ಮೈಸೂರು: ಮಹಾಮಾರಿ ಕೊರೊನಾ ಸೋಂಕು ಜನರ ಜೀವನದಲ್ಲಿ ಕರಾಳತೆಯನ್ನು ಸೃಷ್ಟಿಸಿದೆ. ಕೊರೊನಾದಿಂದಾಗಿ ಜನ ನರಳಿ ನರಳಿ ಪ್ರಾಣ ಬಿಡುತ್ತಿದ್ದು, ಅದೆಷ್ಟೋ ಮಂದಿ ಬೀದಿ ಪಾಲಾಗಿದ್ದಾರೆ. ಇನ್ನೆಷ್ಟೋ ಮಂದಿ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಡುವ ಮುನ್ನವೇ ಇಹ ಲೋಕ ತ್ಯಜಿಸಿದ್ದಾರೆ.
ಮದುವೆ ನಿಗದಿಯಾಗಿದ್ದ ಯುವಕನನ್ನು ಕೊರೊನಾ ಬಲಿ ಪಡೆದುಕೊಂಡಿದೆ. ಮೈಸೂರಿನ ಹೆಬ್ಬಾಳು ನಿವಾಸಿ ನವೀನ್ 31 ಕೊರೊನಾಗೆ ಬಲಿಯಾದ ಯುವಕ. ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ನವೀನ್ಗೆ ಮಾರ್ಚ್ 7 ರಂದು ಮದುವೆ ನಿಶ್ಚಿತಾರ್ಥವಾಗಿತ್ತು. ಮೇ 19 ಮತ್ತು 20ಕ್ಕೆ ಮದುವೆ ದಿನಾಂಕ ನಿಗದಿಯಾಗಿತ್ತು.
ಕೆಮ್ಮು ಕಾಣಿಸಿಕೊಂಡ ಕಾರಣ ನವೀನ್ಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಬಳಿಕ ಉಸಿರಾಟದ ತೊಂದರೆಯಿಂದಾಗಿ ಜಿಲ್ಲಾ ಕೊವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನವೀನ್ ಮೃತಪಟ್ಟಿದ್ದಾರೆ. ಮೃತ ನವೀನ್ನ ಅಣ್ಣ-ಅತ್ತಿಗೆಗೂ ಪಾಸಿಟಿವ್ ವರದಿ ಬಂದಿದೆ. ಸದ್ಯ ಇನ್ನೆರಡು ದಿನಗಳಲ್ಲಿ ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಡಬೇಕಿದ್ದ ಯುವಕ ಅಂತ್ಯದ ಹಾದಿ ಹಿಡಿದಿದ್ದಾನೆ. ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ.
ವಿಜಯಪುರ: ಹಸೆಮಣೆ ಏರಬೇಕಿದ್ದ ಯುವತಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ವಿಜಯಪುರ ಜಿಲ್ಲೆ ಮುದ್ದೇಬಿಹಾಳದ ಶ್ರುತಿ ಐಹೋಳಿ (24) ಎಂಬ ಯುವತಿ ಕೊರೊನಾ ಹಿನ್ನೆಲೆ ಮೃತಪಟ್ಟಿದ್ದಾರೆ.
ಶ್ರುತಿ ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವತಿ. ಸಾವಿರಾರು ಕನಸುಗಳನ್ನು ಹೊತ್ತು ಮದುವೆಗೆ ಸಿದ್ಧವಾಗಬೇಕಿದ್ದ ಯುವತಿ. ಆದರೆ ಈ ಮಹಾಮಾರಿ ಕೊರೊನಾ ಆಕೆಯನ್ನು ಬಲಿಪಡೆದುಕೊಂಡಿದೆ. ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಮೇ 23 ರಂದು ಶ್ರುತಿ ವಿವಾಹ ನಿಶ್ಚಯವಾಗಿತ್ತು. ಆದರೆ ಕೊರೊನಾ ಕಾರಣದಿಂದ ಬಾಗಲಕೋಟೆ ಜಿಲ್ಲೆಯ ಗ್ರಾಮವೊಂದರ ಭಾವನ ಮನೆಯಲ್ಲಿ ಶ್ರುತಿ ಹಾಗೂ ಪೋಷಕರು ತಂಗ್ಗಿದ್ದರು.
ಶ್ರುತಿಗೆ ಯಾವುದೇ ಕೊರೊನಾ ಲಕ್ಷಣಗಳು ಕಂಡು ಬಂದಿರಲಿಲ್ಲ. ಕಫ ಕಟ್ಟಿದ ಹಿನ್ನೆಲೆಯಲ್ಲಿ ಉಸಿರಾಟದ ತೊಂದರೆಯಾಗಿ ಕೊನೆ ಕ್ಷಣದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸರ್ಕಾರಿ ನಿಯಮದ ಪ್ರಕಾರ ಬಾಗಲಕೋಟೆ ಜಿಲ್ಲೆಯಲ್ಲಿಯೇ ಅಂತ್ಯಕ್ರಿಯೆ ನಡೆಸಲಾಗಿದೆ. ಶ್ರುತಿ ವಿವಾಹಕ್ಕಾಗಿ ಒಂದು ತಿಂಗಳ ಮುಂಚೆಯೇ ಒಡವೆ, ವಸ್ತ್ರ ಹಾಗೂ ಇತರೆ ವಸ್ತುಗಳನ್ನು ಖರೀದಿಸಿದ್ದ ಪೋಷಕರು ಮಗಳನ್ನು ಕಳೆದುಕೊಂಡು ರೋಧಿಸುತ್ತಿದ್ದಾರೆ. ಮದುವೆ ಮನೆಯಲ್ಲಿ ಸೂತಕ ಆವರಿಸಿದೆ.
ಇದನ್ನೂ ಓದಿ: ಹಸೆಮಣೆ ಏರಬೇಕಿದ್ದ ವರ ಕೊರೊನಾಗೆ ಬಲಿ; ಬೆಂಗಳೂರಿನಲ್ಲಿ 28 ವರ್ಷದ ಯುವಕನ ಸಾವು