಲೈನ್​ಗೂ ಜಾಸ್ತಿ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಪ್ರತಿದಿನವೂ ತಾವು ಪ್ರಚಾರ ನಡೆಸಿದ್ದನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್​ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಫೇಸ್​ಬುಕ್​ನಲ್ಲಿ ಪ್ರಣಾಳಿಕೆ ಲಿಸ್ಟ್
ಇನ್ನು ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವ ಅಭ್ಯರ್ಥಿಗಳು ತಾವು ಚುನಾವಣೆಯಲ್ಲಿ ಗೆದ್ದರೆ ಮಾಡುವ ಕೆಲಸಗಳ ಪಟ್ಟಿಯನ್ನೂ ಫೇಸ್​ಬುಕ್​ನಲ್ಲಿಯೇ ಹಾಕುತ್ತಿದ್ದಾರೆ. ಹಾಗೇ ಹಿಂದೆ ಗೆದ್ದು, ಈ ಬಾರಿ ಮತ್ತೆ ಸ್ಪರ್ಧೆ ಮಾಡುತ್ತಿರುವವರು ತಮ್ಮ ಆಡಳಿತ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು, ಕಾಮಗಾರಿಗಳನ್ನು ಚಿತ್ರ ಸಮೇತ ಫೇಸ್​ಬುಕ್​ನಲ್ಲಿ ಅಪ್ಲೋಡ್​ ಮಾಡಿ, ಮತ್ತೆ ಗೆಲ್ಲಿಸಿ ಎನ್ನುತ್ತಿದ್ದಾರೆ.. ಅಷ್ಟೇ ಅಲ್ಲ ತಮ್ಮ ಬೆಂಬಲಿಗರು, ಮತದಾರರನ್ನು ಟ್ಯಾಗ್​ ಕೂಡ ಮಾಡುತ್ತಿದ್ದಾರೆ. ಈ ಮೂಲಕ ಪರಿಣಾಮಕಾರಿಯಾಗಿ ಮತ್ತು ತ್ವರಿತವಾಗಿ ಮತದಾರರ ಗಮನ ಸೆಳೆಯುತ್ತಿದ್ದಾರೆ.

ಊರಿಂದ ಹೊರಗಿರುವವರ ಗಮನ ಸೆಳೆಯಲು ತಂತ್ರ
ಉದ್ಯೋಗದ ನಿಮಿತ್ತ ಅದೆಷ್ಟೋ ಗ್ರಾಮಗಳ ಅನೇಕ ಜನರು ಪರ ಊರು, ಪಟ್ಟಣಗಳಲ್ಲಿ ನೆಲೆಸಿದ್ದಾರೆ. ಅವರಿಗೆ ತಮ್ಮ ಊರಿನ ಚುನಾವಣೆ ಸಿದ್ಧತೆ, ಅಭ್ಯರ್ಥಿಗಳು ಯಾರೆಂಬುದು ಗೊತ್ತಿರುವುದಿಲ್ಲ. ಅಂಥವರನ್ನೂ ಸೆಳೆಯಲು ಸೋಷಿಯಲ್​ ಮೀಡಿಯಾವನ್ನು ಅಭ್ಯರ್ಥಿಗಳು ಪರಿಣಾಮಕಾರಿಯಾಗಿ ಬಳಕೆ ಮಾಡುತ್ತಿದ್ದಾರೆ. ವಾಟ್ಸ್​ಆ್ಯಪ್​ ಗ್ರೂಪ್​ಗಳನ್ನು ರಚಿಸಿ, ಅದರಲ್ಲಿ ಪರ ಊರುಗಳಲ್ಲಿ ನೆಲೆಸಿರುವವರನ್ನು ಸೇರಿಸಿಕೊಂಡು ಮತಯಾಚನೆ ಮಾಡುವ ತಂತ್ರವೂ ನಡೆಯುತ್ತಿದೆ. ಅವರಿಗೆ ಕರೆ ಮಾಡಿ, ಬನ್ನಿ ನಮಗೇ ಮತ ಹಾಕಿ, ಪರಿಚಯ ನೆನಪಿಟ್ಟುಕೊಳ್ಳಿ ಎಂದು ಹೇಳುತ್ತಿದ್ದಾರೆ.

ಗುಡ್​ ಮಾರ್ನಿಂಗ್..ಗುಡ್​ನೈಟ್​ !
ಇದಿಷ್ಟೇ ಅಲ್ಲ, ಹಲವು ಅಭ್ಯರ್ಥಿಗಳು ತಮ್ಮ ಕ್ಷೇತ್ರದ ಮತದಾರರ ವಾಟ್ಸ್​ಆ್ಯಪ್ ಗುಂಪುಗಳನ್ನು ರಚಿಸಿಕೊಂಡು ಪ್ರತಿದಿನವೂ ತಪ್ಪದೆ ಮತಯಾಚನಾ ಕರಪತ್ರಗಳ ಜತೆ ಗುಡ್​ ಮಾರ್ನಿಂಗ್​, ಗುಡ್ ​ನೈಟ್ ಮೆಸೇಜ್​ ಕಳಿಸಲು ತೊಡಗಿದ್ದಾರೆ.

ನಾವು ಮತಕ್ಕಾಗಿ ಹಣ, ಹೆಂಡ ಹಂಚುವುದಿಲ್ಲ, ನಿಮ್ಮ ಕೆಲಸ ಮಾಡಿಕೊಡಲು ಹಣ ಕೇಳುವುದಿಲ್ಲ, ಮುಂದಿನ ಐದು ವರ್ಷ ನಿಮ್ಮ ಆದೇಶದಂತೆ ನಡೆಯುತ್ತೇವೆ. ನರೇಗಾ ಕಾಮಗಾರಿ, ದೇವಸ್ಥಾನ ಜೀರ್ಣೋದ್ಧಾರಕ್ಕೆ ಆದ್ಯತೆ ನೀಡುತ್ತೇವೆ. ಅಗತ್ಯ ಇರುವವರಿಗೆ ಸವಲತ್ತು ನೀಡುತ್ತೇವೆ ಎಂಬಿತ್ಯಾದಿ ಸಂದೇಶಗಳನ್ನೂ ಮತದಾರರಿಗೆ ಕಳಿಸುತ್ತಿದ್ದಾರೆ.

ಅಭ್ಯರ್ಥಿಗಳ ಫೇಸ್​ಬುಕ್ ಪೋಸ್ಟ್​ಗಳು