ಮನೆ ಮೇಲೆ ಬಗೆಬಗೆ ತರಕಾರಿ, ನಗುತಿವೆ ಹತ್ತಾರು ಬಗೆಯ ಸೊಪ್ಪು, ಹೂ ಗಿಡಗಳು; ತಾರಸಿ ಕೃಷಿಯ ಯಶೋಗಾಥೆಯಿದು

ತುಮಕೂರು ಹೊರವಲಯದ ಹೆಗ್ಗೆರೆಯ ಶಾಂತ ಕುಮಾರಿ 30*45 ಅಳತೆಯ ತಾರಸಿಯಲ್ಲಿ ಹತ್ತಾರು ಹೂ, ಹಣ್ಣು, ತರಕಾರಿ ಬೆಳೆದಿರುವ ಸಹೃದಯಿ ಗೃಹಿಣಿ ಶಾಂತ ಕುಮಾರಿ.

ಮನೆ ಮೇಲೆ ಬಗೆಬಗೆ ತರಕಾರಿ, ನಗುತಿವೆ ಹತ್ತಾರು ಬಗೆಯ ಸೊಪ್ಪು, ಹೂ ಗಿಡಗಳು; ತಾರಸಿ ಕೃಷಿಯ ಯಶೋಗಾಥೆಯಿದು
ತಾವು ಬೆಳೆದ ಗಿಡಗಳೊಂದಿಗೆ ಮನೆಯ ತಾರಸಿಯಲ್ಲಿ ಶಾಂತ ಕುಮಾರಿ
Follow us
ganapathi bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 05, 2021 | 2:13 PM

ತುಮಕೂರು: ಕಳೆದ ವರ್ಷ ಮಾವಿನ ಗಿಡ ನೆಟ್ಟಿದ್ದೆ. ಈ ಬಾರಿ ಒಂದು ಹೂ ಬಿಟ್ಟಿದೆ. ಹೀಗೆಂದು ಖುಷಿಖುಷಿಯಾಗಿ ನಗುತ್ತಾರೆ ಶಾಂತ ಕುಮಾರಿ. ಈ ಸಂಭ್ರಮ, ಆಸಕ್ತಿಯೇ ಅವರು ತಾರಸಿ ಕೃಷಿಯಲ್ಲಿ ಯಶಸ್ವಿಯಾಗಲು ಕಾರಣ. ತುಮಕೂರು ಹೊರವಲಯದ ಹೆಗ್ಗೆರೆಯ ಶಾಂತ ಕುಮಾರಿ 30*45 ಅಳತೆಯ ತಾರಸಿಯಲ್ಲಿ ಹತ್ತಾರು ಹೂ, ಹಣ್ಣು, ತರಕಾರಿ ಬೆಳೆದಿರುವ ಸಹೃದಯಿ ಗೃಹಿಣಿ.

ಬೆಂಡೆಕಾಯ್ ತೊಂಡೆಕಾಯ್ ತೋಟದಲ್ಲಿದೆ ಎಂದು ಹಾಡಿದವರು ನಾವು. ಆದರೆ, ತೋಟವೆಂದರೆ ಏನು ಎಂಬ ಪ್ರಶ್ನೆಯನ್ನು ಈ ತಲೆಮಾರಿನ ಪುಟ್ಟ ಮಕ್ಕಳು ಕೇಳಲೂಬಹುದು. ಅದಕ್ಕಾಗಿ, ನಗರ ಜೀವನದಲ್ಲಿ ತೋಟವನ್ನೆಲ್ಲಿ ತೋರಿಸೋಣ ಎಂದು ನೀವು ಗೊಂದಲ ಪಡಬೇಕಾಗಿಲ್ಲ. ಶಾಂತ ಕುಮಾರಿ ಅವರ ತಾರಸಿ ಕೃಷಿಯ ಯಶೋಗಾಥೆ ಓದಿ ಸ್ಪೂರ್ತಿ ಪಡೆದುಕೊಳ್ಳಬಹುದು. ಹಚ್ಚಹಸಿರಾಗಿ ಕಾಣುವ ಸ್ವಚ್ಛ ತರಕಾರಿಯನ್ನು ಮನೆಯಲ್ಲೇ ಬೆಳೆಯಬಹುದು.

