
ಹಾಸನ/ಕಲಬುರಗಿ, ಜನವರಿ 21: ಕುಡಿದ ಮತ್ತಿನಲ್ಲಿ ಗೆಳೆಯರು ಸ್ನೇಹಿತನನ್ನೇ ಹತ್ಯೆ ಮಾಡಿರುವ ಆತಂಕಕಾರಿ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ನಡೆದಿದೆ. ಗಣೇಶ್(46) ಮೃತ ದುರ್ದೈವಿಯಾಗಿದ್ದು, ಅಶೋಕ್ ಮತ್ತು ಸುಧೀರ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದ್ದು, ಪ್ರಕರಣ ಸಂಬಂಧ ಆರೋಪಿಗಳನ್ನ ಹಳ್ಳಿಮೈಸೂರು ಪೊಲೀಸರು ಬಂಧಿಸಿದ್ದಾರೆ.
ಜ.19ರಂದು ಜಮೀನು ಕಾವಲು ಕಾಯಲು ಗಣೇಶ್ ಹೋಗಿದ್ದು, ಈ ವೇಳೆ ಸ್ನೇಹಿತರ ಜೊತೆ ಎಣ್ಣೆ ಪಾರ್ಟಿ ಮಾಡಿದ್ದ. ಬಳಿಕ ಕುಡಿದ ಮತ್ತಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆ ಶುರುವಾಗಿದ್ದು, ಮಾತಿಗೆ ಮಾತು ಬೆಳೆದು ಚಾಕುವಿನಿಂದ ಇರಿದು ಗಣೇಶ್ ಕೊಲೆ ನಡೆದಿದೆ. ಸ್ಥಳದಲ್ಲೇ ಗಣೇಶ್ ಶವ ಬಿಟ್ಟು ಆರೋಪಿಗಳು ಪರಾರಿಯಾಗಿದ್ದು, ಮೃತದೇಹದ ತಲೆ ಮತ್ತು ಕುತ್ತಿಗೆ ಭಾಗವನ್ನು ಕಾಡು ಪ್ರಾಣಿಗಳು ಕಚ್ಚಿ ತಿಂದಿವೆ. ಶವ ಗಮನಿಸಿದ ಕರ್ತವ್ಯಕ್ಕೆ ತೆರಳಿದ್ದ ಅರಣ್ಯ ಸಿಬ್ಬಂದಿ ಈ ಬಗ್ಗೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಮತ್ತು ಸೋಕೋ ತಂಡ ಭೇಟಿ ನೀಡಿ ಪರಿಶೀಲಿಸಿದ್ದು, ಬಂಧಿತ ಅಶೋಕ್ ಈಗಾಗಲೇ ಕೊಲೆ ಕೇಸ್ನಲ್ಲಿ ಜೈಲಿಗೆ ಹೋಗಿ ಬಂದಿದ್ದಾತ ಎಂಬ ವಿಷಯ ಗೊತ್ತಾಗಿದೆ. ಈ ಬಗ್ಗೆ ಹಳ್ಳಿಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ: ಲೇಡಿ ಫಿಟ್ನೆಸ್ ಇನ್ಫ್ಲುಯೆನ್ಸರ್ಗೆ ಲೈಂಗಿಕ ಕಿರುಕುಳ; ಹರಿಯಾಣ ವ್ಯಕ್ತಿ ಅರೆಸ್ಟ್
ಕಲಬುರಗಿಯ ಮೋಹನ್ ಲಾಡ್ಜ್ ಬಳಿಯ ಪಾರ್ಕ್ನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಸೈಯದ್ ಮೆಹಬೂಬ್(21) ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದು, ಹಳೇ ದ್ವೇಷಕ್ಕೆ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಸೈಯದ್ ಮೆಹಬೂಬ್ ಕೆಲವು ಕಳ್ಳತನ ಪ್ರಕರಣಗಳ ಆರೋಪಿಯೂ ಆಗಿದ್ದು, ಸ್ಥಳಕ್ಕೆ ಕಲಬುರಗಿ ಪೊಲೀಸ್ ಆಯುಕ್ತ ಶರಣಪ್ಪ ಭೇಟಿನೀಡಿ ಪರೀಶಿಲನೆ ನಡೆಸಿದ್ದಾರೆ. ಈ ಬಗ್ಗೆ ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.