ಹಾಸನ: ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಸಕಲೇಶಪುರದಲ್ಲಿ ಕಾಡಾನೆ ದಾಳಿಗೆ ಬಲಿ

| Updated By: ವಿವೇಕ ಬಿರಾದಾರ

Updated on: Dec 15, 2023 | 11:20 AM

Dasara Elephant Arjuna; ಹಲವು ಬಾರಿ ದಸರಾ ಅಂಬಾರಿ ಹೊತ್ತಿದ್ದ ಸಾಕಾನೆ ಅರ್ಜುನ ದುರದೃಷ್ಟವಶಾತ್ ಕಾಡಾನೆಯೊಂದರ ದಾಳಿಗೆ ಸೋಮವಾರ ಬಲಿಯಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರದ ಯಸಳೂರು ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ದುರಂತ ಸಂಭವಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಹಾಸನ: ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಸಕಲೇಶಪುರದಲ್ಲಿ ಕಾಡಾನೆ ದಾಳಿಗೆ ಬಲಿ
ದಸರಾ ಆನೆ ಅರ್ಜುನ
Follow us on

ಹಾಸನ, ಡಿಸೆಂಬರ್ 4: ಹಾಸನ ಜಿಲ್ಲೆಯ ಹಲವೆಡೆ ಕಾಡಾನೆ ದಾಳಿ (Wild Elephant Attack) ಪ್ರಕರಣಗಳು ಹೆಚ್ಚಾಗಿದ್ದು, ಅವುಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಕಾರ್ಯಾಚರಣೆ ವೇಳೆ ಒಂಟಿ ಸಲಗವೊಂದರ ದಾಳಿಗೆ ಸಾಕಾನೆ, ಈ ಹಿಂದೆ ಹಲವು ಬಾರಿ ದಸರಾ ಅಂಬಾರಿ ಹೊತ್ತಿದ್ದ ಅರ್ಜುನ (Dasara Elephant Arjuna) ಮೃತಪಟ್ಟ ಘಟನೆ ಸಕಲೇಶಪುರ (Sakleshpura) ತಾಲ್ಲೂಕಿನ ಯಸಳೂರು ಬಳಿ ನಡೆದಿದೆ. ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಕಾರ್ಯಾಚರಣೆ ವೇಳೆ ಸಾಕಾನೆಗಳು ಹಾಗೂ ಕಾಡಾನೆ ಮಧ್ಯೆ ಕಾಳಗ ನಡೆದಿದೆ. ಇದೇ ವೇಳೆ ಇತರ ಸಾಕಾನೆಗಳು ಓಡಿಹೋದರೆ, ಅರ್ಜುನ ಮಾತ್ರ ಒಂಟಿಸಲಗದ ಜತೆ ಸೆಣಸಾಡಿತ್ತು.

ನಾಲ್ಕು ಸಾಕಾನೆಗಳೊಂದಿಗೆ ಸೋಮವಾರ ಬೆಳಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರು. ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ವೇಳೆ ಅರ್ಜುನನ ಮೇಲೆ ಒಂಟಿಸಲಗ ದಾಳಿ ಮಾಡಿದೆ. ಒಂಟಿಸಲಗ ದಾಳಿ ಮಾಡುತ್ತಿದ್ದಂತೆಯೇ ಉಳಿದ ಮೂರು ಸಾಕಾನೆಗಳು ಓಡಿ ಹೋಗಿವೆ. ಆದರೆ, ಅರ್ಜುನ ಮಾತ್ರ ಒಂಟಿಸಲಗದ ಜೊತೆ ಕಾಳಗಕ್ಕಿಳಿದಿದೆ.

ಇಳಿದು ಓಡಿದ ಮಾವುತರು!

