ಹಾಸನ, ಡಿಸೆಂಬರ್ 4: ಹಾಸನ ಜಿಲ್ಲೆಯ ಸಕಲೇಶಪುರ (Sakleshpura) ತಾಲ್ಲೂಕಿನ ಯಸಳೂರು ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ನಡೆದ ಕಾಳಗದಲ್ಲಿ ದಸರಾ ಆನೆ ಅರ್ಜುನ ಮೃತಪಟ್ಟಿದೆ. ಅರ್ಜುನ (Dasata Elephant Arjuna) ಹಾಗೂ ಕಾಡಾನೆ ನಡುವೆ ನಡೆದ ಕಾಳದ ಬಗ್ಗೆ ಇದೀಗ ವಿಭಾಗೀಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ‘ಟಿವಿ9’ಗೆ ಮಾಹಿತಿ ನೀಡಿದ್ದಾರೆ. ಸೋಮವಾರ ಬೆಳಗ್ಗೆಯೇ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಕಾಡಾನೆಗಳು ಇದ್ದ ಸ್ಥಳಕ್ಕೆ ಹೋದಾಗ 12 ಆನೆಗಳಿದ್ದವು. ಆನೆಗಳ ಗುಂಪನ್ನು ಗಂಡಾನೆಯೊಂದು ಲೀಡ್ ಮಾಡ್ತಿತ್ತು. ಕಾಡಾನೆ ಮತ್ತಿನಲ್ಲಿ ಇದ್ದರೂ ಅರ್ಜುನ ಕಾಳಗಕ್ಕೆ ಇಳಿದಿದ್ದ ಎಂದು ಅವರು ತಿಳಿಸಿದ್ದಾರೆ.
ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡಲಾಗಿದ್ದರೂ ಅದು ಪೂರ್ಣ ಪ್ರಜ್ಞೆ ತಪ್ಪಿರಲಿಲ್ಲ. ಮತ್ತಿನಲ್ಲಿದ್ದಾಗ ಸಾಕಾನೆಗಳ ಮೇಲೆ ದಾಳಿಗೆ ಮುಂದಾಗಿದೆ. ಇದೇ ವೇಳೆ ಇತರ ಆನೆಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಓಡಿಹೋಗಿದ್ದಾರೆ. ಆದರೆ, ಅರ್ಜುನ ಮಾತ್ರ ಅದರ ಜತೆ ಕಾಳಗ ನಡೆಸಿತು ಎಂದು ಅವರು ಮಾಹಿತಿ ನೀಡಿದ್ದಾರೆ.
ಇದೀಗ ಮೃತಪಟ್ಟಿರುವ ಅರ್ಜುನ ಆನೆ ಬಳಿ ಹೋಗಲು ಸಾಧ್ಯವಾಗುತ್ತಿಲ್ಲ. ಸುತ್ತಮುತ್ತ ಕಾಡಾನೆಗಳು ಇನ್ನೂ ಓಡಾಡುತ್ತಿವೆ. ಮೇಲಧಿಕಾರಿಗಳಿಗೆ ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದೇವೆ. ಮೇಲಧಿಕಾರಿಗಳ ಸೂಚನೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೋಹನ್ ಕುಮಾರ್ ತಿಳಿಸಿದ್ದಾರೆ.
ದಸರಾ ಆನೆ ಅರ್ಜುನನ ಸಾವಿನಿಂದ ಮಾವುತ ವಿನೋದ್ ಕಂಗಾಲಾಗಿದ್ದಾರೆ. ಅಸ್ವಸ್ಥಗೊಂಡ ಅವರು ಪ್ರಜ್ಞೆತಪ್ಪಿ ಬಿದ್ದಿದ್ದು, ಌಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇತರ ಮಾವುತರು ಕೂಡ ಅರ್ಜುನನನ್ನು ಕಳೆದುಕೊಂಡು ಬಿಕ್ಕಿಬಿಕ್ಕಿ ಅಳುತ್ತಿರುವ ದೃಶ್ಯ ಕಂಡುಬಂದಿದೆ.
ಇದನ್ನೂ ಓದಿ: ಹಾಸನ: ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಸಕಲೇಶಪುರದಲ್ಲಿ ಕಾಡಾನೆ ದಾಳಿಗೆ ಬಲಿ
ಮತ್ತಿನಲ್ಲಿದ್ದ ಕಾಡಾನೆಯೊಂದಿಗೆ ಹೋರಾಟ ನಡೆಸುವ ಮೂಲಕ ಅರ್ಜುನ ಹಲವರ ಪ್ರಾಣ ಉಳಿಸಿದೆ. ಅರ್ಜುನ ಹೋರಾಟ ನಡೆಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ ಎನ್ನಲಾಗಿದೆ. ಕೊಂಚ ಎಡವಟ್ಟಾಗಿದ್ರೂ ಹಲವು ಸಿಬ್ಬಂದಿ ಪ್ರಾಣಕ್ಕೆ ಕುತ್ತು ಬರುತ್ತಿತ್ತು. ಅರ್ಜುನ ಕಾಡಾನೆ ಜತೆ ಸೆಣಸಿದ್ದರಿಂದ ಇತರ ಆನೆಗಳಿಗೆ ಹಾಗೂ ಸಿಬ್ಬಂದಿಗೆ ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಯಿತು ಎಂದು ಮೂಲಗಳು ತಿಳಿಸಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