ಎಲೆಕೋಸು, ಬೀನ್ಸ್, ಮೂಲಂಗಿ, ಬದನೆಕಾಯಿ, ಹೀರೇಕಾಯಿ, ಟೊಮೆಟೊ, ಹಾಗಲಕಾಯಿ.. ಹೀಗೆ ಶಾಂತ ಕುಮಾರಿ ಅವರು ತಮ್ಮ ಮನೆಯ ತಾರಸಿಯಲ್ಲಿ ಬೆಳೆಯುವ ತರಕಾರಿಗಳ ಪಟ್ಟಿ ನೀಡುತ್ತಾರೆ. ದೊಡ್ಡಪತ್ರೆ, ಲೋಳೇಸರ (ಅಲೊವೇರ), ಅಮೃತಬಳ್ಳಿ, ಒಂದೆಲಗ, ಕಾಮಕಸ್ತೂರಿ, ಮಧುನಾಶಿನಿ, ಮಳೆಕಾಳಿನ ಸೊಪ್ಪು, ಪಾರಿಜಾತ, ಗೋಧಿಹುಲ್ಲು ಹೀಗೆ ಅವರ ಮನೆಯ ತಾರಸಿಯಲ್ಲಿರುವ ಔಷಧೀಯ ಸಸ್ಯಗಳ ವಿವರಗಳನ್ನೂ ನಮ್ಮ ಮುಂದೆ ತೆರೆದಿಡುತ್ತಾರೆ.

ಔಷಧೀಯ ಸೊಪ್ಪು, ಕೆಲ ತರಕಾರಿಗಳನ್ನು ಮಾತ್ರ ಶಾಂತ ಕುಮಾರಿ ಬೆಳೆಯುತ್ತಾರೆ ಎಂದು ಊಹಿಸಿದರೆ ನಿಮ್ಮ ಊಹೆ ತಪ್ಪು. ಪಪ್ಪಾಯ, ಮಾವು, ಸೀಬೆ, ಲಿಚಿಯಂಥಾ ಹಣ್ಣುಗಳೂ ಅವರಲ್ಲಿ ಬೆಳೆಯುತ್ತವೆ. ಚೆಂಡು ಹೂ ಮತ್ತು ದಿನಕ್ಕೆ 80ರಿಂದ 100ರಷ್ಟು ದಾಸವಾಳ ಹೂಗಳೂ ಹೆಗ್ಗೆರೆಯ ಮನೆಯ ತಾರಸಿಯಲ್ಲಿ ನಲಿದಾಡುತ್ತವೆ.

ಮನೆಯ ತಾರಸಿಯಲ್ಲಿ ಹುರುಳಿಕಾಯಿ ಮತ್ತು ಕಲ್ಲಂಗಡಿ

ತಾರಸಿಯಲ್ಲಿ ಹಸಿರು ಸೊಪ್ಪುಗಳು

ಇಷ್ಟೂ ತರಕಾರಿಗಳನ್ನು ತಾರಸಿಯಲ್ಲೇ ಬೆಳೆಯುತ್ತಾರೆ! ಇಷ್ಟೊಂದು ತರಕಾರಿಗಳನ್ನು ತಾರಸಿಯಲ್ಲಿ ಬೆಳೆಯಲು ಸಾಧ್ಯವೇ ಎಂದು ಕೇಳಿದರೆ, ನಾನು ಬೆಳೆದಿದ್ದೇನಲ್ಲಾ ಎಂದು ಸಂತೋಷಪಡುತ್ತಾರೆ. ತಾರಸಿ ಕೃಷಿ ಎಲ್ಲರಿಗೂ ಸಾಧ್ಯ. ಕಾಲ, ನಿಯಮ ಏನೂ ಯೋಚಿಸದೆ, ಉತ್ತಮ ಫಲ ಪಡೆಯಲು ಮನೆಯಲ್ಲೇ ಪೈಪ್ ಕಂಪೋಸ್ಟಿಂಗ್ ಮೂಲಕ ತಯಾರಿಸಿದ ಸಾವಯುವ ಗೊಬ್ಬರ ಇದ್ದರೆ ಸಾಕು ಎಂದು ವಿವರಿಸುತ್ತಾರೆ. ಈ ಕೃಷಿಗಾಗಿ ಬಂಡವಾಳ ಬೇಕೇ ಎಂಬ ಪ್ರಶ್ನೆಗೆ, ಗ್ರೋ ಬ್ಯಾಗ್ ಹಾಗೂ ಅಗತ್ಯ ಬಿದ್ದಲ್ಲಿ ಕುರಿಗೊಬ್ಬರವನ್ನು ತರಿಸಿ ಬಳಸಿಕೊಂಡಿದ್ದೇನೆ. ಅದಕ್ಕಾಗಿ ಕೊಂಚ ಹಣ ವ್ಯಯಿಸಿದ್ದೇನೆ ಎನ್ನುತ್ತಾರೆ. ಅದರ ಹೊರತಾಗಿ ಇನ್ಯಾವ ಖರ್ಚೂ ಇಲ್ಲ. ಆಸಕ್ತಿ ವಹಿಸಿದರೆ ಇಷ್ಟೂ ತರಕಾರಿ, ಹೂ, ಹಣ್ಣುಗಳನ್ನು ತಾರಸಿಯಲ್ಲೇ ಬೆಳೆಯಬಹುದು ಎಂದು ಹೇಳುತ್ತಾ ನೀವೂ ಪ್ರಯತ್ನಿಸಿ ಎಂಬ ಪ್ರೋತ್ಸಾಹ ನೀಡುತ್ತಾರೆ.

