ಧಾರವಾಡ: ಇತ್ತೀಚಿಗಷ್ಟೇ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಮುಕ್ತಾಯವಾಗಿದೆ. ಮತ ಎಣಿಕೆ ಕಾರ್ಯ ಮುಗಿದು, ಇದೀಗ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪಟ್ಟಿ ಕೂಡ ಪ್ರಕಟವಾಗಿದೆ. ಈ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಗಣನೆಗೆ ಬರುವುದಿಲ್ಲ ಅನ್ನುವುದು ಮೇಲ್ನೋಟಕ್ಕೆ ಸತ್ಯವಾದರೂ, ಒಳಗೊಳಗೇ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿ ಗೆಲ್ಲಲಿ ಅಂತಾ ಪ್ರಯತ್ನಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಇನ್ನು ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು ತಮ್ಮ ಪಕ್ಷ ಬೆಂಬಲಿತದವರೇ ಆಗಲಿ ಅನ್ನೋದು ಕೂಡ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಲೆಕ್ಕಾಚಾರವಾಗಿರುತ್ತದೆ. ಈ ಮಧ್ಯೆ ಧಾರವಾಡದ ಗ್ರಾಮ ಪಂಚಾಯತ್ ಸದಸ್ಯರು ಮತ ಎಣಿಕೆ ಮುಗಿದ ಕೂಡಲೇ ಹೊಸ ವರಸೆ ಕಂಡುಕೊಂಡಿರೋದು ಬಯಲಿಗೆ ಬಂದಿದೆ. ಹೇಗಿದ್ದರೂ ಈ ಚುನಾವಣೆಯಲ್ಲಿ ಪಕ್ಷಗಳ ಲೆಕ್ಕಾಚಾರ ಇರುವುದಿಲ್ಲ. ಯಾವ ಪಕ್ಷ ತಮಗೆ ಮಣೆ ಹಾಕುತ್ತದೆಯೋ ಅತ್ತ ವಾಲಿಬಿಡೋಣ ಅನ್ನೋ ಮನಸ್ಥಿತಿಗೆ ಬಂದಿದ್ದಾರೆ ಅನ್ನಿಸುತ್ತದೆ.
ಹಾಲಿ ಮತ್ತು ಮಾಜಿ ಶಾಸಕರ ಮನೆಗೆ ಎಲ್ಲ ಸದಸ್ಯರ ಭೇಟಿ
ಧಾರವಾಡ ತಾಲೂಕಿನ ನರೇಂದ್ರ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ಸದಸ್ಯ ಬಲ 22. ಜಿಲ್ಲೆಯಲ್ಲಿ ಹೆಚ್ಚು ಗಮನ ಸೆಳೆಯುವ ಪಂಚಾಯಿತಿ ಪೈಕಿ ಇದೂ ಒಂದು. ಮತ ಎಣಿಕೆ ಬಳಿಕ ಗೆದ್ದ ಎಲ್ಲಾ ಸದಸ್ಯರು ಮೊದಲಿಗೆ ಹೋಗಿದ್ದು ಶಾಸಕ ಅಮೃತ ದೇಸಾಯಿ ಮನೆಗೆ. ಅಮೃತ ದೇಸಾಯಿ ಬಿಜೆಪಿ ಶಾಸಕ. ಆದರೂ ಎಲ್ಲರೂ ಸೇರಿ ಶಾಸಕರನ್ನು ಭೇಟಿಯಾಗಿ ಬಂದರು. ಆದರೆ ಈ ಸದಸ್ಯರ ಪೈಕಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಕೂಡ ಇದ್ದರು.
ಯಾವಾಗ ಅಮೃತ ದೇಸಾಯಿ ಬಂದವರನ್ನು ಕರೆದು ಸತ್ಕರಿಸಿದರೋ ಆಗ ನಿಧಾನವಾಗಿ ರಾಜಕೀಯ ಗರಿಗೆದರಿತು. ಕಾಂಗ್ರೆಸ್ ಪಕ್ಷದಿಂದ ಗುರುತಿಸಿಕೊಂಡಿದ್ದ ಸದಸ್ಯರು ಎಲ್ಲರನ್ನೂ ಕರೆದುಕೊಂಡು ನೇರವಾಗಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಮನೆಗೆ ಹೋದರು. ಅಲ್ಲಿ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಅವರನ್ನು ಭೇಟಿಯಾದರು. ಅದರ ಫೋಟೋಗಳನ್ನು ಕೂಡ ತೆಗೆದು, ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟರು. ಅಲ್ಲದೇ ಎಲ್ಲರೂ ಕಾಂಗ್ರೆಸ್ನವರೇ ಅಂತಾ ಹೇಳಿಕೊಂಡರು. ಇದೇ ದೊಡ್ಡ ರಗಳೆಗೆ ಕಾರಣವಾಯಿತು.
