ಚಿತ್ರಸಂತೆ 2021: ಗಮನ ಸೆಳೆಯುತ್ತಿದೆ ಚಿತ್ರಕಲಾ ಅಕಾಡೆಮಿ ಪ್ರದರ್ಶನಕ್ಕಿಟ್ಟಿರುವ 50 ವರ್ಷ ಹಳೆಯ ಕಲಾಕೃತಿ

ಎನ್​.ಎಸ್.ಜತ್ತಿ ರಚಿಸಿದ್ದ ಚಿತ್ರವನ್ನು ಮೈಸೂರಿನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಚಿತ್ರದಲ್ಲಿದ್ದ ಕೆಲವೊಂದು ವಿವಾದಾತ್ಮಕ ಅಂಶಗಳು ವೀಕ್ಷಕರನ್ನು ಕೆರಳಿಸಿದ್ದವು. ಆದರೆ ಆ ಚಿತ್ರ ಇಂದಿಗೂ ಎಂದೆಂದಿಗೂ ಪ್ರಸ್ತುತ. ಇದೇ ಕಾರಣಕ್ಕೆ ಈ ವರ್ಷದ ಚಿತ್ರಸಂತೆಯಲ್ಲಿ ಆ ಪೇಟಿಂಗ್​ ಎಲ್ಲರ ಗಮನ ಸೆಳೆಯುತ್ತಿದೆ.

ಚಿತ್ರಸಂತೆ 2021: ಗಮನ ಸೆಳೆಯುತ್ತಿದೆ ಚಿತ್ರಕಲಾ ಅಕಾಡೆಮಿ ಪ್ರದರ್ಶನಕ್ಕಿಟ್ಟಿರುವ 50 ವರ್ಷ ಹಳೆಯ ಕಲಾಕೃತಿ
50 ವರ್ಷಗಳ ಹಿಂದೆ ವಿವಾದ ಹುಟ್ಟುಹಾಕಿದ್ದ ಪೇಟಿಂಗ್
Follow us
ಪೃಥ್ವಿಶಂಕರ
|

Updated on:Jan 04, 2021 | 4:46 PM

ಬೆಂಗಳೂರು: ಜನವರಿ 3 ರಂದು ಚಿತ್ರಕಲಾ ಪರಿಷತ್‌ನ 18ನೇ ಚಿತ್ರಸಂತೆಗೆ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ವರ್ಚ್ಯುವಲ್ ಚಾಲನೆ ನೀಡಿದ್ದಾರೆ. ಕೊವಿಡ್ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಆನ್‌ಲೈನ್ ಮೂಲಕ ಚಿತ್ರಸಂತೆ ಆಯೋಜನೆ ಮಾಡಲಾಗಿದೆ. ಒಟ್ಟು 1,500ಕ್ಕೂ ಹೆಚ್ಚು ಕಲಾವಿದರು ಇದರಲ್ಲಿ ಭಾಗಿಯಾಗಿದ್ದು, ಪ್ರತಿಯೊಬ್ಬರಿಗೂ ಪ್ರತ್ಯೇಕ ಆನ್​ಲೈನ್ ಪುಟವನ್ನು ಮೀಸಲಿಡಲಾಗಿದೆ. ಒಬ್ಬ ಕಲಾವಿದ ತನ್ನ 10 ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಬಹುದಾಗಿದೆ. ಇದು ಸುಮಾರು ಒಂದು ತಿಂಗಳ ಕಾಲ ನಡೆಯಲಿದೆ.

ಚಿತ್ರಕಲಾ ಅಕಾಡೆಮಿಯಿಂದ 23 ಕಲಾಕೃತಿಗಳ ಪ್ರದರ್ಶನ.. ಈ ಆನ್​​ಲೈನ್​ ಚಿತ್ರಸಂತೆಯಲ್ಲಿ ಚಿತ್ರಕಲಾ ಅಕಾಡೆಮಿಯಿಂದ 23 ವಿಶಿಷ್ಟವಾದ ಹಾಗೂ ಬಲು ಅಪರೂಪದ ಕಲಾಕೃತಿಗಳನ್ನ ಪ್ರದರ್ಶನಕ್ಕೆ ಇರಿಸಲಾಗಿದೆ. ಅದರಲ್ಲೂ ಚಿತ್ರಕಲಾ ಪರಿಷತ್​ನ ಸಂಸ್ಥಾಪಕರಾದ ನಂಜುಂಡ ರಾಯರು ಚಿತ್ರಿಸಿರುವಂತಹ ಚಿತ್ರಗಳು ಪ್ರದರ್ಶನದಲ್ಲಿರುವುದು ಈ ಬಾರಿಯ ಚಿತ್ರಸಂತೆಯ ವಿಶೇಷ.