ಎರಡು ಆನೆಗಳು ಕಾದಾಟ ಆರಂಭಿಸುತ್ತಿದ್ದಂತೆಯೇ ಅರ್ಜುನನ ಮಾವುತರು ಮೇಲಿನಿಂದ ಇಳಿದು ಓಡಿದ್ದಾರೆ. ಇದಾದ ಬಳಿಕ ನಡೆದ ಭೀಕರ ಕಾಳಗದಲ್ಲಿ ಅರ್ಜುನ ಸಾವನ್ನಪ್ಪಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಹಾಸನ ಜಿಲ್ಲೆಯ ಮಲೆನಾಡು ಭಾಗದ ಜನರ ನಿದ್ದಗೆಡಿಸಿರುವ ಕಾಡಾನೆ ಹಾವಳಿ ತಡೆಗೆ ಅರಣ್ಯ ಇಲಾಖೆ ಇತ್ತೀಚೆಗೆ ಹಲವು ಕ್ರಮಗಳನ್ನು ಕೈಗೊಂಡಿದೆ. ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಅವುಗಳ ಚಲನ ವಲನಗಳ ಮೇಲೆ ಗಮನ ಇಡುವ ಕೆಲಸವನ್ನೂ ಮಾಡುತ್ತಿದೆ.

ಹಾಸನದ ಬೇಲೂರು ತಾಲ್ಲೂಕಿನ ಅರೇಹಳ್ಳಿ ಬಳಿಯ ಅಣ್ಣಾಮಲೈ ಎಸ್ಟೇಟ್‌ನಲ್ಲಿ ಕಳೆದ ಗುರುವಾರವಷ್ಟೇ ಒಂದು ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು. ಕೆಲವು ದಿನಗಳ ಹಿಂದಷ್ಟೇ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ವಳಲು‌ ಗ್ರಾಮದಲ್ಲಿ ಕಾಡಾನೆಯೊಂದನ್ನು ಸೆರೆಹಿಡಿಯಲಾಗಿತ್ತು.

8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ

22 ವರ್ಷಗಳ ಕಾಲ ದಸರಾದಲ್ಲಿ ಭಾಗವಹಿಸಿದ್ದ ಸಾಕಾನೆ ಅರ್ಜುನ 8 ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದ. ಜಂಬೂಸವಾರಿಯಲ್ಲಿ ನಿಶಾನೆ ಆನೆಯಾಗಿ ಅರ್ಜುನ ಭಾಗಿಯಾಗಿದ್ದ. ಅರ್ಜುನ ಆನೆಗೆ 65 ವರ್ಷ ವಯಸ್ಸಾಗಿತ್ತು. 288ಮೀ ಎತ್ತರ, 5800 ರಿಂದ 6000 ಕೆ.ಜಿ. ತೂಕ ಇರುವುದು ಇತ್ತೀಚೆಗೆ ದಸರಾದಲ್ಲಿ ಭಾಗವಹಿಸಿದ್ದ ಸಂದರ್ಭ ಗೊತ್ತಾಗಿತ್ತು.

ಅರ್ಜುನನ ವಿಶೇಷಗಳೇನು?

ಅರ್ಜುನ 2012 ರಿಂದ 2019 ರ ನಡುವೆ ಎಂಟು ಬಾರಿ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತಿದ್ದ. ನಂತರವೂ ದಸರಾ ಉತ್ಸವಗಳಲ್ಲಿ ಭಾಗವಹಿಸಿದ್ದ. ಈ ವರ್ಷ ನಡೆದ ದಸರಾ ಮಹೋತ್ಸವದಲ್ಲಿ ಕೂಡ ಭಾಗಿಯಾಗಿದ್ದ.

ಇದನ್ನೂ ಓದಿ: ಹಾಸನ: ಕಾಡಾನೆಗಳ ಉಪಟಳ, ಎಚ್ಚರಿಕೆ ನೀಡಲು ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಗ್ರಾಮಸ್ಥರಿಂದ ಹಲ್ಲೆ

1968ರಲ್ಲಿ ಪಶ್ಚಿಮ ಘಟ್ಟದ ​​ಮೈಸೂರು ಸಮೀಪದ ಕಾಕನಕೋಟೆ ಅರಣ್ಯದಿಂದ ಅರಣ್ಯಾಧಿಕಾರಿಗಳು ಅರ್ಜುನನನ್ನು ಸೆರೆ ಹಿಡಿದಿದ್ದರು. ರಾಜ್ಯಾದ್ಯಂತ ಅನೇಕ ಕಾಡು ಆನೆಗಳನ್ನು ಪಳಗಿಸಲು ಅರಣ್ಯ ಅಧಿಕಾರಿಗಳು ನಡೆಸಿದ ಹಲವಾರು ಕಾರ್ಯಾಚರಣೆಗಳಲ್ಲಿ ಅರ್ಜುನ ಭಾಗವಾಗಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:00 pm, Mon, 4 December 23