AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಲಿತಾಂಶ ಬಂದಾಯ್ತು.. ಇನ್ನು ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿ ಗ್ರಾಮ ಪಂಚಾಯತಿ ಸದಸ್ಯರು

ಬಹುಮತಗಳಿಸಲು ಬೇಕಾದ ಸದಸ್ಯರ ಬೆಂಬಲ ಪಡೆಯಲು ತೆರೆಮರೆಯ ಕಸರತ್ತನ್ನು ನಡೆಸುತ್ತಿದ್ದಾರೆ. ತಮಗೆ ಆತ್ಮೀಯರಾಗಿರುವ ಗ್ರಾಮದ ಮುಖಂಡರು, ರಾಜಕೀಯ ನಾಯಕರು, ಧಾರ್ಮಿಕ ಮುಖಂಡರ ಮೂಲಕ, ಮೀಸಲಾತಿ ತನ್ನ ಪರವಾಗಿ ಬಂದರೆ, ಅಧ್ಯಕ್ಷರಾಗಲು, ಉಪಾಧ್ಯಕ್ಷರಾಗಲು ಸದಸ್ಯರು ಒತ್ತಡ ಹಾಕಿಸುವ ತಂತ್ರವನ್ನು ಪ್ರಾರಂಭಿಸಿದ್ದಾರೆ.

ಫಲಿತಾಂಶ ಬಂದಾಯ್ತು.. ಇನ್ನು ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿ ಗ್ರಾಮ ಪಂಚಾಯತಿ ಸದಸ್ಯರು
ಸಾಂದರ್ಭಿಕ ಚಿತ್ರ
sandhya thejappa
|

Updated on:Jan 01, 2021 | 12:31 PM

Share

ಕಲಬುರಗಿ: ಕೊರೊನಾದ ಆತಂಕದ ನಡುವೆಯೇ ರಾಜ್ಯದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಮತ್ತು ಮತ ಎಣಿಕೆ ಪಕ್ರಿಯೆ ಸರಾಗವಾಗಿ ಮುಗಿದಿದ್ದು, ಎಲ್ಲಾ ಕಡೆ ಫಲಿತಾಂಶ ಘೋಷಣೆಯಾಗಿದೆ. ಗೆದ್ದವರು ಹೊಸ ವರ್ಷದ ಜೊತೆ ತಮ್ಮ ಗೆಲುವಿನ ಸಂಭ್ರಮಾಚರಣೆ ಕೂಡಾ ಮಾಡಿದ್ದಾರೆ. ಮತ್ತೊಂದೆಡೆ ಸೋತವರು ಸೋಲಿನ ಆತ್ಮ ವಿಮರ್ಶೆ ಮಾಡಿಕೊಳ್ಳುತ್ತಿದ್ದಾರೆ. ವಿಜೇತ ಅಭ್ಯರ್ಥಿಗಳು ಗೆಲುವಿನ ಸಂಭ್ರಮಾಚರಣೆ ಜೊತೆಗೆ ಇದೀಗ ಮತ್ತೊಂದು ಹುದ್ದೆ ಮೇಲೆ ಕಣ್ಣು ಹಾಕಿದ್ದಾರೆ. ಹೌದು, ವಿಜೇತ ಅಭ್ಯರ್ಥಿಗಳು ಇದೀಗ ಗ್ರಾಮ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಅದಕ್ಕಾಗಿ ತಯಾರಿ ಪ್ರಾರಂಭಿಸಿದ್ದಾರೆ.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟ ಸದಸ್ಯರು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದವರ ಕಣ್ಣು ಇದೀಗ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆ ಮೇಲೆ ಬಿದ್ದಿದೆ. ಕೇವಲ ಗ್ರಾಮ ಪಂಚಾಯತಿ ಸದಸ್ಯರಾದರೆ ಸಾಲೋದಿಲ್ಲಾ ಅಧ್ಯಕ್ಷರಾಗಬೇಕು ಮತ್ತು ಉಪಾಧ್ಯಕ್ಷರಾಗಬೇಕು ಅಂತ ತೆರೆಮರೆಯಲ್ಲಿ ತಯಾರಿಯನ್ನು ಪ್ರಾರಂಭಿಸಿದ್ದಾರೆ. ತಾವು ಗೆಲ್ಲುತ್ತಿದ್ದಂತೆ ತಮ್ಮ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಯಾರೆಲ್ಲಾ ಗೆದ್ದಿದ್ದಾರೆ. ಅದರಲ್ಲಿ ಯಾರೆಲ್ಲರು ತಮಗೆ ಆತ್ಮೀಯರಾಗಿದ್ದಾರೆ ಅನ್ನೋದನ್ನು ಪತ್ತೆ ಮಾಡಿ, ಅವರನ್ನು ಸಂಪರ್ಕಿಸುವ ಕೆಲಸವನ್ನು ಪ್ರಾರಂಭಿಸಿದ್ದಾರೆ.

