ಹಾಸನ: ನಾಳೆ ಹಾಸನಾಂಬೆ ದೇಗುಲದ ಗರ್ಭಗುಡಿಯ ಬಾಗಿಲು ಮುಚ್ಚಲಿರುವ ಹಿನ್ನೆಲೆಯಲ್ಲಿ, ಇಂದು (ನವೆಂಬರ್ 5) ಹಾಸನಾಂಬೆ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಕಳೆದ ಎಂಟು ದಿನಗಳಲ್ಲಿ ಲಕ್ಷಾಂತರ ಭಕ್ತರು ಹಾಸನಾಂಬೆ ದರ್ಶನ ಪಡೆಯುತ್ತಿದ್ದಾರೆ. ಇಂದು ಕೂಡ ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಸಹಸ್ರಾರು ಮಂದಿ ಹಾಸನಾಂಬೆ ದರ್ಶನ ಪಡೆಯುತ್ತಿದ್ದಾರೆ. ಸಾರ್ವಜನಿಕ ದರ್ಶನದ ಕೊನೆಯ ದಿನವಾಗಿರುವುದರಿಂದ ದೀಪಾವಳಿ ಹಬ್ಬದ ದಿನವೂ ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ.
ನಾಳೆ ಮದ್ಯಾಹ್ನ 12 ಗಂಟೆಗೆ ಹಾಸನಾಂಬೆ ದೇಗುಲ ಮುಚ್ಚಲಿದೆ. ಹೀಗಾಗಿ ಇಂದು ರಾತ್ರಿವರೆಗೂ ಹಾಸನಾಂಬೆ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ನಾಳೆ ಬೆಳಿಗ್ಗೆ ಧಾರ್ಮಿಕ ವಿಧಿವಿಧಾನಗಳ ಮೂಲಕ ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಹಾಸನಾಂಬೆ ದೇಗುಲ ಮುಚ್ಚಲಾಗುತ್ತದೆ. ಮತ್ತೆ ಒಂದು ವರ್ಷದ ಬಳಿಕ ಮಾತ್ರ ಹಾಸನಾಂಬೆ ದರ್ಶನಕ್ಕೆ ಅವಕಾಶ ಇರಲಿದೆ.
ಹಾಸನಾಂಬೆ ದರ್ಶನ ಪಡೆದ ಶಾಸಕರು
ಹಾಸನಾಂಬೆ ದರ್ಶನೋತ್ಸವದ ಒಂಬತ್ತನೇ ದಿನವಾದ ಇಂದು ಸಾರ್ವಜನಿಕರ ದರ್ಶನಕ್ಕೆ ಕೊನೆದಿನ. ಹೀಗಾಗಿ ಇಂದು ಗಣ್ಯರು ಹಾಸನಾಂಬೆ ದರ್ಶನ ಪಡೆಯುತ್ತಿದ್ದಾರೆ. ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂಗೌಡ, ಜೆಡಿಎಸ್ ರಾಜ್ಯಾದ್ಯಕ್ಷ ಎಚ್.ಕೆ.ಕುಮಾರಸ್ವಾಮಿ ದೇವಿಯ ದರ್ಶನ ಪಡೆದಿದ್ದಾರೆ.
ದಾವಣೆಗೆರೆ: ಹರಿಹರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಕೆ
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ದೇವಾಲಯದಲ್ಲಿ ಜಿಲ್ಲಾಡಳಿತ ವಿಶೇಷ ಪೂಜೆ ಸಲ್ಲಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಇಂದು (ನವೆಂಬರ್ 5) ಕೇದಾರನಾಥೇಶ್ವರದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆ ಅನಾವರಣ ಮಾಡಲಿದ್ದಾರೆ. ಹೀಗಾಗಿ ಆದಿ ಶಂಕರಾಚಾರ್ಯರು ಹರಿಹರೇಶ್ವರ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ ಹಿನ್ನೆಲೆ, ಇಂದು ದಾವಣಗೆರೆಯ ಹರಿಹರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಜೊತೆಗೆ ಪ್ರಧಾನಿ ಪಾಲ್ಗೊಳ್ಳುವ ಕೇದಾರ ಕಾರ್ಯಕ್ರಮದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.
ಹರಿಹರದ ಹರಿಹರೇಶ್ವರ, ಹಂಪಿ ವೀರುಪಾಕ್ಷ ದೇವಸ್ಥಾನ ಸೇರಿ ರಾಜ್ಯದ ನಾಲ್ಕು ದೇವಸ್ಥಾನಗಳಿಗೆ ಶಂಕರಾಚಾರ್ಯರು ಭೇಟಿ ನೀಡಿದ್ದರು. ಇಂದಿನ ಈ ವಿಶೇಷ ಪೂಜೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಪಾಲ್ಗೊಂಡಿದ್ದಾರೆ.
ಇದನ್ನೂ ಓದಿ:
ಶಕ್ತಿದೇವಿ ನೋಡಲು ಮುಗಿಬಿದ್ದ ಭಕ್ತರು; ಹಾಸನಾಂಬೆ ದರ್ಶನಕ್ಕೆ ಇನ್ನು ಐದು ದಿನಗಳು ಮಾತ್ರ ಬಾಕಿ
Published On - 8:36 am, Fri, 5 November 21