ಪರಸಣ್ಣಂಗೆ ಪಂಚಾಯತಿ ನಂಟು ಅಷ್ಟಿಷ್ಟಲ್ಲ..! 6ನೇ ಬಾರಿ ಅಖಾಡಕ್ಕೆ ಇಳಿದ ಸೋಲಿಲ್ಲದ ಅಣ್ಣ
ಪರಸಣ್ಣಂದು ರಾಜಕೀಯ ಕುಟುಂಬ. 50ವರ್ಷಗಳ ಹಿಂದೆ ಗ್ರೂಪ್ ಪಂಚಾಯಿತಿ ವ್ಯವಸ್ಥೆಯಿದ್ದಾಗ ಇವರ ಅಜ್ಜ ಚೇರ್ಮೆನ್ ಆಗಿದ್ದರು. ತಾಯಿ ಹಾಲಮ್ಮ 2005ರಲ್ಲಿ ದಾವಣಗೆರೆ ಜಿಪಂ ಚುನಾವಣೆಯಲ್ಲಿ ಕಡ್ಲೇಬಾಳು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು, ಅಧ್ಯಕ್ಷೆಯಾಗಿದ್ದರು.

ದಾವಣಗೆರೆ: ಇಲ್ಲಿನ ಮಾಗಾನಹಳ್ಳಿ ಸುತ್ತಮುತ್ತ ಪರಸಣ್ಣ ಎಂದರೆ ಚಿಕ್ಕಮಕ್ಕಳಿಗೂ ಗೊತ್ತು.. ಅಷ್ಟು ಹೆಸರುವಾಸಿ ಇವರು. ಎಲ್ಲರಿಂದಲೂ ಅಣ್ಣ ಎಂದೇ ಕರೆಸಿಕೊಳ್ಳುವ ಪರಸಣ್ಣಂಗೂ-ಪಂಚಾಯಿತಿಗೂ ಎಲ್ಲಿಲ್ಲದ ನಂಟು. ಎಷ್ಟೆಂದರೆ ಪಂಚಾಯತಿ ಪರಸಣ್ಣ ಎಂದೇ ಕರೆಯಲ್ಪಡುವಷ್ಟು !
ಸತತವಾಗಿ ಐದು ಬಾರಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿ.. ಇದೀಗ 6ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಹೊರಟಿರುವ ವಿಶೇಷ ವ್ಯಕ್ತಿ ಪರಸಣ್ಣನ ಬಗ್ಗೆ ಒಂದಷ್ಟು ಕುತೂಹಲಕರಾಗಿ ಮಾಹಿತಿಗಳು ಇಲ್ಲಿವೆ..
ಪರಸಣ್ಣನ ನಿಜವಾದ ಹೆಸರು ಬಿ.ಕೆ.ಪರಶುರಾಮ್. ಮಾಗಾನಹಳ್ಳಿ ನಿವಾಸಿಯಾಗಿರುವ ಇವರು ಕಡ್ಲೇಬಾಳು ಗ್ರಾ.ಪಂ.ಗೆ ಸತತ ಐದು ಬಾರಿ ಆಯ್ಕೆಯಾಗಿದ್ದಾರೆ. ಒಟ್ಟು ಐದು ಬಾರಿ ಗ್ರಾ.ಪಂ.ಗೆ ಆಯ್ಕೆಯಾದ ಇವರು, 2000-2003, 2007-2010 ಹಾಗೂ 2015-2020ರ ಅವಧಿಯಲ್ಲಿ ಅಂದರೆ ಮೂರು ಬಾರಿ ಗ್ರಾ.ಪಂ. ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಈ ಮೂಲಕ ಕಡ್ಲೇಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ.
ರಾಜಕೀಯ ಕುಟುಂಬ ಪರಸಣ್ಣಂದು ರಾಜಕೀಯ ಕುಟುಂಬ. 50 ವರ್ಷಗಳ ಹಿಂದೆ ಗ್ರೂಪ್ ಪಂಚಾಯಿತಿ ವ್ಯವಸ್ಥೆಯಿದ್ದಾಗ ಇವರ ಅಜ್ಜ ಚೇರ್ಮೆನ್ ಆಗಿದ್ದರು. 1995ರ ಅವಧಿಯಲ್ಲಿ ದಾವಣಗೆರೆ ಚಿತ್ರದುರ್ಗ ಜಿಲ್ಲೆಯ ಭಾಗವೇ ಆಗಿತ್ತು. ಆ ವೇಳೆ ಪರಸಣ್ಣನವರ ತಂದೆ ಕೆಂಚಪ್ಪ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಇನ್ನು ತಾಯಿ ಹಾಲಮ್ಮ 2005ರಲ್ಲಿ ದಾವಣಗೆರೆ ಜಿಪಂ ಚುನಾವಣೆಯಲ್ಲಿ ಕಡ್ಲೇಬಾಳು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು, ಅಧ್ಯಕ್ಷೆಯಾಗಿದ್ದರು.
ಹೀಗೆ ತಲೆತಲಾಂತರದಿಂದಲೂ ಪರಸಣ್ಣ ಕುಟುಂಬ ರಾಜಕೀಯದಲ್ಲಿ ಸಕ್ರಿಯವಾಗಿದೆ. ಒಂದು ವಿಶೇಷವೆಂದರೆ ಪರಸಣ್ಣನವರಿಗೂ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಕ್ಷೇತ್ರಗಳಿಗೆ ಸ್ಪರ್ಧಿಸುವಂತೆ ಆಹ್ವಾನ ಬಂದಿತ್ತು. ಆದರೆ ಅದನ್ನವರು ನಿರಾಕರಿಸಿದ್ದಾರೆ. ಗ್ರಾ.ಪಂ. ಎಂದರೆ ನನಗೆ ಬಲು ಇಷ್ಟ ಎನ್ನುವ ಪರಸಣ್ಣ ಮತ್ತೆ ಸ್ಪರ್ಧೆಗೆ ಸಜ್ಜಾಗಿದ್ದಾರೆ.
ಗ್ರಾ.ಪಂ. ಚುನಾವಣಾ ಕಣದಲ್ಲಿ BE, MBA ಪದವೀಧರರು.. ಅಭ್ಯರ್ಥಿಗಳಾಗಲು ಉದ್ಯೋಗವನ್ನೇ ತೊರೆದರು..
Published On - 2:14 pm, Mon, 21 December 20