
ಹಾಸನ, ಸೆಪ್ಟೆಂಬರ್ 27: ಹಾಸನಾಂಬೆ ದರ್ಶನೋತ್ಸವಕ್ಕೆ ದಿನಾಂಕ ನಿಗದಿಯಾಗಿದ್ದು, 2026ರ ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರಲಿದೆ. ಹಾಸನ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆಎಂ ಶಿವಲಿಂಗೇಗೌಡ ಅವರು ಹಾಸನಾಂಬೆ ದರ್ಶನೋತ್ಸವ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಪೋಸ್ಟರ್ ಮತ್ತು ವೆಬ್‌ಸೈಟ್ ಬಿಡುಗಡೆ ಮಾಡಿದರು. ಈ ಬಾರಿಯೂ ಪಾಸ್ ವ್ಯವಸ್ಥೆಯನ್ನು ಅತ್ಯಂತ ಕಡಿಮೆ ಇರಿಸಲಾಗುವುದು ಎಂದು ಸಚಿವರು ತಿಳಿಸಿದರು. ಗಣ್ಯರ ದರ್ಶನಕ್ಕೆ ಕಳೆದ ವರ್ಷದಂತೆ ಸಮಯ ನಿಗದಿ ಮಾಡಲಾಗುತ್ತದೆ. ಸಾರ್ವಜನಿಕ ಭಕ್ತರಿಗೆ ಸಮರ್ಪಕವಾಗಿ ದರ್ಶನ ಕಲ್ಪಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಹಾಸನಾಂಬೆ ಉತ್ಸವವನ್ನು ಇಡೀ ಜಿಲ್ಲೆಯ ಜನರನ್ನು ಒಳಗೊಂಡ ಹಬ್ಬವನ್ನಾಗಿ ಆಚರಿಸುವ ಉದ್ದೇಶವಿದೆ. ಈ ಬಾರಿ ದನಗಳ ಜಾತ್ರೆ, ರಂಗೋಲಿ ಸ್ಪರ್ಧೆ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಅಭಿಲಾಷೆ ಇದೆ ಎಂದು ಶಿವಲಿಂಗೇಗೌಡ ತಿಳಿಸಿದರು.
ಹಾಸನಾಂಬೆ ದರ್ಶನಕ್ಕೆ ಬರುವ ಸಾರ್ವಜನಿಕರು ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಬಾರದು. ಆರು-ಏಳು ಗಂಟೆ ಕ್ಯೂನಲ್ಲಿ ನಿಂತು ಭಕ್ತರು ಅಸಮಾಧಾನ ವ್ಯಕ್ತಪಡಿಸುವಂತಾಗಬಾರದು ಎಂಬ ಕಾರಣಕ್ಕೆ ಸಾರ್ವಜನಿಕರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಸಚಿವರು ಹೇಳಿದರು. ಪುಟ್ಟ ಮಕ್ಕಳೊಂದಿಗೆ ಬರುವ ಮಹಿಳಾ ಭಕ್ತರಿಗೆ ವಿಶೇಷ ಸರದಿ ಸಾಲು ಕಲ್ಪಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಹಾಸನಾಂಬೆ ಉತ್ಸವದ ಹಣಕಾಸು ನಿರ್ವಹಣೆ ಈ ಬಾರಿ ಪಾರದರ್ಶಕವಾಗಿರಲಿದೆ ಎಂದು ಸಚಿವ ಶಿವಲಿಂಗೇಗೌಡ ಹೇಳಿದರು. ಪೈಸಾ ಟು ಪೈಸಾ ಲೆಕ್ಕ ಇರಲಿದೆ ಎಂದು ತಿಳಿಸಿದ ಅವರು, ಹಿಂದಿನ ಅವ್ಯವಹಾರಗಳ ಬಗ್ಗೆ ತಾವು ತನಿಖೆ ಮಾಡಲು ಹೋಗುವುದಿಲ್ಲ ಎಂದರು. ಈ ಬಾರಿ ಯಾವುದೇ ರೀತಿಯ ದುಂದು ವೆಚ್ಚಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಉತ್ಸವದ ಸಿದ್ಧತೆ ಕುರಿತು ನಡೆದ ಸಭೆಯಲ್ಲಿ ವಿವಿಧ ಸಲಹೆಗಳನ್ನು ಆಲಿಸಲಾಯಿತು. ಉತ್ಸವದ ಹಿನ್ನೆಲೆ ನಡೆಯುವ ಕಾರ್ಯಕ್ರಮಗಳನ್ನು ಬಸ್ ನಿಲ್ದಾಣದ ಸಮೀಪ ಆಯೋಜಿಸುವ ಬಗ್ಗೆಯೂ ಚರ್ಚೆ ನಡೆಯಿತು. ಕರ್ತವ್ಯಕ್ಕೆ ಆಗಮಿಸುವ ಸಿಬ್ಬಂದಿಗೆ ಎಂಟು ಗಂಟೆಗಳ ಕರ್ತವ್ಯ ನಿರ್ವಹಣೆಗೆ ಅವಕಾಶ ನೀಡಬೇಕು ಹಾಗೂ ಗ್ರಾಮ ಸಹಾಯಕರಿಗೆ ಗೌರವಧನ ನೀಡಬೇಕು ಎಂಬ ಬೇಡಿಕೆಗಳು ಸಭೆಯಲ್ಲಿ ಕೇಳಿಬಂದವು.
ಹಾಸನಾಂಬೆ ಉತ್ಸವವನ್ನು ಮತ್ತಷ್ಟು ಉತ್ತಮವಾಗಿ ಆಯೋಜಿಸಲು ಸಾರ್ವಜನಿಕರು ಹಾಗೂ ಅಧಿಕಾರಿಗಳಿಂದ ಸಲಹೆಗಳನ್ನು ಪಡೆದು ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉತ್ಸವಕ್ಕೆ ಒಂದು ದಿನ ಆಗಮಿಸಲಿದ್ದಾರೆ ಎಂದು ಸಚಿವರು ತಿಳಿಸಿದ್ದು, ಉದ್ಘಾಟನೆ ದಿನವೇ ಆಗಮಿಸುತ್ತಾರೆಯೇ ಎಂಬುದು ಬಳಿಕ ನಿರ್ಧಾರವಾಗಲಿದೆ ಎಂದರು.
ಹಾಸನಾಂಬೆ ದೇವಿಯ ಬಗ್ಗೆ ಮಾತನಾಡಿದ ಶಿವಲಿಂಗೇಗೌಡ, ಪ್ರತೀ ಬಾರಿ ಹಾಸನಾಂಬೆ ಬಳಿ, ‘ಮುಂದಿನ ಬಾರಿಯಾದರೂ ದೇವಿಯ ಸೇವೆ ಮಾಡುವ ಅವಕಾಶ ಸಿಗಲಿ’ ಎಂದು ಬೇಡಿಕೊಳ್ಳುತ್ತಿದ್ದೆ. ಸ್ವಲ್ಪ ತಡವಾದರೂ ಈಗ ಆ ಅವಕಾಶ ಸಿಕ್ಕಿದೆ. ಹಾಸನಾಂಬೆ ಆಶೀರ್ವಾದದಿಂದಲೇ ಸಚಿವ ಸ್ಥಾನ ಸಿಕ್ಕಿದೆ ಎಂದು ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