ಕಾಂಗ್ರೆಸ್ ನಮ್ಮನ್ನು ಹೊರಗಿಟ್ಟಾಗ ಮೋದಿ, ಅಮಿತ್ ಶಾ ಸ್ವಾಗತಿಸಿದರು: ಹೆಚ್ಡಿ ದೇವೇಗೌಡ
ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಈ ಬಗ್ಗೆ ಕಾಂಗ್ರೆಸ್ ದಳವನ್ನು ಟೀಕಿಸುತ್ತಿದ್ದು, ಜೆಡಿಎಸ್ ಜಾತ್ಯತೀತ ಪಕ್ಷವಲ್ಲ ಎಂದು ಜರಿಯುತ್ತಿದೆ. ಈ ನಡುವೆ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರು ಕಾಂಗ್ರೆಸ್ ಜೊತೆಗಿನ ಸಂಬಂಧ ಕಳೆದುಕೊಂಡಿದ್ದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಹಾಸನ, ಡಿ.4: ನಮ್ಮನ್ನು ಕಾಂಗ್ರೆಸ್ ಪಕ್ಷ ಹೊರಗಿಟ್ಟಾಗ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಸ್ವಾಗತ ಮಾಡಿದರು ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ (HD Deve Gowda) ಹೇಳಿದರು. ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಈ ಬಗ್ಗೆ ಕಾಂಗ್ರೆಸ್ ದಳವನ್ನು ಟೀಕಿಸುತ್ತಿದೆ.
ಈ ನಡುವೆ, ಕಾಂಗ್ರೆಸ್ ಜೊತೆಗಿನ ಸಂಬಂಧ ಕಡಿದುಕೊಂಡಿದ್ದರ ಬಗ್ಗೆ ಹಾಸನದಲ್ಲಿ ಸ್ಪಷ್ಟನೆ ನೀಡಿದ ದೇವೇಗೌಡ, ನಮ್ಮ ಪಕ್ಷ ಜಾತ್ಯತೀತ ಜನತಾದಳ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದಾಗ ರಾಷ್ಟ್ರದ ಎಲ್ಲಾ ಜಾತ್ಯಾತೀತ ಪಕ್ಷಗಳ ಮುಖಂಡರು ಬಂದಿದ್ದರು. ಆದರೆ ನಮ್ಮನ್ನ ಹೊರಗೆ ಇಡಲೇಬೇಕೆಂದು ತೀರ್ಮಾನ ಮಾಡಿದ್ದು ಯಾರು? ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಸರ್ಕಾರ ತೆಗೆದವರು ಯಾರು? ಯಾರು ನಮ್ಮನ್ನು ಹೊರಗಿಡಬೇಕೆಂದು ಪ್ರಯತ್ನ ಮಾಡಿದರೋ ಅವರೇ ಸರ್ಕಾರ ಕೆಡವಿದರು. ನಮ್ಮನ್ನು ಹೊರಗೆ ದೂಡಿದ್ದು ಕಾಂಗ್ರೆಸ್. ನಮ್ಮನ್ನು ಹೊರಗಿಟ್ಟಾಗ ಮೋದಿ ಮತ್ತು ಶಾ ನಮ್ಮನ್ನ ಸ್ವಾಗತ ಮಾಡಿದರು ಎಂದು ದೇವೇಗೌಡ ಹೇಳಿದರು.
ಜೆಡಿಎಸ್ ಲೆಕ್ಕಕ್ಕೆ ಇಲ್ಲ, ಆಟಕ್ಕೆ ಇಲ್ಲ, ಕೆಲವೇ ದಿನದಲ್ಲಿ ಅದು ಇರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರು ಲಘುವಾಗಿ ಮಾತನಾಡಿದ್ದಾರೆ. ಮೋದಿಯವರು ಪ್ರಧಾನಿಯಾಗಿ ವೈಯಕ್ತಿಕವಾಗಿ ನನ್ನ ಬಗ್ಗೆ ಗೌರವ ಹೊಂದಿದ್ದಾರೆ. ಕಾಂಗ್ರೆಸ್ ನಡವಳಿಕೆಯನ್ನು ಗಮನಿಸಿದ ಮೋದಿ, ಶಾ ನಮ್ಮನ್ನ ಸ್ವಾಗತ ಮಾಡಿದ್ದಾರೆ. ಮುಂದಿನ ರಾಜಕೀಯ ಬೆಳವಣಿಗೆ ಹಾಗೂ ಕರ್ನಾಟಕದಲ್ಲಿ ನಾವು ಬಿಜೆಪಿ ಜೊತೆ ಕೈ ಜೋಡಿಸುತ್ತೇವೆ ಎಂದರು.
ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತೇವೆ ಇದರಲ್ಲಿ ಮುಚ್ಚುಮರೆ ಇಲ್ಲ. ನಮ್ಮ ಪಕ್ಷ ಉಳಿಬೇಕು, ಜನತಾ ಪರಿವಾರ ಆರಂಭವಾದಾಗಿಂದ ಉಳಿಸಿಕೊಂಡು ಬಂದಿದ್ದೇವೆ. ರೈತರ, ಬಡವರ ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡಿದ್ದೇವೆ. ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದು ಯಾರು? ಎಂದು ಕೇಳಿದರು.
ಇದನ್ನೂ ಓದಿ: ಬಿಜೆಪಿಗೆ ದಳಪತಿ ಶುಭಾಶಯ, ಮೋದಿ ಅದ್ಭುತ ಪ್ರದರ್ಶನಕ್ಕೆ ಚುನಾವಣಾ ಫಲಿತಾಂಶ ಸಾಕ್ಷಿ: ಹೆಚ್ಡಿ ದೇವೇಗೌಡ
ಈ ಪಕ್ಷವನ್ನು ಮುಗಿಸೇ ಬಿಡುತ್ತೇವೆ ಎಂದಾಗ ಮೋದಿಯವರು ನಮಗೆ ಒಂದು ಅವಕಾಶ ಮಾಡಿಕೊಟ್ಟಿದ್ದಾರೆ. ಕುಮಾರಸ್ವಾಮಿ ಅವರು ಮುಂದಿನ ದಿನಗಳಲ್ಲಿ ಪ್ರಧಾನಿ, ಗೃಹ ಸಚಿವರು, ಬಿಜೆಪಿ ಅಧ್ಯಕ್ಷರ ಜೊತೆ ಚರ್ಚೆ ಮಾಡುತ್ತಾರೆ. ಅಂತಿಮವಾಗಿ ಲೋಕಸಭಾ ಚುನಾವಣೆ ಬಗ್ಗೆ ನಿರ್ಣಯ ಮಾಡುತ್ತಾರೆ. ನಾವು 28 ಸ್ಥಾನಗಳಿಗೆ ಸ್ಪರ್ಧೆ ಮಾಡಲು ಐಕ್ಯತೆಯಿಂದ ಒಮ್ಮತದ ನಿರ್ದಾರಕ್ಕೆ ಬರುತ್ತೇವೆ ಎಂದರು.
ಮುಂದಿನವಾರ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಕರೆಯಬಹುದು. ಆಗ ಕುಮಾರಸ್ವಾಮಿ ಹೋಗಿ ಮಾತುಕತೆ ಮುಗಿಸುತ್ತಾರೆ. ಮುಂದಿನ ವಾರ ಜೆಡಿಎಸ್ ಬಿಜೆಪಿ ಚುನಾವಣಾ ಮೈತ್ರಿ ಬಗ್ಗೆ ಅಂತಿಮ ಮಾತುಕತೆ ನಡೆಯಬಹುದು ಎಂದರು.
ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದೆ. ಆದರೆ ವಾಸ್ತವ ಮರೆಮಾಚಲು ಆಗಲ್ಲ. ರಾಹುಲ್ ಗಾಂಧಿ ಅವರು ನಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ಗೆ ಕರ್ನಾಟಕದಲ್ಲಿ 136 ಗೆದ್ದೆವು ಎನ್ನುವ ಅಹಂ ಇತ್ತು. ಅದರ ವಿರುದ್ಧ ಹೋರಾಟ ಮಾಡುವ ಶಕ್ತಿ ಮೋದಿಯವರ ನಾಯಕತ್ವದಲ್ಲಿ ಜೆಡಿಎಸ್ ಸಹಕಾರದಿಂದ ಹೋರಾಟ ಮಾಡುತ್ತೇವೆ ಎಂದರು.
ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಸಿಎಂ ಆಗಿ ಲೂಟಿ ಮಾಡಿ ಯಾರಿಗಾದರು ಹಣ ಕೊಟ್ಟರಾ? ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ಮಾಡಿದರು, ದೆಹಲಿಯಲ್ಲಿ ಯಾರಿಗಾದರು ಹಣ ಕೊಟ್ಟರಾ? ನಾನು ಸಿಎಂ ಆಗಿ ಕೆಲಸ ಮಾಡಿದೆ, ಯಾರಿಗಾದರು ಹಣ ಕೊಟ್ಟಿದ್ದೇನಾ? ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ತೆಲಂಗಾಣದಲ್ಲಿ ಚುನಾವಣೆ ಗೆಲ್ಲಲು ಎಷ್ಟು ಹಣ ಇಲ್ಲಿಂದ ಹೋಗಿದೆ? ಚುನಾವಣಾ ಆಯೋಗ ಎಷ್ಟು ಹಣ ಜಪ್ತಿ ಮಾಡಿದೆ? ಎಂದು ಪ್ರಶ್ನಿಸಿದ ದೇವೇಗೌಡರು, ತೆಲಂಗಾಣದಲ್ಲಿ ಕಾಂಗ್ರೆಸ್ ಕರ್ನಾಟಕದ ಹಣ ಹಂಚಿ ಗೆದ್ದಿದೆ ಎಂದು ಟೀಕಿಸಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