ಬೆಂಗಳುರು, (ಜನವರಿ 24): ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಕೆತ್ತನೆ ಮಾಡಿದ ರಾಮಲಲ್ಲಾ ವಿಗ್ರಹವನ್ನೇ ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಜನವರಿ 22ರಂದು ದೇಶದೆಲ್ಲೆಡೆ ರಾಮೋತ್ಸವ ನಡೆದಿದ್ದು, ಅರುಣ್ ಯೋಗಿರಾಜ್ ಕೆತ್ತನೆ ಮಾಡಿರುವ ನಗುಮುಗದ ಬಾಲ ರಾಮನ ಮೂರ್ತಿ ಎಲ್ಲರ ಗಮನ ಸೆಳೆದಿದೆ. ಇನ್ನು ಶಿಲ್ಪಿ ಅರುಣ್ ಯೋಗಿರಾಜ್, ರಾಮಮಂದಿರಕ್ಕೆ ವಿಗ್ರಹ ನೀಡಿ ಇದೀಗ ಬೆಂಗಳೂರಿಗೆ ಆಗಮಿಸಿದ್ದು, ಅವರನ್ನು ರಾಮ ಭಕ್ತು ಹಾಗೂ ಬಿಜೆಪಿ ಕಾರ್ಯಕರ್ತರು ಸೇರಿ ಆರತಿ ಬೆಳಗಿ, ಹೂಗುಚ್ಛ ನೀಡಿ ಭವ್ಯ ಸ್ವಾಗತಕೋರಿದ್ದಾರೆ.
ಅಯೋಧ್ಯೆಯಿಂದ ನೇರವಾಗಿ ಅರುಣ್ ಯೋಗಿರಾಜ್ ಅವರು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಅವರನ್ನು ತಾಯಿ ಮತ್ತು ಪತ್ನಿ ಅಪ್ಪಿಕೊಂಡು ಸ್ವಾಗತಿಸಿದರು. ಅಲ್ಲದೇ ಮಗನನ್ನ ಕಂಡು ತಾಯಿ ಮುದ್ದಾಡಿ ಭಾವುಕಾರಾಗಿ ಆನಂದ ಬಾಷ್ಪ ಸುರಿಸಿದ ಪ್ರಸಂಗ ಜರುಗಿತು. ಬಳಿಕ ಅರುಣ್ ಯೋಗಿರಾಜ್ ತನ್ನಿಬ್ಬರು ಮಕ್ಕಳನ್ನು ಎತ್ತಿಕೊಂಡು ಮುದ್ದಾಡಿದರು.
ಟರ್ಮಿನಲ್ ಮುಂಭಾಗ ನೂಕುನುಗ್ಗಲು
ಕೆಐಎಬಿ ಟರ್ಮಿನಲ್-2ರ ಮುಂದೆ ಸಾಲಾಗಿ ನಿಂತು ಅರುಣ್ಗೆ ಭವ್ಯ ಸ್ವಾಗತಕೋರಿದರು. ಯೋಗಿರಾಜ್ ಬಂದಿಳಿಯುತ್ತಿದ್ದಂತೆಯೇ ರಾಮಭಕ್ತರು, ಹಿಂದೂ ಹಾಗೂ ಬಿಜೆಪಿ ಕಾರ್ಯಕರ್ತರು ಸ್ವಾಗತಿಸಲು ನುಗ್ಗಿದರು. ಇದರಿಂದ ವಿಮಾನ ನಿಲ್ದಾಣದ ಟರ್ಮಿನಲ್ ಬಳಿ ನೂಕುನುಗ್ಗಲು ಉಂಟಾಯಿತು.
ಗುರುಗಳಿಗೆ ಧನ್ಯವಾದ ಹೇಳಿದ ಅರುಣ್ ಯೋಗಿರಾಜ್
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಯೋಗಿರಾಜ್, ದೊಡ್ಡ ಅವಕಾಶ ಸಿಕ್ಕಿದ್ದಕ್ಕೆ ನಮ್ಮ ಮನೆತನ, ಗುರುಗಳಿಗೆ ಧನ್ಯವಾದ. ಇದು ಕಲೆಗೆ ಸಿಕ್ಕ ಗೌರವ ಎಂದು ಅನ್ನಿಸುತ್ತಿದೆ.ಕಳೆದ 7 ತಿಂಗಳಿಂದ ಪರಿಶ್ರಮಪಟ್ಟು ವಿಗ್ರಹ ಕೆತ್ತನೆ ಮಾಡಿದ್ದೇನೆ. ಶ್ರೀರಾಮನೇ ಕೆತ್ತನೆ ಮಾಡಿಸಿಕೊಂಡಿದ್ದಾರೆ. ಶ್ರೀರಾಮಮಂದಿರಕ್ಕೆ 200 ಕೆಜಿ ಚಿನ್ನ ಕೊಡಲು ಭಕ್ತರು ಸಿದ್ಧರಿದ್ದಾರೆ. ಆದರೆ ಮೈಸೂರಿನ ಸಣ್ಣ ಗ್ರಾಮದ ರೈತನ ಜಮೀನಿನಲ್ಲಿ ಸಿಕ್ಕ ಶಿಲೆ ಆಯ್ಕೆಯಾಗಿದೆ. ಇದು ನಮ್ಮ ಕರುನಾಡಿಗೆ ಗೌರವ ಹಾಗೂ ಹೆಮ್ಮೆಯ ವಿಚಾರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ರಾಮನ ವಿಗ್ರಹ ಕೆತ್ತನೆಗೆ ನನಗೆ ಅವಕಾಶ ಸಿಕ್ಕಿದ್ದು ಪೂರ್ವಜನ್ಮದ ಪುಣ್ಯ. ಸಣ್ಣ ಹಳ್ಳಿಯಿಂದ ಬಂದ ನನಗೆ ಉತ್ತಮ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಿದೆ. ನನ್ನ ಕೆಲಸ ಇಷ್ಟವಾಗಿದ್ದಕ್ಕೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಒಬ್ಬ ಶಿಲ್ಪಿಗೆ ಇದಕ್ಕಿಂತ ದೊಡ್ಡ ಉಡುಗೊರೆ ಮತ್ತೇನಿದೆ ಎಂದು ಹೇಳಿದರು.