ದಡ ಸೇರುತ್ತಿಲ್ಲ ಮೀನುಗಾರರ ಬದುಕು; ಸಂಪಾದನೆಯಿಲ್ಲ.. ಸೌಲಭ್ಯವೂ ಇಲ್ಲ

ಮೊದಲೇ ಸಂಕಷ್ಟದಲ್ಲಿರುವ ಮೀನುಗಾರರ ಪರಿಸ್ಥಿತಿಯನ್ನು ಕೆಲವು ಮಧ್ಯವರ್ತಿಗಳು ಬಂಡವಾಳವನ್ನಾಗಿಸಿಕೊಳ್ಳುತ್ತಿದ್ದಾರೆ .  ಮುಂಗಡವಾಗಿ ಹಣ ನೀಡಿ, ಅಗ್ಗದ ದರದಲ್ಲಿ ಮೀನು ಖರೀದಿ ಮಾಡಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ, ತಮಗೆ ಲಾಭ ಮಾಡಿಕೊಳ್ಳುತ್ತಿದ್ದಾರೆ.

ದಡ ಸೇರುತ್ತಿಲ್ಲ ಮೀನುಗಾರರ ಬದುಕು; ಸಂಪಾದನೆಯಿಲ್ಲ.. ಸೌಲಭ್ಯವೂ ಇಲ್ಲ
ಸಂಕಷ್ಟದಲ್ಲಿರುವ ಮೀನುಗಾರರು
Lakshmi Hegde

| Edited By: pruthvi Shankar

Jan 02, 2021 | 7:37 AM

ಬೀದರ್: ಒಮ್ಮೆ ಅತಿವೃಷ್ಟಿ.. ಇನ್ನೊಮ್ಮೆ ಅನಾವೃಷ್ಟಿಯ ಹೊಡೆತದಿಂದಾಗಿ ಮೀನುಗಾರರ ಬದುಕು ಕಷ್ಟಕ್ಕೆ ದೂಡಲ್ಪಟ್ಟಿದೆ. ಕಳೆದ 5 ವರ್ಷಗಳಿಂದ ವರುಣನ ಅವಕೃಪೆಯಿಂದ ಮೀನುಗಾರರ ಬದುಕು ತೀವ್ರ ಸಂಕಷ್ಟಕ್ಕೀಡಾಗಿತ್ತು. ಆದರೆ ಈ ಬಾರಿ ಒಳ್ಳೆಯ ಮಳೆಯಾಗಿದ್ದರೂ ಅವರ ಗೋಳು ಮಾತ್ರ ತಪ್ಪುತ್ತಿಲ್ಲ.

ಈ ಸಲ ಜಿಲ್ಲೆಯಲ್ಲಿ ಒಳ್ಳೆಯ ಮಳೆಯಾಗಿದೆ. ಅಷ್ಟೇ ಅಲ್ಲ ತೆಲಂಗಾಣ ಭಾಗದಲ್ಲಿ ಬಿದ್ದ ಉತ್ತಮ ಮಳೆಯಿಂದಾಗಿ ಬೀದರ್​ ಜಿಲ್ಲೆಯ ಹಾಲಹಳ್ಳಿ ಗ್ರಾಮದ ಬಳಿಯ ಕಾರಂಜಾ ಜಲಾಶಯ ಸೇರಿ, ಉಳಿದ ಕೆರೆಕಟ್ಟೆಗಳೂ ತುಂಬಿವೆ. ಇದು ಮೀನುಗಾರರ ಪಾಲಿಗೆ ಖುಷಿಯ ವಿಚಾರವೇನೋ ಹೌದು. ಆದರೆ ಅದನ್ನು ಸಂಭ್ರಮಿಸಲು ಸೌಲಭ್ಯಗಳ ಕೊರತೆ ಎದುರಾಗಿದೆ. ಸರ್ಕಾರದಿಂದ ಸಿಗಬೇಕಾದ ಯಾವುದೇ ಸೌಕರ್ಯಗಳೂ ಸಿಗುತ್ತಿಲ್ಲದ ಕಾರಣ, ಬದುಕು ಅತಂತ್ರವಾಗಿದೆ.

