ಬೆಂಗಳೂರು: ನಗರದಲ್ಲಿ ಇಂದು 30 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಪ್ರತಿಭಟನೆಗೆ ಇಳಿದಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಬಂದು ಸೇರಿರುವ ಗುಲಾಬಿ ಗ್ಯಾಂಗ್ ಘರ್ಜನೆಗೆ ರಾಜಧಾನಿ ತತ್ತರಿಸಿದೆ. ಮೆಜೆಸ್ಟಿಕ್ ಸುತ್ತಮುತ್ತ ಭಾರಿ ಟ್ರಾಫಿಕ್ ಜಾಮ್ ನಿರ್ಮಾಣವಾಗಿದೆ. ನಗರದ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್ವರೆಗೂ ಆಶಾ ಕಾರ್ಯಕರ್ತೆಯರಿಂದ ಸಾಗರೋಪಾದಿಯಲ್ಲಿ ಪ್ರತಿಭಟನಾ ಱಲಿ ಸಾಗುತ್ತಿದೆ.
ಸಿಲಿಕಾನ್ ಸಿಟಿ ಆಯ್ತು ಪಿಂಕ್ ಸಿಟಿ:
ಸಂಬಳ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗೆ ಸಿಲಿಕಾನ್ ಸಿಟಿ ‘ಗುಲಾಬಿ’ಮಯವಾಗಿದೆ. ರಾಜಧಾನಿ ಅಂಗಳದಲ್ಲಿ ಅಶಾ ಕಾರ್ಯಕರ್ತೆಯರ ಸುನಾಮಿ ಎದ್ದಿದೆ. ರಾಜ್ಯದ ಮೂಲೆ ಮೂಲೆಯಿಂದ ಜನಸಾಗರ ಹರಿದು ಬಂದಿದೆ. ಆಶಾ ಕಾರ್ಯಕರ್ತೆಯರ ಬೃಹತ್ ಹೋರಾಟ ನಡೆಯುತ್ತಿದೆ. 15 ತಿಂಗಳಿಂದ ಪ್ರೋತ್ಸಾಹ ಧನ ಬಿಡುಗಡೆಯಾಗಿಲ್ಲ. ಈ ಬಾರಿ ಅನಿರ್ದಿಷ್ಟಾವಧಿ ಧರಣಿಗೆ ನಾವು ಸಿದ್ಧರಾಗಿದ್ದೇವೆ ಎಂದು ಆಶಾ ಕಾರ್ಯಕರ್ತೆಯರ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ತಿಳಿಸಿದ್ದಾರೆ.
ರಾಜಧಾನಿಯಲ್ಲಿ ಟ್ರಾಫಿಕ್ ಜಾಮ್:
ಆಶಾ ಕಾರ್ಯಕರ್ತೆಯರ ಪ್ರತಿಭಟನೆಯಿಂದ ಬೆಂಗಳೂರಿನ ವಿವಿಧೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್ವರೆಗೂ ಆಶಾ ಕಾರ್ಯಕರ್ತೆಯರು ಸಾಗರೋಪಾದಿಯಲ್ಲಿ ಪ್ರತಿಭಟನಾ ಜಾಥಾ ನಡೆಸುತ್ತಿದ್ದಾರೆ. ಹೀಗಾಗಿ ಮೆಜೆಸ್ಟಿಕ್, ಮೈಸೂರು ಬ್ಯಾಂಕ್ ಸರ್ಕಲ್, ಕಾರ್ಪೊರೇಷನ್, ಫ್ರೀಡಂಪಾರ್ಕ್ ಸುತ್ತಮುತ್ತ ಭಾರಿ ಟ್ರಾಫಿಕ್ ಜಾಮ್ ನಿರ್ಮಾಣವಾಗಿದೆ. ಇದರಿಂದ ವಾಹನ ಸವಾರರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
Published On - 1:44 pm, Fri, 3 January 20