ಬೆಂಗಳೂರು: ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಸಿಎಂ ಸಿದ್ದರಾಮಯ್ಯ (Siddaramaiah) ಘೋಷಿಸಿದ ಗ್ಯಾರಂಟಿಗಳಲ್ಲೊಂದಾಗಿದೆ. ಗೃಹಲಕ್ಷ್ಮೀ ಯೋಜನೆ ಜಾರಿಗೆ ಸರ್ಕಾರದಿಂದ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಅಂತಿಮ ತಯಾರಿ ನಡೆಯುತ್ತಿದೆ. ಗೃಹಲಕ್ಷ್ಮೀ ಯೋಜನೆ ಜಾರಿ ಬಗ್ಗೆ ನಿನ್ನೆ(ಜೂನ್ 28) ಸಿಎಂ ಸಿದ್ದರಾಮಯ್ಯ ನೇತೃತ್ವದ ಕ್ಯಾಬಿನೇಟ್ ಸಭೆಯಲ್ಲಿ ಚರ್ಚೆಯಾದರೂ ಇನ್ನೂ ಅರ್ಜಿ ಸಲ್ಲಿಕೆಗೆ ಮುಹೂರ್ತನಿಗದಿಯಾಗಿಲ್ಲ. ಕೆಲ ತಾಂತ್ರಿಕ ಕಾರಣಗಳಿಂದ ಯೋಜನೆ ಜಾರಿ ವಿಳಂಬವಾಗಲಿದೆಯಂತೆ. ಈ ಹಿನ್ನೆಲೆಯಲ್ಲಿ ಮನೆಯೊಡತಿಯ ಖಾತೆಗೆ 2 ಸಾವಿರ ರೂಪಾಯಿ ಬೀಳಲು ಇನ್ನೂ ತಡವಾಗಲಿದೆ.
ಇದನ್ನೂ ಓದಿ: Gruha Lakshmi Scheme: ಎಚ್ಚರ ಎಚ್ಚರ…ಗೃಹಲಕ್ಷ್ಮಿ ಯೋಜನೆ ಹೆಸರಿಲ್ಲಿ ಬಂದಿವೆ ಮೂರು ನಕಲಿ ಆ್ಯಪ್
ಈ ಹಿಂದೆ ಹಲವು ಯೋಜನೆಗೆ ಅರ್ಜಿ ಸಲ್ಲಿಕೆಯಲ್ಲಿ ಸಮಸ್ಯೆ ಉಂಟಾಗಿತ್ತು. ಇದರಿಂದ ಎಚ್ಚೆತ್ತ ಸರ್ಕಾರ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ವೇಳೆ ಗೊಂದಲ ಉಂಟಾಗುವುದನ್ನು ತಪ್ಪಿಸಲು ಪ್ರತ್ಯೇಕ ಮೊಬೈಲ್ ಆ್ಯಪ್ ರೆಡಿ ಮಾಡಲಾಗಿದೆ. ಯೋಜನೆಯನ್ನು ಸರಿಯಾದ ಫಲಾನುಭವಿಗಳಿಗೆ ತಲುಪಿಸಲು, ಯೋಜನೆ ದುರ್ಬಳಕೆ ತಪ್ಪಿಸಲು ಸಾಕಷ್ಟು ಮುಂಜಾಗ್ರತೆ ವಹಿಸಲಾಗುತ್ತಿದೆ. ಇದಕ್ಕಾಗಿಯೇ ಅಧಿಕಾರಿಗಳು ಸಮಯ ತೆಗೆದುಕೊಂಡು ಆ್ಯಪ್ ಸಿದ್ಧಪಡಿಸಿದ್ದಾರೆ. ಇನ್ನು ಜುಲೈ 14 ರಿಂದ ಅರ್ಜಿ ಸಲ್ಲಿಕೆ ಆರಂಭ ಆಗಲಿದೆ ಎನ್ನಲಾಗಿದ್ದು, ಈ ಸಂಬಂಧ ಜುಲೈ 3 ರಂದು ಹೆಚ್ಚಿನ ಮಾಹಿತಿ ನೀಡಲಿದ್ದಾರಂತೆ.