ಬೀದರ್​ ಜಿಲ್ಲೆಯ ಜಲಾಶಯಗಳು, 80 ಕೆರೆಕಟ್ಟೆಗಳು ತುಂಬಿದ್ದರಿಂದ ಮೀನುಗಾರರೇನೋ ಉತ್ಸಾಹದಲ್ಲಿ ಇದ್ದಾರೆ. ಆದರೆ ಅವರಿಗೆ ಪ್ರೋತ್ಸಾಹ ಮಾತ್ರ ಸಿಗುತ್ತಿಲ್ಲ. ಕಾರಣ ಅಧಿಕಾರಿಗಳು ನಾಲ್ಕೈದು ವರ್ಷಗಳಿಂದಲೂ ಕೆರೆಕಟ್ಟೆಗಳಲ್ಲಿ ಮೀನುಗಾರಿಕೆ ಅವಕಾಶವನ್ನೇ ಕೊಡುತ್ತಿಲ್ಲ. ಈಗಲೂ ಮೀನು ಹಿಡಿಯಲು ಅವಕಾಶ ಇಲ್ಲ. ಹೀಗಾಗಿ ಮೀನು ಮಾರಾಟದಿಂದ ಬದುಕು ಕಟ್ಟಿಕೊಂಡಿದ್ದ ಜಿಲ್ಲೆಯ ನೂರಾರು ಕುಟುಂಬಗಳು ಪರದಾಡುವಂತಾಗಿದೆ. ಇವರ ಕುಲಕಸುಬಿಗೇ ಕೊಡಲಿ ಏಟು ಬಿದ್ದಂತಾಗಿದ್ದು, ಸರ್ಕಾರಿ ಸೌಲಭ್ಯದಿಂದಲೂ ವಂಚಿತರಾಗಿ ಹೊಟ್ಟೆಪಾಡಿಗೂ ಕಷ್ಟಪಡುವಂತಾಗಿದೆ.

ಜಿಲ್ಲೆಯ ಜಲಾಶಯಗಳಲ್ಲಿ ಅಲ್ಪಸ್ವಲ್ಪ ನೀರು ಇದ್ದಾಗ ಮೀನು ಮರಿಗಳನ್ನು ಬಿಡುವ ಮೂಲಕ ಮೀನುಗಾರಿಕೆಗೆ ಪ್ರೋತ್ಸಾಹ ನೀಡುವುದು ಇಲಾಖೆಯ ಕರ್ತವ್ಯ. ಇದನ್ನೂ ಕೂಡ ಇಲಾಖೆ ಅಧಿಕಾರಿಗಳು ಮಾಡಿಲ್ಲ. ಹೀಗಾಗಿ ಜಲಾಶಯ ತುಂಬಿದರೂ, ಮೀನುಗಾರರು ಹೊಟ್ಟೆ ತುಂಬಿಸಿಕೊಳ್ಳಲು ಹೆಣಗಾಡುವಂತಾಗಿದೆ.

ಜಿಲ್ಲೆಯಲ್ಲಿವೆ 80 ಮೀನು ಸಾಕಾಣಿಕೆ ಕೆರೆಗಳು ಬೀದರ್​ ಜಿಲ್ಲೆಯಲ್ಲಿ 700ಕ್ಕೂ ಹೆಚ್ಚು ಮೀನುಗಾರರ ಕುಟುಂಬಗಳಿವೆ. 15 ಮೀನುಗಾರರ ಸಹಕಾರಿ ಸಂಘಗಳಿವೆ. ಹಾಗೇ 80 ಮೀನು ಸಾಕಾಣಿಕಾ ಬೃಹತ್​ ಕೆರೆಗಳಿವೆ. ಪ್ರತಿ ಸಂಘದ ವ್ಯಾಪ್ತಿಯಲ್ಲಿ 8 ರಿಂದ 10 ಕೆರೆಗಳು ಬರುತ್ತವೆ. ಇನ್ನೂ ಕೆಲವು ಕೆರೆಗಳು ಮೀನುಗಾರಿಕಾ ಇಲಾಖೆ, ಆಯಾ ಗ್ರಾಪಂ ಆಡಳಿತಕ್ಕೆ ಒಳಪಟ್ಟಿವೆ. 5 ವರ್ಷಗಳಿಗೊಮ್ಮೆ ಕೆರೆಗಳ ಟೆಂಡರ್ ಅವಧಿಯನ್ನು ನವೀಕರಿಸಿಕೊಳ್ಳಬೇಕಾಗಿದೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಮೀನುಗಾರರು ಟೆಂಡರ್​ ಅವಧಿ ನವೀಕರಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ನಮಗೆ ಮೀನುಗಾರಿಕೆ ಬಿಟ್ಟು ಬೇರೆ ಉದ್ಯೋಗವೂ ಗೊತ್ತಿಲ್ಲ. ಏನು ಮಾಡುವುದು ಎಂದು ಮೀನುಗಾರರು ಅಲವತ್ತುಕೊಳ್ಳುತ್ತಿದ್ದಾರೆ.

