ಡ್ರೈ ಕ್ಲೀನಿಂಗ್​ಗೆ ನೀಡಿದ್ದ ಪ್ಯಾಂಟ್‌ ಹಿಂದಿರುಗಿಸದೇ ಸತಾಯಿಸಿದಕ್ಕೆ ದಂಡ ವಿಧಿಸಿದ ಹಾಸನ ಗ್ರಾಹಕರ ಕೋರ್ಟ್

| Updated By: ಆಯೇಷಾ ಬಾನು

Updated on: Feb 28, 2024 | 1:30 PM

ಮಂಜುನಾಥ್ ಎಂಬುವವರು ಡ್ರೈ ಕ್ಲೀನಿಂಗ್​ಗೆ ಎರಡು ಪ್ಯಾಂಟ್‌ಗಳನ್ನು ನೀಡಿದ್ದರು. ಆದರೆ ಡ್ರೈ ಕ್ಲೀನಿಂಗ್ ಬಳಿಕ ಒಂದು ಪ್ಯಾಂಟ್ ಮಾತ್ರ ಹಿಂದಿರುಗಿಸಿದ್ದು ಮತ್ತೋಂದು ಪ್ಯಾಂಟ್ ನೀಡಲು ಸತಾಯಿಸಿದ್ದಾರೆ. ಹಾಗಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದು ವಿಚಾರಣೆ ಬಳಿಕ ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ.

ಡ್ರೈ ಕ್ಲೀನಿಂಗ್​ಗೆ ನೀಡಿದ್ದ ಪ್ಯಾಂಟ್‌ ಹಿಂದಿರುಗಿಸದೇ ಸತಾಯಿಸಿದಕ್ಕೆ ದಂಡ ವಿಧಿಸಿದ ಹಾಸನ ಗ್ರಾಹಕರ ಕೋರ್ಟ್
ನಂದನ್ ಡ್ರೈ ಕ್ಲೀನರ್ಸ್
Follow us on

ಹಾಸನ, ಫೆ.28: ಡ್ರೈ ಕ್ಲೀನಿಂಗ್​ಗೆ (Dry Cleaning) ನೀಡಿದ್ದ ಎರಡು ಪ್ಯಾಂಟ್‌ಗಳ ಪೈಕಿ ಒಂದನ್ನು ನೀಡದೆ ಸತಾಯಿಸಿದ ಎಂದು ಆರೋಪಿಸಿ ಸಲ್ಲಿಸಲಾದ ದೂರಿನ ಸಂಬಂಧ ಗ್ರಾಹಕರ ಕೋರ್ಟ್‌ನಲ್ಲಿ (Consumer Court) ವಿಚಾರಣೆ ನಡೆದಿದ್ದು ಎರಡು ಸಾವಿರ ದಂಡ, ಪ್ಯಾಂಟ್ ಪರಿಹಾರವಾಗಿ, ಸೇವಾ ನ್ಯೂನ್ಯತೆಗಾಗಿ 500 ರೂ ಹಾಗೂ ಫಿರ‍್ಯಾದಿ ಖರ್ಚಿಗೆಂದು 500 ರೂಗಳನ್ನು ನೀಡುವಂತೆ ಆದೇಶ ಹೊರ ಬಿದ್ದಿದೆ. ಡ್ರೈ ಕ್ಲೀನಿಂಗ್​ ಮಾಲೀಕ ಗ್ರಾಹಕನ ಪ್ಯಾಂಟನ್ನು ಹಿಂದಿರುಗಿಸದೆ ಸತಾಯಿಸಿರುವುದು ಸಾಬೀತಾಗಿದ್ದು ದಂಡ ವಿಧಿಸಿ ಗ್ರಾಹಕರ ಕೋರ್ಟ್‌ ತೀರ್ಪು ಪ್ರಕಟಿಸಿದೆ.

ಹಾಸನದ ಕುವೆಂಪು ನಗರದಲ್ಲಿರುವ ನಂದನ್ ಡ್ರೈ ಕ್ಲೀನಿಂಗ್ಸ್​ಗೆ, ಹಾಸನ ನಗರದ ಚಿಕ್ಕಹೊನ್ನೇನಹಳ್ಳಿ ನಿವಾಸಿ ಎ.ಎನ್.ಮಂಜುನಾಥ ಎಂಬುವವರು 2 ಪ್ಯಾಂಟ್ ಹಾಗೂ 3 ಶರ್ಟ್‌ಗಳನ್ನು ಡ್ರೈ ಕ್ಲೀನ್ ಮಾಡಲು ಕೊಟ್ಟಿದ್ದರು. 1 ಪ್ಯಾಂಟ್ ಮತ್ತು 3 ಶರ್ಟ್‌ಗಳನ್ನು ಮಾತ್ರ ಹಿಂದಿರುಗಿಸಿ ಉಳಿದ 1 ಪ್ಯಾಂಟನ್ನು ಸ್ವಲ್ಪ ಸಮಯದ ಬಳಿಕ ಕೊಡುವುದಾಗಿ ಡ್ರೈ ಕ್ಲೀನಿಂಗ್ ಮಾಲೀಕ ಹೇಳಿ ಕಳಿಸಿದ್ದ. ಆದರೆ ಹಲವು ಬಾರಿ ಅಂಗಡಿ ಬಳಿ ಹೋಗಿ ಕೇಳಿದರೂ ನೀಡಿಲ್ಲ. ಹೀಗಾಗಿ ಮಂಜುನಾಥ್ ಅವರು ನನ್ನ ಪ್ಯಾಂಟ್ ವಾಪಸ್ ಕೊಡಿ ಎಂದು ಕೇಳಿದ್ದರೂ ನೀಡದೆ ಸತಾಯಿಸಿದ್ದಾರೆ ಎಂದು ಆರೋಪಿಸಿ ಲೀಗಲ್ ನೋಟಿಸ್ ಕಳುಹಿಸಿದ್ದರು.