ಅಲ್ಲದೆ ಸೋಮಶೇಖರ ಸಾಲಿಯವರು, ಹಾಳಾಗಿದ್ದ ಭಿತ್ತಿಚಿತ್ರಗಳಿಗೆ ಮರುಜೀವ ನೀಡುವ ಸಲುವಾಗಿ ಶಿಬಿರ ಏರ್ಪಡಿಸಿ, ಸುಮಾರು 10 ಜನ ಕಲಾವಿದರಿಂದ ಹಾಳಾಗಿದ್ದ ಭಿತ್ತಿಚಿತ್ರಗಳಿಗೆ ಮರು ಜೀವ ನೀಡಿದ್ದರು. ಈಗ ಅಂತಹ ಭಿತ್ತಿಚಿತ್ರಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

50 ವರ್ಷ ಹಳೆಯದಾದ ವಿವಾದಾತ್ಮಕ ಚಿತ್ರ ಪ್ರದರ್ಶನ.. ಈ ಬಾರಿಯ ಚಿತ್ರಸಂತೆಯಲ್ಲಿ ತೀರ ಅಪರೂಪ ಎನಿಸಿಕೊಳ್ಳುವಂತಹ ಚಿತ್ರಗಳು ಪ್ರದರ್ಶನದಲ್ಲಿದ್ದು, ಅದರಲ್ಲೂ ಚಿತ್ರಕಲಾ ಅಕಾಡೆಮಿಯಿಂದ 50 ವರ್ಷ ಹಳೆಯದಾದ ವಿವಾದಾತ್ಮಕ ಚಿತ್ರವೊಂದನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಸುಮಾರು 50 ವರ್ಷಗಳ ಹಿಂದೆ ಕೆ.ಕೆ.ಹೆಬ್ಬಾರ್​ ಅವರು ಅಧ್ಯಕ್ಷರಾಗಿದ ವೇಳೆ ನಂದಿಬೆಟ್ಟದಲ್ಲಿ ನಡೆದಿದ್ದ ಶಿಬಿರದಲ್ಲಿ ಎನ್.ಎಸ್.ಜತ್ತಿ ಎಂಬುವವರು ರಚಿಸಿದ್ದ ಚಿತ್ರವನ್ನು ಮೈಸೂರಿನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಆದರೆ ಚಿತ್ರದಲ್ಲಿದ್ದ ಕೆಲವೊಂದು ವಿವಾದಾತ್ಮಕ ಅಂಶಗಳು ವೀಕ್ಷಕರನ್ನು ಕೆರಳಿಸಿದ್ದವು. ಅಲ್ಲದೆ ಇಂತಹ ಚಿತ್ರವನ್ನು ಪ್ರದರ್ಶನಕ್ಕೆ ಇಡಬಾರದೆಂದು ಆಕ್ರೋಶಗೊಂಡಿದಲ್ಲದೆ, ಚಿತ್ರವನ್ನು ತೆಗೆಯದಿದ್ದರೆ ಅದನ್ನು ಸುಟ್ಟುಹಾಕುವುದಾಗಿ ಎಚ್ಚರಿಕೆ ನೀಡಿದ್ದರು. ಹೀಗಾಗಿ ಆ ಚಿತ್ರವನ್ನು ಪ್ರದರ್ಶನದಿಂದ ತೆಗೆಯಲಾಗಿತ್ತು. ಆದರೆ ಈಗ ಆ ಚಿತ್ರವನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಆ ವಿವಾದಾತ್ಮಕ ಚಿತ್ರದಲ್ಲಿ ಅಂಥದ್ದೇನಿದೆ? ವಿವಾದಗಳನ್ನು ಹೊತ್ತುಕೊಂಡಿರುವ ಚಿತ್ರದ ಬಗ್ಗೆ ಚಿತ್ರಕಲಾ ಅಕಾಡೆಮಿಯ ಅಧ್ಯಕ್ಷರಾದ ಮಹೇಂದ್ರ ಅವರು ಸ್ಪಷ್ಟನೆ ನೀಡಿದ್ದು ಹೀಗೆ..

