ಹಾಸನ: ಜಿಲ್ಲೆಯ ಆಲೂರು ತಾಲೂಕಿನ ಕುಂದೂರು ಗ್ರಾಮದ ಭರತ್ ಎಂಬಾತನನ್ನ ಆತನ ಸ್ನೇಹಿತರೇ ಕೊಲೆ ಮಾಡಿದ್ದಾರೆ. ನಿನ್ನೆ ಭರತ್ ಕೃಷಿ ಕೆಲಸ ಮುಗಿಸಿ ಮನೆಗೆ ತೆರಳಿದ್ದ. ರಾತ್ರಿಯಾಗುತ್ತಿದ್ದಂತೆ ಭರತ್ ಸ್ನೇಹಿತ ಸತೀಶ್ ಅಲಿಯಾಸ್ ಗುಂಡ ಮನೆ ಬಳಿ ಬಂದು ಭರತ್‌ನನ್ನು ಕರೆದುಕೊಂಡು ಪಾರ್ಟಿ ಮಾಡಲು ಮಗ್ಗೆ ಗ್ರಾಮದಲ್ಲಿರುವ ಬಾರ್‌ಗೆ ತೆರಳಿದ್ದಾರೆ. ಕಿರಣ್, ಕೌಶಿಕ್, ನೇಮ ಈ ಐವರು ಆಗಾಗ್ಗೆ ಒಟ್ಟಿಗೆ ಪಾರ್ಟಿ ಮಾಡುತ್ತಿದ್ದು, ನಿನ್ನೆಯೂ ಕೂಡ ಮದ್ಯಪಾನ ಮಾಡಲು ಎಲ್ಲರು ಒಂದೆಡೆ ಸೇರಿದ್ದಾರೆ. ಎಣ್ಣೆ ಏರಿಸುತ್ತಾ, ನಶೆ ತಲೆಗೇರುತ್ತಲೆ ಗೆಳೆಯರ ನಡುವೆ ಮಾತಿನ ಚಕಮಕಿ ಶುರುವಾಗಿದೆ. ಇದು ವಿಕೋಪಕ್ಕೆ ತಿರುಗಿ ಭರತ್‌ಗೆ ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ. ನಂತರ ಕುಸಿದ ಬಿದ್ದ ಭರತ್‌ನನ್ನು ಕಾಲಿನಿಂದ ಒದ್ದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಭರತ್ ಸ್ಥಳದಲ್ಲೇ ಸಾವನ್ನಪ್ಪಿದ್ದು , ಹತ್ಯೆಗೈದ ಪಾತಕಿ ಗೆಳೆಯರು ಎಸ್ಕೇಪ್ ಆಗಿದ್ದಾರೆ.
ಕೃಷಿ ಮಾಡಿಕೊಂಡು ಜೀವನಸಾಗಿಸುತ್ತಿದ್ದ ಭರತ್ ಎರಡು ವರ್ಷಗಳ ಹಿಂದೆ ಮದುವೆಯಾಗಿ ತಾನಾಯಿತು ತನ್ನ ಕೆಲಸವಾಯಿತು ಎಂದು ಯಾರ ತಂಟೆಗೂ ಹೋಗದ ಭರತ್ ಎಲ್ಲರೊಂದಿಗು ನಗುನಗುತ್ತಲೆ ಇದ್ದ. ಅಪಾರ ಸ್ನೇಹಿತ ಬಳಗವನ್ನು ಹೊಂದಿದ್ದ ಇತ ಕುಂದೂರು ಗ್ರಾಮಸ್ಥರಿಗೂ ಭರತ್ ಎಂದರೆ ಇನ್ನಿಲ್ಲದ ಪ್ರೀತಿ. ಭರತ್ ತಂದೆಯನ್ನು ಕಳೆದುಕೊಂಡು ಇಡೀ ಸಂಸಾರದ ಜವಾಬ್ದಾರಿ ತನ್ನ ಹೇಗಲ ಮೇಲೆ ಹಾಕಿಕೊಂಡಿದ್ದ. ಕುಂದೂರು ಗ್ರಾಮದವರೇ ಆಗಿರುವ ಐದು ಮಂದಿ ಸ್ನೇಹಿತರಲ್ಲೆ ಮೂವರು ಸೇರಿ ಓರ್ವನ ಹತ್ಯೆಗೆ ಸ್ಕೆಚ್ ಹಾಕಿದ್ದರು. ಈ ವಿಚಾರ ಭರತ್‌ಗೆ ತಿಳಿದತ್ತು. ಕೂಡಲೇ ಅಲರ್ಟ್ ಆದ ಭರತ್ ಜೊತೆಗಿದ್ದ ಸ್ನೇಹಿತನಿಗೆ ಕೂಡಲೇ ಹೊರಡುವಂತೆ ಹೇಳಿದ್ದನಂತೆ, ಆದರು ಆತ ಮನೆಗೆ ಹೋಗಿಲ್ಲ. ಕೊನೆಗೆ ಭರತ್ ಪಾರ್ಟಿ ಮದ್ಯದಲ್ಲಿ ಜೊತೆಗಿದ್ದ ಸ್ನೇಹಿತರೆ ನಿನ್ನ ವಿರುದ್ಧ ಮಸಲತ್ತು ಮಾಡಿದ್ದಾರೆ ಕಣೊ, ನಿನ್ನ ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ನಿಜಾಂಶ ತಿಳಿಸಿದ್ದಾನೆ ಅಷ್ಟೇ, ಕೂಡಲೇ ಎಚ್ಚೆತ್ತ ಆತ ಇದ್ದ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಇದೇ ವಿಚಾರಕ್ಕೆ ಭರತ್ ಹಾಗೂ ಜೊತೆಯಲ್ಲಿದ್ದ ಮೂವರ ನಡುವೆ ಜಗಳ ಶುರುವಾಗಿತ್ತು ಎನ್ನುವ ಬಗ್ಗೆ ಜನರು ಮಾತನಾಡಿಕೊಳ್ತಿದ್ದಾರೆ. ಭರತ್ ನೀನ್ಯಾಕೆ ನಮ್ಮ ಮೇಲೆ ಹೀಗೆ ಹೇಳಿದೆ ಎಂದು ಆತನ ಮೇಲೆ ಜಗಳಕ್ಕೆ ಬಿದ್ದಿದ್ದಾರೆ ಇದು ಅತಿರೇರಕ್ಕೆ ಹೋಗಿ ಭರತ್ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಚಾಕುವಿನಿಂದ ಭರತ್ ಹೊಟ್ಟೆ ಭಾಗಕ್ಕೆ ಇರಿದಿದ್ದು, ಭರತ್ ರಸ್ತೆಯಲ್ಲಿ ಕುಸಿದು ಬಿದ್ದಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ದುರುಳರು ಕಾಲಿನಿಂದ ಎದೆ, ಮುಖದ ಭಾಗಕ್ಕೆ ತುಳಿದು ಕೊಲೆಗೈದು ಪರಾರಿಯಾಗಿದ್ದು, ಸ್ನೇಹಿತರಿಂದಲೇ ಸ್ನೇಹಿತ ಕೊಲೆ ಆಗಿರುವುದಕ್ಕೆ ಗೆಳೆಯರು ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ:ವಿಲ್ಸನ್ ಗಾರ್ಡನ್ ರೌಡಿ ನಾಗನ ಕೊಲೆ ಸಂಚು ಪ್ರಕರಣ: ಸೈಲೆಂಟ್ ಸುನೀಲ್‌ನಿಗೆ ರಿಲೀಫ್ ನೀಡಿದ ಹೈಕೋರ್ಟ್
ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇತ್ತ ಕುಟುಂಬದ ಆಧಾರಸ್ತಂಭವನ್ನೇ ಕಳೆದುಕೊಂಡ ಸಂಬಂಧಿಕರು ಕಣ್ಣೀರಿಡುತ್ತಿದ್ದಾರೆ.
ವರದಿ: ಮಂಜುನಾಥ ಕೆಬಿ ಟಿವಿ9 ಹಾಸನ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