ಇದನ್ನೂ ಓದಿ: ನಕಲಿ ದಾಖಲೆ ಬಳಸಿ 15 ಬ್ಯಾಂಕ್​ಗಳಿಗೆ ಕೋಟಿ ಕೋಟಿ ವಂಚಿಸಿದ ದಂಪತಿ: ಜಪ್ತಿಗೆ ಹೋದ ಬ್ಯಾಂಕ್ ಅಧಿಕಾರಿಗಳಿಗೇ ಶಾಕ್!

ಪ್ಯಾಂಟ್ ಹಿಂತಿರುಗಿಸದೆ, ನೋಟಿಸ್‌ಗೂ ಯಾವುದೇ ಪ್ರತ್ಯುತ್ತರ ನೀಡದೆ ಡ್ರೈ ಕ್ಲೀನಿಂಗ್ ಮಾಲೀಕ ನಿರ್ಲಕ್ಷ್ಯ ತೋರಿದ್ದಾನೆ. ಎಷ್ಟೇ ಕೇಳಿದರೂ ಡ್ರೈ ಕ್ಲೀನ್‌ಗೆಂದು ಕೊಟ್ಟಿದ್ದ 2 ಪ್ಯಾಂಟ್‌ಗಳಲ್ಲಿ ಒಂದನ್ನು ಹಿಂತಿರುಗಿಸದ ಹಿನ್ನಲೆ ಸೇವಾ ನ್ಯೂನ್ಯತೆ ಉಂಟುಮಾಡಿದ್ದಾರೆಂದು ಆರೋಪಿಸಿ 15 ಸಾವಿರ ರೂ ಪರಿಹಾರವನ್ನು ಎದುರುದಾರರಿಂದ ಕೊಡಿಸುವಂತೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಜನವರಿ 2024 ರಂದು ಮಂಜುನಾಥ ಅವರು ದೂರು ಸಲ್ಲಿಸಿದ್ದಾರೆ.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಚಂಚಲಾ ಸಿ.ಎಂ., ಸದಸ್ಯರಾದ ಹೆಚ್.ವಿ.ಮಹದೇವ ಹಾಗೂ ಮಹಿಳಾ ಸದಸ್ಯರಾದ ಅನುಪಮ.ಆರ್ ಇವರನ್ನೊಳಗೊಂಡ ಪೀಠದಲ್ಲಿ ದೂರಿನ ಸಂಬಂಧ ವಿಚಾರಣೆ ನಡೆಸಲಾಗಿದೆ. ಜೊತೆಗೆ ಮಂಜುನಾಥ್ ಹಾಜರುಪಡಿಸಿದ್ದ ದಾಖಲಾತಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಆಯೋಗ ಎದುರುದಾರರಿಗೆ ನೋಟಿಸ್ ಜಾರಿ ಮಾಡಿತ್ತು. ಆದರೆ ಆಯೋಗದ ಮುಂದೆ ಹಾಜರಾಗದ ಹಿನ್ನಲೆ ಕ್ಲೀನಿಂಗ್‌ಗೆ ಕೊಟ್ಟಿದ್ದ ಪ್ಯಾಂಟ್ ಹಿಂತಿರುಗಿಸದೆ ಸೇವಾನ್ಯೂನ್ಯತೆ ಉಂಟು ಮಾಡಿರುವುದು ಸಾಬೀತು ಎಂದು ಗ್ರಾಹಕರ ಕೋರ್ಟ್‌ ತೀರ್ಪು ನೀಡಿದೆ. ಎದುರುದಾರರಿಗೆ ಎರಡು ಸಾವಿರ ದಂಡ, ಪರಿಹಾರವಾಗಿ ಒಂದು ಪ್ಯಾಂಟ್, ಸೇವಾ ನ್ಯೂನ್ಯತೆಗಾಗಿ 500 ರೂ ಹಾಗೂ ಫಿರ‍್ಯಾದಿ ಖರ್ಚಿಗೆಂದು 500 ರೂ.ಗಳನ್ನು ನೀಡುವಂತೆ ಆದೇಶ ಹೊರಡಿಸಿದೆ. 48 ದಿನಗಳ ಒಳಗೆ ಪರಿಹಾರ ನೀಡಬೇಕು ತಪ್ಪಿದ್ದಲ್ಲಿ, ಒಟ್ಟು ಮೊತ್ತಗಳ ಮೇಲೆ ಸಾಲಿಯಾನ ಶೇ.9 ಬಡ್ಡಿಯೊಂದಿಗೆ ಪಾವತಿಸಬೇಕು ಎಂದು ಆದೇಶಿಸಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