ಹಾಸನ: ಕರ್ನಾಟಕದಲ್ಲಿ ವಿದ್ಯುತ್ ವಾಹನಗಳು ಸುಲಭವಾಗಿ ಚಾರ್ಜ್ (EV Charging Stations) ಮಾಡಲು ಅನುಕೂಲ ಕಲ್ಪಿಸುವ 1,000 ಚಾರ್ಜಿಂಗ್ ಸ್ಟೇಷನ್ಗಳನ್ನು ಶೀಘ್ರ ಆರಂಭಿಸಲಾಗುವುದು. ಜೂನ್ 24ರಿಂದ ರಾಜ್ಯಾದ್ಯಂತ ಅಭಿಯಾನ ಆರಂಭವಾಗಲಿದ್ದು, ಮೂರುವರೆ ಸಾವಿರ ಪ್ಲಗ್ ಪಾಯಿಂಟ್ ರೂಪಿಸುವ ಉದ್ದೇಶವನ್ನು ಹೊಂದಿದ್ದೇವೆ. ರಾಜ್ಯದ ಪ್ರತಿ ಜಿಲ್ಲಾ ಕೇಂದ್ರ, ಪ್ರವಾಸಿ ತಾಣ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಾರ್ಜಿಂಗ್ ಸೆಂಟರ್ ಆರಂಭಿಸಲಾಗುವುದು ಎಂದು ಹಾಸನದಲ್ಲಿ ಇಂಧನ ಸಚಿವ ಸುನಿಲ್ ಕುಮಾರ್ (V Sunil Kumar) ಹೇಳಿದರು. ದ್ವಿಚಕ್ರ ವಾಹನಗಳೂ ಸೇರಿದಂತೆ ವಿದ್ಯುತ್ ವಾಹನಗಳು ದೊಡ್ಡ ಪ್ರಮಾಣದಲ್ಲಿ ಬರುತ್ತಿವೆ. ದೇಶದಲ್ಲಿ ಅತಿಹೆಚ್ಚು ಇವಿ ಚಾರ್ಜರ್ ಕೇಂದ್ರಗಳನ್ನು ಹೊಂದಿರುವ ರಾಜ್ಯವಾಗಿ ಕರ್ನಾಟಕ ಇರಬೇಕು ಎನ್ನುವುದು ನಮ್ಮ ಉದ್ದೇಶ. ಇದಕ್ಕಾಗಿ ಹಲವು ಯೋಜನೆ ರೂಪಿಸಿದ್ದೇವೆ ಎಂದು ಹೇಳಿದರು.
ಪಠ್ಯ ಪುಸ್ತಕ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ನಾಯಕರು ಅನಗತ್ಯವಾಗಿ ವಿವಾದ ಹುಟ್ಟು ಹಾಕುತ್ತಿದ್ದಾರೆ. ಮುಕ್ತ ಮನಸ್ಸಿನಿಂದ ಲೋಪದೋಷಗಳನ್ನು ಸರಿಮಾಡಿಕೊಳ್ಳಲು ಸಿದ್ಧ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕೆಲವು ಸತ್ಯ ಸಂಗತಿಗಳು ಕೆಲವರಿಗೆ ಕಹಿಯಾಗಿ ಕಾಣುತ್ತವೆ. ಅದಕ್ಕೆ ನಾವು ಏನೂ ಮಾಡಲು ಆಗುವುದಿಲ್ಲ. ಕೆಲವರಿಗೆ ಕಹಿಯಾಗಿ ಕಾಣುತ್ತೆ ಎಂದು ಸತ್ಯ ಮುಚ್ಚಿಡಲು ಸಾಧ್ಯವಿಲ್ಲ. ಯಾವ ಸತ್ಯ ಸಂಗತಿಗಳನ್ನು ಇತಿಹಾಸದಲ್ಲಿ ಮುಚ್ಚಿಡಲಾಗಿತ್ತೊ ಅದನ್ನು ತಿಳಿಸುವ ಪ್ರಯತ್ನ ಆಗಿದೆ. ಕೆಲವು ಸಾಲುಗಳಲ್ಲಿ ಲೋಪದೋಷ ಆಗಿರಬಹುದು ಅದನ್ನ ಸರಿಮಾಡೋದಾಗಿ ಸ್ವತಃ ಸಿಎಂ ಹೇಳಿದ್ದಾರೆ ಎಂದರು.
ರಾಜ್ಯದಲ್ಲಿ ಯಾವುದೇ ವಿವಾದಗಳು ಇಲ್ಲ ಎನ್ನುವ ಕಾರಣಕ್ಕೆ ವಿವಾದಗಳನ್ನು ಹುಟ್ಟು ಹಾಕಲಾಗುತ್ತಿದೆ. ರಾಜ್ಯದಲ್ಲಿ ಒಂದು ಒಳ್ಳೆಯ ಸರ್ಕಾರದ ಆಡಳಿತ ನಡೆಯುತ್ತಿದೆ. ಇಂತಹ ವೇಳೆಯಲ್ಲಿ ಆಡಳಿತದ ಮೇಲೆ ಜನರ ಲಕ್ಷ್ಯ ದೂರಮಾಡಿ ವಿವಾದದ ಮೂಲಕ ತಮ್ಮ ಇರುವಿಕೆ ತೋರಿಸಲು ಹೊರಟಿದ್ದಾರೆ. ಇದು ಬಹಳ ದಿನ ನಡೆಯಲು ಸಾದ್ಯವಿಲ್ಲ. ನಾವು ಬಜೆಟ್ನಲ್ಲಿ ಘೋಷಣೆ ಮಾಡಿದ ವಿಚಾರಗಳು ಸರ್ಕಾರಿ ಆದೇಶವಾಗಿ ಬರುತ್ತಿವೆ. ಜನರ ಭಾವನೆಗಳೊಂದಿಗೆ ಕಾಂಗ್ರೆಸ್ ಆಟವಾಡುತ್ತಿದೆ ಎಂದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:55 pm, Wed, 8 June 22