ಬಿಜೆಪಿ-ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಶುರುವಾಗಿದ್ದು ಇಲ್ಲಿಂದ
ಯಾವಾಗ ಕಾಂಗ್ರೆಸ್ನವರು ಶಿವಲೀಲಾ ಅವರನ್ನು ಭೇಟಿಯಾಗಿದ್ದು ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಂತಾ ಹೇಳಿಕೊಳ್ಳತೊಡಗಿದರೋ, ಆಗ ಬಿಜೆಪಿಯವರು ಎದ್ದು ಕುಳಿತರು. ಕೂಡಲೇ ಎಲ್ಲರನ್ನೂ ಮತ್ತೊಮ್ಮೆ ಅಮೃತ ದೇಸಾಯಿ ಅವರ ಮನೆಗೆ ಆಹ್ವಾನಿಸಿದರು. ಈ ವೇಳೆ ಅಮೃತ ದೇಸಾಯಿ ಒಂದು ಹೆಜ್ಜೆ ಮುಂದೆ ಹೋಗಿ, ಬಂದವರಿಗೆ ಪಕ್ಷದ ಶಾಲು ಹಾಕಿ, ಸನ್ಮಾನ ಮಾಡಿಬಿಟ್ಟರು.
ಈ ವೇಳೆ ಮುಂಚೆಯಿಂದಲೂ ಕಾಂಗ್ರೆಸ್ನೊಂದಿಗೆ ಗುರುತಿಸಿಕೊಂಡ ಸದಸ್ಯರು ಕೂಡ ಇದ್ದರು. ಅವರು ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಅನ್ನುವ ರೀತಿಯಲ್ಲಿ ಪ್ರಚಾರ ಮಾಡಲಾಯಿತು. ಇದರಿಂದಾಗಿ ಮುಂಚೆಯಿಂದಲೂ ಕಾಂಗ್ರೆಸ್ ಜೊತೆಗೆ ಇದ್ದವರು ಹಾಗೂ ಇದೇ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಬೆಂಬಲ ಪಡೆದು ಗೆದ್ದವರಿಗೆ ಮುಜುಗರವುಂಟಾಯಿತು. ಸಾಮಾಜಿಕ ಜಾಲತಾಣಗಳ ಮೂಲಕ ಅದಕ್ಕೆ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿದವು.
ಕೆಲವರಿಗೆ ಮುಂದಿನ ರಾಜಕೀಯದ ಚಿಂತೆ
ಗೆದ್ದು ಬಂದ ಅನೇಕ ಸದಸ್ಯರ ಕುಟುಂಬಸ್ಥರು ಮುಂಚೆಯಿಂದಲೂ ಕಾಂಗ್ರೆಸ್ ಪಕ್ಷದೊಳಗೆ ಗುರುತಿಸಿಕೊಂಡವರು. ಇನ್ನು ಕೆಲವರು ಬಿಜೆಪಿಯೊಂದಿಗೆ ಗುರುತಿಸಿಕೊಂಡವರು. ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಮೃತ ದೇಸಾಯಿ ಬಳಿ ಹೋಗಿದ್ದು, ಬಿಜೆಪಿ ಬೆಂಬಲಿತ ಸದಸ್ಯರು ವಿನಯ್ ಕುಲಕರ್ಣಿ ಮನೆಗೆ ಹೋಗಿದ್ದು ಪರಸ್ಪರ ಕಚ್ಚಾಟಕ್ಕೆ ಕಾರಣವಾಯಿತು. ಕೆಲವರಂತೂ ಇದೇ ಫೋಟೋಗಳನ್ನು ಬಳಸಿಕೊಂಡು ತಮಗೆ ಬೇಕಾದ ಹಾಗೆ ಸುದ್ದಿಯನ್ನು ತಿರುಚಲು ಶುರು ಮಾಡಿಬಿಟ್ಟರು. ಆದರೆ ಹೀಗೆ ಮಾಡುವುದರಿಂದ ಈ ಸದಸ್ಯರ ಕುಟುಂಬದವರಿಗೆ ತೊಂದರೆಯಾಗುತ್ತೆ ಅನ್ನುವುದು ಗೊತ್ತಿದ್ದೇ ಇಂಥ ಕೆಲಸಕ್ಕೆ ಇಳಿದಿದ್ದಾರೆ.