ಹೌದು…ಜ್ಯೋತಿ ಬೆಳಗಿದರೂ ಮನೆ ಬಾಗಿಲಿಗೆ ಲಕ್ಷ್ಮಿ ಬರುವುದು ಇನ್ನೂ ತಡವಾಗಲಿದೆ. ಗೃಹ ಲಕ್ಷ್ಮಿ ಯೋಜನೆಗೆ ಅನುದಾನದ ಕೊರತೆಯ ಆತಂಕ ಶುರುವಾಗಿದೆ. ಎಲ್ಲ ಗ್ಯಾರಂಟಿಗಳಿಗೆ ಹೋಲಿಸಿದರೆ ಗೃಹ ಲಕ್ಷ್ಮಿಗೆ ಹೆಚ್ಚಿನ ಅನುದಾನ ಬೇಕು. ಹೀಗಾಗಿ ತಾಂತ್ರಿಕ ಒತ್ತಡ ಕೇವಲ ಸರ್ಕಾರ ಹೇಳುತ್ತಿರುವ ನೆಪ ಮಾತ್ರಾನಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಸುಮಾರು 2 ಕೋಟಿಗೂ ಹೆಚ್ಚು ಮಹಿಳೆಯರಿಂದ ಅರ್ಜಿ ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಕ್ಕೆ ಸರಿಸುಮಾರು 30 ರಿಂದ 35 ಸಾವಿರ ಕೋಟಿಯಷ್ಟು ಬೃಹತ್ ಮೊತ್ತ ಗೃಹ ಲಕ್ಷ್ಮಿ ಯೋಜನೆಗೆ ಬೇಕಿದೆ. ಹೀಗಾಗಿ ಇಷ್ಟು ದೊಡ್ಡ ಮೊತ್ತವನ್ನು ಹೊಂದಿಸುವುದು ಸರ್ಕಾರಕ್ಕೆ ದೊಡ್ಡ ಚಿಂತೆಯಾಗಿದೆ.
ಬಜೆಟ್ ವರೆಗೂ ಕಾಯುವ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಬಜೆಟ್ ನಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಅನುದಾನ ಘೋಷಣೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಬಜೆಟ್ ಮುಗಿದ ಬಳಿಕ ವಿವಿಧ ಇಲಾಖೆಗಳ ಅನುದಾನ ಹಂಚಿಕೆ ಗಮನಿಸಿಕೊಂಡು ಗೃಹ ಲಕ್ಷ್ಮಿ ಜಾರಿಯಾಗುವ ಸಾಧ್ಯತೆಗಳಿವೆ. ಇನ್ನೊಂದೆಡೆ ಗೃಹ ಲಕ್ಷ್ಮಿ ಮೂಲಕ ಪಕ್ಷ ಸಂಘಟನೆಯನ್ನೂ ಬಲಗೊಳಿಸಿಕೊಳ್ಳು ಕಾಂಗ್ರೆಸ್ ಸರ್ಕಾರ ಪ್ಲ್ಯಾನ್ ಮಾಡುತ್ತಿದೆ ಎಂದು ತಿಳಿದುಬಂದಿದೆ. ಪ್ರಜಾಪ್ರತಿನಿಧಿಗಳ ಆಯ್ಕೆ ಮೂಲಕ ಪಕ್ಷ ಸಂಘಟನೆಗೂ ಯೋಜನೆ ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಿದೆ. ಇದೇ ಕಾರಣಕ್ಕೆ ಅಪ್ಲಿಕೇಷನ್ ರೆಡಿಯಾದರೂ ಇನ್ನೂ ಸಿಕ್ಕಿಲ್ಲ ಗೃಹ ಲಕ್ಷ್ಮಿ ಯೋಜನೆಗೆಅಧಿಕೃತವಾಗಿ ಜಾರಿಗೆಗೆ ಗ್ರೀನ್ ಸಿಗ್ನಲ್ ನೀಡುತ್ತಿಲ್ಲ ಎಂದು ಹೇಳಲಾಗಿದೆ.
ಮತ್ತೊಂದಡೆ ಆ್ಯಪ್ ಬಿಡುಗಡೆಗೂ ಮುನ್ನವೇ ಪ್ಲೇ ಸ್ಟೋರ್ಗಳಲ್ಲಿ ಫೇಕ್ ಆ್ಯಪ್ಗಳ ಆರ್ಭಟವೂ ಜೋರಾಗಿದೆ.. ಒಂದಲ್ಲ, ಎರಡಲ್ಲ ನಾಲ್ಕೈದು ಹೆಸರಿ ಗೃಹಲಕ್ಷ್ಮೀ ಆ್ಯಪ್ಗಳು ಬಂದಿವೆ. ಆ್ಯಪ್ಗಳಲ್ಲಿ ಅರ್ಜಿ ಸಲ್ಲಿಕೆ ಮಾಡೋರು ಇದರಿಂದ ಎಚ್ಚರಿಕೆ ಇರಬೇಕಾಗಿದೆ.
ಒಟ್ಟಾರೆಯಾಗಿ ಜೂನ್ ತಿಂಗಳಿನಿಂದ ಆರಂಭವಾಗಬೇಕಿದ್ದ ಗೃಹಲಕ್ಷ್ಮಿ ಯೋಜನೆ, ಜುಲೈ ತಿಂಗಳಲ್ಲಿ ಆರಂಭವಾಗಲಿದ್ದು, ಆಗಸ್ಟ್ ತಿಂಗಳ ಹೊತ್ತಿಗೆ ಫಲಾನುಭವಿಗಳ ಕೈ ಸೇರಲಿದೆ ಎನ್ನಲಾಗುತ್ತಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