ಶ್ರವಣಬೆಳಗೊಳ: ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಜೈನಕಾಶಿ (Jain Kashi) ಎಂದೇ ಕರೆಯಲ್ಪಡುವ ಹಾಸನ (Hassan) ಜಿಲ್ಲೆಯ ಶ್ರವಣಬೆಳಗೊಳದ (Shravanabelagola) ದಿಗಂಬರ ಜೈನ ಮಠದ ನೂತನ ಭಟ್ಟಾರಕರಾಗಿ ಶ್ರೀ ಚಾರೂಕೀರ್ತಿ ಆಗಮಕೀರ್ತಿ ಭಟ್ಟಾಕರ ಸ್ವಾಮೀಜಿ (Charukeerthi Agam Kirti Swamiji) ನೇಮಕಗೊಂಡಿದ್ದಾರೆ. ಜೈನ ಮಠದ 20 ನೇ ಭಟ್ಟಾರಕರಾಗಿ, ಇಂದು (ಮಾ.27) ರಾಜ್ಯದ ಜೈನ ಮಠಗಳ ಭಟ್ಟಾರಕರ ಸಮ್ಮುಖದಲ್ಲಿ ಶ್ರೀ ಚಾರೂಕೀರ್ತಿ ಆಗಮಕೀರ್ತಿ ಭಟ್ಟಾಕರ ಪಟ್ಟಾಭಿಷೇಕ ನೆರವೇರಿತು.
ನಾಲ್ಕು ತಿಂಗಳ ಹಿಂದೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಆಗಮ ಇಂದ್ರ ಇವರಿಗೆ ಕ್ಷುಲ್ಲಕ ದೀಕ್ಷೆ ನೀಡುವ ಮೂಲಕ ಆಗಮಕೀರ್ತಿ ಎಂದು ನಾಮಕರಣ ಮಾಡಿದ್ದರು. ತಮ್ಮ ಮಠದಲ್ಲಿಯೇ ಅವರಿಗೆ ಆಶ್ರಯ ನೀಡಿ ಮಠದ ಪರಂಪರೆ, ಸಂಸ್ಕಾರ, ಕ್ಷೇತ್ರದ ಪರಿಚಯ ಮಾಡಿಸಿದ್ದರು. ಉತ್ತರಾಧಿಕಾರಿ ನೇಮಕ ಮಾಡಿದ ಮೂರು ತಿಂಗಳಲ್ಲಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಕಾಲಿಕವಾಗಿ ಜಿನೈಕ್ಯರಾದರು. ಶ್ರೀಮಠದ ಭಟ್ಟಾರಕ ಪರಂಪರೆ ಕ್ರಿ.ಶ.904 ರಿಂದಲೂ ಬೆಳೆದು ಬಂದಿದೆ.
ಇವರು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಅಶೋಕ್ ಕುಮಾರ್ ಇಂದಿರಾ ಮತ್ತು ಅನಿತಾ ಅಶೋಕ್ ಕುಮಾರ್ ದಂಪತಿಗಳ ಪುತ್ರ. 2001ರ ಫೆಬ್ರವರಿ 26ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಸಾಗರ ಪಟ್ಟಣದ ರೋಟರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಎಂಜೆಎನ್ ಪೈ ಪ್ರೌಢಶಾಲೆಯಲ್ಲಿ ಮತ್ತು ಪದವಿಪೂರ್ವ ಶಿಕ್ಷಣವನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದರು. ಪದವಿ ಶಿಕ್ಷಣವನ್ನು ಎಲ್ಬಿ ಮತ್ತು ಎಸ್ ಬಿ ಎಸ್ ಕಾಲೇಜು ಸಾಗರದಲ್ಲಿ ಪಡೆದಿದ್ದಾರೆ. ಗಣಕಯಂತ್ರ ತರಬೇತಿಯನ್ನು ಪಡೆದಿರುವ ಇವರು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಸುಲಲಿತವಾಗಿ ಮಾತನಾಡುತ್ತಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:23 pm, Mon, 27 March 23