ಆಹಾರ-ಆರೋಗ್ಯಕ್ಕೆ ಮನೆಯಲ್ಲೇ ಕೃಷಿ 37 ವರ್ಷ ವಯಸ್ಸಿನ ಶಾಂತ ಕುಮಾರಿ ತುಮಕೂರಿನ ಹೆಗ್ಗೆರೆಯ ತಮ್ಮ ಮನೆಯಲ್ಲಿ ಈ ಕೃಷಿ ಆರಂಭಿಸಿ ಎರಡು ವರ್ಷಗಳಾದವು. ಮಗ, ಮಗಳು, ಪತಿ ಈ ಕೆಲಸಕ್ಕೆ ಸಂಪೂರ್ಣ ಸಹಕಾರ ನೀಡುತ್ತಾರೆ. ಅಡುಗೆಯ ಘಮಘಮ ಪರಿಮಳ, ಆರೋಗ್ಯಕರ ಆಹಾರ ಉಣ್ಣುವಾಗ ತೃಪ್ತಿಪಡುತ್ತಾರೆ ಎಂದು ಸಂತಸ ಹಂಚಿಕೊಳ್ಳುತ್ತಾರೆ.

ಖಾಯಿಲೆಗಳು ಹೆಚ್ಚಾಗುತ್ತಿವೆ. ಮರಗಿಡಗಳು ಕಡಿಮೆ ಆಗಿವೆ. ಒಳ್ಳೆಯ ಗಾಳಿ, ಒಳ್ಳೆಯ ಆಹಾರ ಬೇಕು. ಎಷ್ಟು ದುಡಿದು ಏನೇ ಮಾಡಿದರೂ ಆರೋಗ್ಯ ಇಲ್ಲದಿದ್ದರೆ ಯಾವುದೂ ಉಪಯೋಗವಿಲ್ಲ. ಹಾಗಾಗಿ, ನಮ್ಮ ಖುಷಿಗೆ ನಮ್ಮದೇ ಜಾಗದಲ್ಲಿ ಈ ಕೆಲಸ ಆರಂಭಿಸಿದೆವು ಎಂದು ಹೇಳುವ ಶಾಂತ ಕುಮಾರಿ, ಕೆಲಸ ಮಾಡುತ್ತಲೇ ಇಷ್ಟು ತಿಳುವಳಿಕೆ ಪಡೆದೆ. ಈಗ ಯಾರು ಕೇಳಿದರೂ ಈ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತೇನೆ ಎನ್ನುತ್ತಾರೆ.

ನೀವೂ ಪ್ರಯತ್ನಿಸಿ. ನಿಮ್ಮ ಮನೆಯಲ್ಲೂ ಹಸಿರು ಕಂಗೊಳಿಸಲಿ ತಾರಸಿ ಕೃಷಿಯ ಬಗ್ಗೆ ಆಸಕ್ತರಿಗೆ ತಿಳಿದಷ್ಟು ಮಾಹಿತಿ ನೀಡುವ ಶಾಂತ ಕುಮಾರಿ, ಸುಮಾರು 50ರಷ್ಟು ಜನರು ತಮ್ಮ ಮನೆಯ ಮಹಡಿಯಲ್ಲಿ ಹಸಿರು ಬೆಳೆಯಲು ಸ್ಪೂರ್ತಿಯಾಗಿದ್ದಾರೆ. ತರಕಾರಿಗಳನ್ನು ಮಾರುವುದಿಲ್ಲ. ನೋಡಲು ಬಂದ ಮಹಿಳೆ, ನೆರೆಯವರಿಗೆ ಕೊಡುತ್ತೇನೆ. ಈ ರೀತಿ ನೀವೂ ಮಾಡಿ ಎಂದು ವಿನಂತಿಸಿಕೊಳ್ಳುತ್ತೇನೆ ಎಂದು ಹೇಳುವ ಅವರು ನಿಜಕ್ಕೂ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ.

ಸಂಪರ್ಕ ಸಂಖ್ಯೆ: 81237 06041

ಹೆಗ್ಗೆರೆಯಲ್ಲಿ ತಾರಸಿ ಕೃಷಿ

ಹಸಿರು ಚಿಗುರಿತು, ಹೂಬಿಟ್ಟಿತು

ಚೆಂಡು ಹೂಗಳೊಂಡಿಗೆ ಶಾಂತ ಕುಮಾರಿ

ನಿಟ್ಟೂರು ಸ್ವರ್ಣ ಭತ್ತ: ಸುವರ್ಣ ಸಂಭ್ರಮದಲ್ಲಿದ್ದ ಪ್ರೌಢಶಾಲೆಯು ಮಾಡಿದ ಅನನ್ಯ ಸಾಧನೆ ಇದು..

Published On - 7:07 am, Tue, 5 January 21