ಬಹುಮತಗಳಿಸಲು ಬೇಕಾದ ಸದಸ್ಯರ ಬೆಂಬಲ ಪಡೆಯಲು ತೆರೆಮರೆಯ ಕಸರತ್ತನ್ನು ನಡೆಸುತ್ತಿದ್ದಾರೆ. ತಮಗೆ ಆತ್ಮೀಯರಾಗಿರುವ ಗ್ರಾಮದ ಮುಖಂಡರು, ರಾಜಕೀಯ ನಾಯಕರು, ಧಾರ್ಮಿಕ ಮುಖಂಡರ ಮೂಲಕ, ಮೀಸಲಾತಿ ತನ್ನ ಪರವಾಗಿ ಬಂದರೆ, ಅಧ್ಯಕ್ಷರಾಗಲು, ಉಪಾಧ್ಯಕ್ಷರಾಗಲು ಸದಸ್ಯರು ಬೆಂಬಲಿಸುವಂತೆ ಒತ್ತಡ ಹಾಕಿಸುವ ತಂತ್ರವನ್ನು ಪ್ರಾರಂಭಿಸಿದ್ದಾರೆ.

ಮೀಸಲಾತಿ ನಿಗದಿಗಾಗಿ ಕಾಯುತ್ತಿರುವ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿಯಾಗಬೇಕಿದೆ. ಅದನ್ನು ಆಯಾ ಜಿಲ್ಲಾಧಿಕಾರಿಗಳು ಮಾಡುತ್ತಾರೆ. ಯಾವ ಪಂಚಾಯತಿಗೆ ಯಾರು ಅಧ್ಯಕ್ಷರಾಗಬೇಕು. ಯಾರು ಉಪಾಧ್ಯಕ್ಷರಾಗಬೇಕು. ಯಾವ ವರ್ಗಕ್ಕೆ ಯಾವುದು ಮೀಸಲು ಅನ್ನೋದನ್ನು ಜಿಲ್ಲಾಧಿಕಾರಿಗಳು ನಿರ್ಧಾರ ಮಾಡುತ್ತಾರೆ. ಗ್ರಾಮ ಪಂಚಾಯತಿ ಚುನಾವಣೆ ಪ್ರಕ್ರಿಯೆ ಮುಗಿದಿದ್ದರಿಂದ ಕೆಲವೇ ದಿನಗಳಲ್ಲಿ ಪ್ರತಿಯೊಂದು ಜಿಲ್ಲೆಯ ಜಿಲ್ಲಾಧಿಕಾರಿಗಳು ಆಯಾ ಗ್ರಾಮ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯನ್ನು ನಿಗದಿ ಮಾಡಿ, ಆದೇಶ ಹೊರಡಿಸಲಿದ್ದಾರೆ.

ಈ ಹಿಂದೆ ಯಾರು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿದ್ದಾರೆ. ಯಾವ ವರ್ಗಕ್ಕೆ ನೀಡಲಾಗಿದೆ. ಯಾವ ವರ್ಗಕ್ಕೆ ಇನ್ನು ನೀಡಲಾಗಿಲ್ಲಾ ಎಂಬುದು ಸೇರಿದಂತೆ ಅನೇಕ ಮಾನದಂಡಗಳನ್ನು ಇಟ್ಟುಕೊಂಡು ಮೀಸಲಾತಿಯನ್ನು ನಿಗದಿ ಮಾಡಲಾಗುತ್ತದೆ. ಹೀಗಾಗಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದವರು ಇದೀಗ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಯಾವ ವರ್ಗಕ್ಕೆ ಮೀಸಲಾಗುತ್ತದೆ ಎನ್ನುವುದನ್ನು ಎದುರು ನೋಡುತ್ತಿದ್ದಾರೆ.