ಏಕೆಂದರೆ ಮುಂಬರೋ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಟಿಕೆಟ್ಗಾಗಿ ಅದಾಗಲೇ ತಯಾರಿ ನಡೆಸಿರುವ ಅನೇಕರಿಗೆ ಈ ಭೇಟಿಗಳು ತೊಂದರೆ ನೀಡುವುದು ಖಚಿತ. ತಮ್ಮ ತಮ್ಮ ರಾಜಕೀಯ ಮುಖಂಡರಿಗೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ತಮ್ಮ ತಾಕತ್ತನ್ನು ತೋರಿಸಲು ಅವಕಾಶ ಸಿಕ್ಕಿತ್ತು. ತಾವು ಇಷ್ಟೊಂದು ಸದಸ್ಯರನ್ನು ಗೆಲ್ಲಿಸಿದ್ದೇವೆ ಅಂತಾ ಹೇಳಿಕೊಳ್ಳೋ ಮೂಲಕ ಅವರು ಮುಂಬರೋ ಚುನಾವಣೆಯಲ್ಲಿ ಟಿಕೆಟ್ ದಕ್ಕಿಸಿಕೊಳ್ಳೋ ಯತ್ನ ನಡೆಸಿದ್ದಾರೆ. ಈ ಫೋಟೋಗಳಿಂದಾಗಿ ಇದೀಗ ಎಲ್ಲಿ ತಮ್ಮ ರಾಜಕೀಯ ಜೀವನಕ್ಕೆ ತೊಂದರೆಯಾಗುತ್ತೋ ಅನ್ನೋ ಚಿಂತೆ ಕೆಲವರದ್ದು.
ನಾವೆಲ್ಲ ಒಂದೇ ಗ್ರಾಮ ಪಂಚಾಯತ್ ಸದಸ್ಯರು
ಕೆಲವರು ಏನೇ ಕಿತಾಪತಿ ಮಾಡಿದರೂ ಗ್ರಾಮ ಪಂಚಾಯತ್ ಸದಸ್ಯರು ಒಗ್ಗಟ್ಟಾಗಿ ನಿಂತಿದ್ದಾರೆ. ತಾವೆಲ್ಲಾ ಒಂದೇ ಗ್ರಾಮ ಪಂಚಾಯತ್ ಸದಸ್ಯರು. ಹೀಗಾಗಿ ತಮ್ಮಲ್ಲಿ ಯಾವುದೇ ಒಡಕಿಲ್ಲ. ಅಲ್ಲದೇ ಮಾಜಿ ಹಾಗೂ ಹಾಲಿ ಶಾಸಕರ ಮನೆಗೆ ಭೇಟಿ ನೀಡಿದ್ದರ ಹಿಂದೆ ಯಾವುದೇ ರಾಜಕೀಯವೇ ಇಲ್ಲ ಅನ್ನುತ್ತಾರೆ. ಶಾಸಕ ಅಮೃತ ದೇಸಾಯಿ ಅವರ ಮನೆಗೆ ಹೋದಾಗ ಅವರು ಶಾಲು ಹಾಕಿದ್ದು ಕೂಡ ಆಕಸ್ಮಿಕವೇ.
ಹಾಗಂತ ತಾವು ಬಿಜೆಪಿ ಸೇರಿಲ್ಲ ಅಂತಾ ಕಾಂಗ್ರೆಸ್ ಬೆಂಬಲಿತ ಸದಸ್ಯರು ಹೇಳಿದರೆ, ಮೊದಲಿಗೆ ಅಮೃತ ದೇಸಾಯಿ ಅವರ ಮನೆಗೆ ಭೇಟಿ ನೀಡಿದ ಬಳಿಕ, ಮಾಜಿ ಶಾಸಕ ವಿನಯ್ ಕುಲಕರ್ಣಿಯವರ ಮನೆಗೂ ಭೇಟಿ ನೀಡೋಣ ಅಂತಾ ಕೆಲವರು ಹೇಳಿದರು. ಹೀಗಾಗಿ ಅಲ್ಲಿಗೂ ಹೋಗಿ ಬಂದಿದ್ದಾಗಿ ಬಿಜೆಪಿ ಬೆಂಬಲಿತ ಸದಸ್ಯರು ಹೇಳುತ್ತಾರೆ. ಒಟ್ಟಿನಲ್ಲಿ ಮುಂದೆ ಈ ಗ್ರಾಮ ಪಂಚಾಯತ್ ಯಾವ ಪಕ್ಷ ಬೆಂಬಲಿತ ಸದಸ್ಯರ ತೆಕ್ಕೆಗೆ ಬೀಳುತ್ತದೋ ಗೊತ್ತಿಲ್ಲ. ಆದರೆ ಇದೀಗ ಈ ಭೇಟಿಗಳು ಮಾತ್ರ ಇಡೀ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದಂತೂ ಸತ್ಯ.
ಧಾರವಾಡ: ಗ್ರಾಮ ಪಂಚಾಯತಿ ಚುನಾವಣೆ ಮುಗಿಯಿತು.. ಇನ್ನು ಅಧ್ಯಕ್ಷ ಗಾದಿಗೆ ಸರ್ಕಸ್!
Published On - 9:57 pm, Mon, 4 January 21