‘ಎನ್​.ಎಸ್. ಜತ್ತಿ ಚಿತ್ರಿಸಿರುವ ಚಿತ್ರದಲ್ಲಿ, ಸ್ವಾಮೀಜಿಯೊಬ್ಬರು ಜೋಳಿಗೆ ಒಳಗೆ ಸಾಮಾಜಿಕ ಪಿಡುಗುಗಳಾದ ಸಾರಾಯಿ, ತಂಬಾಕು, ಇಸ್ಪೀಟ್​, ಮುಂತಾದ ವಸ್ತುಗಳನ್ನು ಇರಿಸಿಕೊಂಡಿರುವಂತೆ ಚಿತ್ರಿಸಲಾಗಿದೆ. ಇದರ ಮೂಲ ಉದ್ದೇಶವನ್ನು ಅರ್ಥೈಸಿಕೊಳ್ಳದ ವೀಕ್ಷಕರು ಚಿತ್ರ ಪ್ರದರ್ಶನಕ್ಕೆ ಅಡ್ಡಿ ಪಡಿಸಿದ್ದರು.

‘ಉತ್ತರ ಕರ್ನಾಟಕ ಭಾಗದ ಸ್ವಾಮೀಜಿಯೊಬ್ಬರು ಜನರಲ್ಲಿನ ದುಶ್ಚಟಗಳನ್ನು ಹೋಗಲಾಡಿಸುವ ಸಲುವಾಗಿ, ಜನರ ಬಳಿ ಅಕ್ಕಿ, ರಾಗಿಯನ್ನು ಭೀಕ್ಷೆ ಕೇಳುವ ಬದಲು, ಸಾಮಾಜಿಕ ಪಿಡುಗುಗಳಾದ ಸಾರಾಯಿ, ತಂಬಾಕು ಇತ್ಯಾದಿ ವಸ್ತುಗಳನ್ನು ನನ್ನ ಜೋಳಿಗೆಗೆ ತುಂಬಿಸುವ ಮೂಲಕ ನಿಮ್ಮಲ್ಲಿರುವ ದುಶ್ಚಟಗಳನ್ನು ಬಿಟ್ಟುಬಿಡಿ ಎಂದು ಸಾಮಾಜಿಕ ಕ್ರಾಂತಿ ಹುಟ್ಟು ಹಾಕಿದ್ದರು. ಆ ಸಮಯದಲ್ಲಿ ಸ್ವಾಮೀಜಿಯವರ ಈ ರೀತಿಯ ವಿಶಿಷ್ಟವಾದ ಸಾಮಾಜಿಕ ಕ್ರಾಂತಿ, ಇತರ ಸ್ವಾಮೀಜಿಗಳಲ್ಲೂ ಸ್ಪೂರ್ತಿ ನೀಡಿತ್ತು. ಇದನ್ನು ಗಮನಿಸಿದ್ದ ಎನ್.ಎಸ್.ಜತ್ತಿಯವರು ಅದಕ್ಕೆ ಚಿತ್ರರೂಪ ನೀಡಿದ್ದರು.

‘ಸ್ವಾಮೀಜಿಯವರು ಅಂದು ಮಾಡಿದ್ದ ಆ ಸಾಮಾಜಿಕ ಕ್ರಾಂತಿ ಇಂದಿಗೂ ಪ್ರಸ್ತುತವಾಗಿದ್ದು, ಕರ್ನಾಟಕದ ನಾನಾ ಭಾಗಗಳಲ್ಲಿ ಸ್ವಾಮೀಜಿಗಳು ಈ ರೀತಿಯ ಕೆಲಸಗಳನ್ನು ಇಂದು ಸಹ ಮಾಡುತ್ತಾ ಬರುತ್ತಿದ್ದಾರೆ. ಇದರಿಂದ ಜನರಲ್ಲಿನ ದುಶ್ಚಟಗಳನ್ನು ದೂರ ಮಾಡುವ ಸಲುವಾಗಿ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ. ಸಾಮಾಜಿಕ ಕಳಕಳಿ ಹೊಂದಿರುವ ಈ ಚಿತ್ರವನ್ನು ಚಿತ್ರಕಲಾ ಅಕಾಡೆಮಿ ಈ ಬಾರಿಯ ಚಿತ್ರಸಂತೆಯಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದು, ಆಸಕ್ತರು ಚಿತ್ರಸಂತೆಯ ಗ್ಯಾಲರಿ ಎರಡರಲ್ಲಿ ಈ ಚಿತ್ರವನ್ನು ನೋಡಬಹುದಾಗಿದೆ’.

ವರ್ಚ್ಯುವಲ್ ಚಿತ್ರಸಂತೆ 2021: ಆನ್​ಲೈನ್​ನಲ್ಲಿ ಕಲಾವಿದನ ಕುಂಚ ಮಾತಾಡಿದಾಗ..

Published On - 4:45 pm, Mon, 4 January 21