ಹೇಗೆ ನಡೆಯುತ್ತದೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆ? ಪ್ರತಿಯೊಂದು ಗ್ರಾಮ ಪಂಚಾಯತಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಇರುತ್ತಾರೆ. ಚುನಾವಣೆ ಮುಗಿದು ಸದಸ್ಯರ ಹೆಸರು ಪ್ರಕಟಿಸಿದ ನಂತರ ತಿಂಗಳೊಳಗಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆ ಪಕ್ರಿಯೆ ನಡೆಯುತ್ತದೆ. ಸಂಬಂಧಪಟ್ಟ ಅಧಿಕಾರಿ ಈ ಬಗ್ಗೆ ಸಭೆಯನ್ನು ಕರೆದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕ ಮಾಡುತ್ತಾರೆ. ಗ್ರಾಮ ಪಂಚಾಯತಿಯಲ್ಲಿರುವ ಒಟ್ಟು ಸದಸ್ಯರ ಪೈಕಿ ಅರ್ಧಕ್ಕೂ ಹೆಚ್ಚು ಸದಸ್ಯರು ಯಾರನ್ನು ಬೆಂಬಲಿಸುತ್ತಾರೋ ಅವರು ಗ್ರಾಮ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಇವರ ಅಧಿಕಾರದ ಅವಧಿ ಮೂವತ್ತು ತಿಂಗಳು ಇರುತ್ತದೆ.

ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾದವರಿಗೆ ಹೆಚ್ಚಿನ ಅಧಿಕಾರ ಸಿಗುತ್ತದೆ. ಗ್ರಾಮ ಪಂಚಾಯತಿಯ ಯಾವುದೇ ಬಿಲ್ ಪಾಸಾಗ ಬೇಕಾದರು ಕೂಡಾ ಅದಕ್ಕೆ ಅಧ್ಯಕ್ಷರ ಸಹಿ ಕಡ್ಡಾಯ. ಹೀಗಾಗಿ ಚುನಾವಣೆಯಲ್ಲಿ ಗೆದ್ದವರು ಇದೀಗ ಮತ್ತೊಂದು ಅಧಿಕಾರದ ಗದ್ದುಗೆ ಏರಲು ಸಿದ್ಧತೆ ಪ್ರಾರಂಭಿಸಿದ್ದಾರೆ. ಮೀಸಲಾತಿ ನಿಗದಿಯಾದ ಮೇಲೆ ಸ್ಪರ್ಧೆಯ ಕಾವು ಹೆಚ್ಚಾಗಲಿದೆ. ಗೆದ್ದ ವ್ಯಕ್ತಿಗಳು ತಮಗೆ ಮೀಸಲಾತಿಯ ಲಾಭ ಸಿಕ್ಕರೆ ತಾವೊಂದು ಚಾನ್ಸ್ ನೋಡಬೇಕು. ಇಲ್ಲದಿದ್ದರೆ ತಮಗೆ ಬೇಕಾದವರನ್ನು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೇಲೆ ಕೂರಿಸಬೇಕು ಎನ್ನುವ ತಂತ್ರವನ್ನು ರೂಪಿಸುತ್ತಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಶಾಂತಿಯುತವಾಗಿ ಗ್ರಾಮ ಪಂಚಾಯತಿಯ ಮತ ಎಣಿಕೆ ಮುಗಿದಿದೆ. ಇದೀಗ ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ ಮಾಡಬೇಕಿದೆ. ಆದಷ್ಟು ಬೇಗನೆ ಮೀಸಲಾತಿಯನ್ನು ನಿಗದಿ ಮಾಡಲಾಗುವುದು. ಮೀಸಲಾತಿ ನಿಗದಿಯಾದ ನಂತರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪಕ್ರಿಯೆ ನಡೆಯಲಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ: 2 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

Published On - 12:29 pm, Fri, 1 January 21