ಬೀದರ್ ಜಿಲ್ಲೆಯ ಜೀವನಾಡಿಯಾಗಿರುವ ಕಾರಂಜಾ ಡ್ಯಾಂನಲ್ಲಿಯೂ ಮೀನು ಮರಿಗಳನ್ನು ಒಂದು ವರ್ಷದಿಂದಲೂ ಬಿಟ್ಟಿಲ್ಲ. ಹೀಗಾಗಿ ಮೀನುಗಾರರ ಸಂಪಾದನೆ ಕುಂಠಿತವಾಗಿದೆ. ಸರ್ಕಾರದಿಂದ ಪ್ರೋತ್ಸಾಹಧನವೂ ಸಿಗುತ್ತಿಲ್ಲ. ಅದರಲ್ಲಿ ನಾಲ್ಕೈದು ಮೀನುಗಾರರ ಸಹಕಾರಿ ಸಂಘದ ಸದಸ್ಯರಿಗಷ್ಟೇ ಸರ್ಕಾರದ ಸೌಲಭ್ಯಗಳು ಸಿಗುತ್ತಿವೆ. ಉಳಿದ ಶೇ.80ರಷ್ಟು ಮೀನುಗಾರರಿಗೆ ಸೌಕರ್ಯಗಳು ತಲುಪುತ್ತಿಲ್ಲ.

ದಡಮುಟ್ಟದ ಬದುಕು ಮೀನುಗಾರರ ಬದುಕು ದಡ ಮುಟ್ಟುತ್ತಿಲ್ಲ. ಮೊದಲೇ ಸಂಕಷ್ಟದಲ್ಲಿರುವ ಇವರ ಪರಿಸ್ಥಿತಿಯನ್ನು ಕೆಲವು ಮಧ್ಯವರ್ತಿಗಳು ಬಂಡವಾಳವನ್ನಾಗಿಸಿಕೊಳ್ಳುತ್ತಿದ್ದಾರೆ. ಮುಂಗಡವಾಗಿ ಹಣ ನೀಡಿ, ಅಗ್ಗದ ದರದಲ್ಲಿ ಮೀನು ಖರೀದಿ ಮಾಡಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ, ತಮಗೆ ಲಾಭ ಮಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಮೀನುಗಾರಿಕೆಗೆ ಬಳಸುವ ಸಾಮಗ್ರಿಗಳ ಬೆಲೆಯೂ ಗಗನಕ್ಕೆ ಏರಿಕೆಯಾಗಿದೆ. ಒಂದು ಕೆಜಿ ಮೀನಿನ ಬಲೆಯ ಬೆಲೆ ಮೊದಲು 150 ರೂ. ಇತ್ತು. ಅದೀಗ 600 ರೂ.ಗೆ ಏರಿಕೆಯಾಗಿದೆ. ಅಲ್ಲದೆ, 1500ಕ್ಕೆ ಸಿಗುತ್ತಿದ್ದ ತೆಪ್ಪಗಳಿಗೆ, 2500ರೂ.ನೀಡಬೇಕಾಗಿದೆ. ಇದನ್ನೆಲ್ಲ ಭರಿಸುವ ಶಕ್ತಿಯೂ ಮೀನುಗಾರರಿಗೆ ಇಲ್ಲ. ಕಾರಣ ಅವರ ಸಂಪಾದನೆ ಏರಿಕೆಯಾಗುತ್ತಿಲ್ಲ.

ಏನಂತಾರೆ ಅಧಿಕಾರಿ? ನಾಲ್ಕೈದು ವರ್ಷಗಳಿಂದಲೂ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಿತ್ತು. ಹೀಗಾಗಿ ಕೆರೆಗಳಲ್ಲಿ ಮೀನುಮರಿಗಳನ್ನು ಬಿಟ್ಟಿರಲಿಲ್ಲ. ಆದರೆ ಈ ವರ್ಷ ಮಳೆ ಚೆನ್ನಾಗಿ ಆಗಿದೆ. ಮೀನು ಮರಿಗಳನ್ನು ಬಿಡುತ್ತೇವೆ. ಮೀನುಗಾರಿಕೆ ಇಲಾಖೆಯಿಂದ ಕಾಲಕಾಲಕ್ಕೆ ಮೀನುಗಾರ ಕುಟುಂಬದವರಿಗೆ ಸೌಲಭ್ಯ ಕೊಡುತ್ತಿದ್ದೇವೆ. ಯಾರಿಗಾದರು ನಮ್ಮ ಇಲಾಖೆಯಿಂದ ಸೌಲಭ್ಯಗಳು ಸಿಗದೆ ಹೋದರೆ ನೇರವಾಗಿ ನನ್ನ ಬಳಿ ಬಂದರೆ ಸಾಕು. ಸಮಸ್ಯೆ ಬಗೆಹರಿಸುತ್ತೇವೆ ಎಂದಿದ್ದಾರೆ ಮೀನುಗಾರಿಕೆ ಇಲಾಖೆ ಅಧಿಕಾರಿ ರಹೆಮಾನ್​.

ಅಬ್ಬಬ್ಬಾ, ಏನ್​ ಚಳಿ ಗುರು ! ಮೈಕೊರೆಯುವ ಚಳಿಗೆ ತತ್ತರಿಸಿದ ಬೀದರ್​; ಮನೆಯಿಂದ ಹೊರಬರೋಕಾಗದೆ ಜನರ ಪರದಾಟ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada