ಹಾಸನ: ಜಿಲ್ಲೆಯಲ್ಲಿ ಬಿಜೆಪಿ ಜೆಡಿಎಸ್ ನಡುವೆ ದೊಡ್ಡ ಹೋರಾಟಕ್ಕೆ ಕಾರಣವಾಗಿದ್ದ ಟ್ರಕ್ ಟರ್ಮಿನಲ್ ವಿವಾದಕ್ಕೆ ಸರ್ಕಾರ ತನ್ನ ಎಚ್ಚರಿಕೆ ಹೆಜ್ಜೆ ಮೂಲಕ ತಾತ್ಕಾಲಿಕ ತಡೆ ಹಾಕಿದೆ. ಕಳೆದ ಹದಿನೈದು ದಿನದಿಂದ ಸ್ನಾತಕೋತ್ತರ ಕೇಂದ್ರದ ಆವರಣದಲ್ಲಿ ವಿದ್ಯಾರ್ಥಿನಿಯರ ಹಾಸ್ಟಲ್ ಸಮೀಪ ಟ್ರಕ್ ಟರ್ಮಿನಲ್ ಬೇಡಾ ಎಂದು ಜೆಡಿಎಸ್ ತೀವೃ ಹೋರಾಟ ನಡೆಸಿದ್ರು, ಬಿಜೆಪಿ ಕೂಡ ಇದೇ ಸ್ಥಳದಲ್ಲೇ ಟರ್ಮಿನಲ್ ಮಾಡಿಯೇ ಸಿದ್ದ ಎಂದು ಪಟ್ಟು ಹಿಡಿದಿತ್ತು, ಮಾಜಿ ಸಚಿವ ರೇವಣ್ಣ ತಾವೇ ಅಖಾಡಕ್ಕೆ ಇಳಿಯೋ ಮೂಲಕ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು, ರೇವಣ್ಣ ವಿರುದ್ಧ ತೊಡೆತಟ್ಟಿದ್ದ ಬಿಜೆಪಿ ಶಾಸಕ ಪ್ರೀತಂಗೌಡ ನಮ್ಮ ಕ್ಷೇತ್ರದಲ್ಲಿ ಟರ್ಮಿನಲ್ ಮಾಡಿದ್ರೆ ಅದನ್ನ ಕೇಳೋಕೆ ನೀವ್ಯಾರು ಎಂದು ತಿರುಗೇಟು ಕೊಟ್ಟಿದ್ದರು.
ಇಷ್ಟೊಂದು ವಿರೋಧದ ನಡುವೆಯೇ ಏಪ್ರಿಲ್ 30 ರಂದು ಕೆಲಸ ಆರಂಬಿಸಿದ್ದನ್ನ ವಿರೋಧಿಸಿ ಜೆಡಿಎಸ್ ನಾಯಕ ಮಾಜಿ ಸಚಿವ ರೇವಣ್ಣ ನೇತೃತ್ವದಲ್ಲಿ ಹೋರಾಟ ನಡೆಸಿದ್ರು, ಹಾಸನ ತಾಲ್ಲೂಕಿನ ಕೆಂಚಟ್ಟಹಳ್ಳಿ ಸಮೀಪ ನಿರ್ಮಾಣವಾಗ್ತಿರೋ ಟ್ರಕ್ ಟರ್ಮಿನಲ್ ಸ್ಥಳದಲ್ಲಿ ರಣರಂಗವೇ ನಡೆದು ಜೆಡಿಎಸ್ ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು. ಇದಾದ ಬಳಿಕೆ ಅನಿರ್ದಿಷ್ಟ ಅವಧಿವರೆಗೆ ನಿಷೇಧಾಜ್ಞೆ ಜಾರಿಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಕಾಮಗಾರಿಗೆ ತಾತ್ಕಾಲಿಕ ತಡೆ ನೀಡಲಾಗಿದೆ ಎಂದು ಘೋಷಣೆ ಮಾಡಿಧ್ದ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಈ ವಿಚಾರದಲ್ಲಿ ಕಂದಾಯ ಸಚಿವರು ಅಂತಿಮ ತೀರ್ಮಾನ ಮಾಡುತ್ತಾರೆ ಎಂದು ಘೋಷಣೆ ಮಾಡಿದ್ದರು. ನೆನ್ನೆ ತಮ್ಮ ಇಲಾಖೆ ಪ್ರದಾನ ಕಾರ್ಯದರ್ಶಿ ಮೂಲಕ ಹೊಸ ಆದೇಶ ಹೊರಡಿಸಿರೋ ಕಂದಾಯ ಸಚಿವರು ಎಚ್ಚರಿಕೆಯಿಂದಲೇ ಇಡೀ ವಿವಾದವನ್ನು ತಣ್ಣಗಾಗುವಂತೆ ಮಾಡಿದ್ದಾರೆ
ಏನಿದು ವಿವಾದ
ಹಾಸನ ತಾಲೂಕಿನ ಕಸಬಾ ಹೋಬಳಿಯ ಕೆಂಚಟ್ಟಹಳ್ಳಿ ಗ್ರಾಮದ ಸರ್ವೆ ನಂಬರ್ 31 ರ 3.24 ಎಕರೆ ಭೂಮಿಯನ್ನು ಟ್ರಕ್ ಟರ್ಮಿನಲ್ ಗೆ ನೀಡಲು ಹಾಸನ ತಾಲೂಕು ಪಂಚಾಯಿತಿ ಇಓ ಹೆಸರಿಗೆ ಭೂಮಿ ಮಂಜೂರು ಮಾಡಿದ ಜಿಲ್ಲಾಧಿಕಾರಿಗಳು ಕಳೆದ ಡಿಸೆಂಬರ್ ತಿಂಗಳಲ್ಲಿ ಆದೇಶ ಮಾಡಿದ್ದರು. ಕಳೆದ ಎರಡು ದಶಕಗಳಿಂದ ಇದೇ ಪ್ರದೇಶದಲ್ಲಿ ಮೈಸೂರು ವಿವಿಯ ಸ್ನಾತಕೋತ್ತರ ಕೇಂದ್ರ ಹೇಮ ಗಂಗೋತ್ರಿ ಇದೆ ರಾಷ್ಟ್ರೀಯ ಹೆದ್ದಾರಿ 75 ರ ನಡುವೆ ಇರೊ ಪ್ರದೇಶದಲ್ಲಿ 70 ಎಕರೆ ವಿಸ್ತೀರ್ಣದ ವಿವಿ ಕೇದ್ರದಲ್ಲಿ ವಿವಿ ಕೇಂದ್ರ ಇದ್ದು ಇದಕ್ಕೆ ಹೊಂದಿಕೊಂಡಂತೆ ಇರೋ 3.24 ಎಕರೆ ಭೂಮಿ ಟ್ರಕ್ ಟರ್ಮಿನಲ್ ಗೆ ನೀಡಿದ್ದಾರೆ. ಕಾಲೇಜು ಹೆಣ್ಣು ಮಕ್ಕಳ ಸುರಕ್ಷತೆಗೆ ಧಕ್ಕೆಯಾಗಲಿದೆ ಎನ್ನೋದು ಜೆಡಿಎಸ್ ಆರೋಪ, ಈ ಬಗ್ಗೆ ಕಾಲೇಜು ವಿದ್ಯಾರ್ಥಿಗಳು ಕೂಡ ಹೋರಾಟ ಮಾಡಿ ತಮ್ಮ ಆಕ್ಷೆಪ ವ್ಯಕ್ತಪಡಿಸಿದ್ರು.
ಕಾಲೇಜು ನಿರ್ದೇಶಕರು ಕೂಡ 2015 ರಲ್ಲೇ ಕಾಲೇಜು ಆವರಣಕ್ಕೆ ಹೊಂದಿಕೊಂಡಿರೋ ಖಾಲಿ ಜಾಗವನ್ನು ವಿವಿ ಕೇಂದ್ರಕ್ಕೆ ನೀಡಿ ಎಂದು ಮನವಿ ಮಾಡಿದ್ದರು ಇದನ್ನು ಪರಿಗಣಿಸಿಲ್ಲ ಎಂದು ವಿದ್ಯಾರ್ಥಿಗಳು ಅಸಮದಾನ ಹೊರ ಹಾಕಿದ್ರು. ಆದರೆ ಉನ್ನತ ಶಿಕ್ಷಣ ಸಚಿವರ ಮೂಲಕವೇ ಈ ಜಾಗ ನಮಗೆ ಅಗತ್ಯ ಇಲ್ಲ ಎಂದು ಹೇಳಿಸೋ ಮೂಲಕ ಶಾಸಕ ಪ್ರೀತಂಗೌಡ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡೋ ತಮ್ಮ ನಿರ್ಧಾರ ಅಚಲ ಎನ್ನೋದನ್ನ ಹೇಳಿದ್ರು. ಜೊತೆಗೆ ಹಾಸನಕ್ಕೆ ಭೇಟಿ ನೀಡಿದ ವೇಳೆ ಸ್ವತಃ ಕಂದಾಯ ಸಚಿವರೇ ಹಾಸನಕ್ಕೂ ರೇವಣ್ಣಗೂ ಏನು ಸಂಬಂಧ, ಅವರು ಮಾಡಿದ್ರೆ ಅಭಿವೃದ್ಧಿ ನಾವು ಮಾಡಿದ್ರೆ ಹೊಟ್ಟೆ ಉರಿಯಾ ಎಂದು ಶಾಸಕ ಪ್ರೀತಂಗೌಡ ಬೆಂಬಲಿಸಿದ್ದರು, ಇದೆಲ್ಲದರಿಂದ ರೋಸಿಹೋಗಿದ್ದ ಜೆಡಿಎಸ್ ಹೋರಾಟ ಶುರುಮಾಡಿತ್ತು ಬಳಿಕ ಟ್ರಕ್ ಟರ್ಮಿನಲ್ ವಿಚಾರ ಸರ್ಕಾರದ ಅಂಗಳಕ್ಕೆ ಹೋಗಿತ್ರು.
ಸರ್ಕಾರದ ಎಚ್ಚರಿಕೆ ನಡೆ
ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಬೇರು ಬಿಡುತ್ತಿರೊ ಕಮಲ ಚಿವುಟಲು ಜೆಡಿಎಸ್ ಇದನ್ನ ಅಸ್ತ್ರಮಾಡಿಕೊಂಡರೆ ಜೆಡಿಎಸ್ ಶಕ್ತಿ ಕುಗ್ಗಿಸಲು ಬಿಜೆಪಿ ಕೂಡ ಹಠಕ್ಕೆ ಬಿದ್ದು ಇದೇ ಸ್ಥಳದಲ್ಲಿ ಟರ್ಮಿನಲ್ ನಿರ್ಮಾಣಕ್ಕೆ ಪಟ್ಟು ಹಿಡಿದಿತ್ತು, ಟರ್ಮಿನಲ್ ನಿರ್ಮಾಣ ವಿಚಾರ ವಿವಾದವಾಗುತ್ತಲೇ ಮಧ್ಯಪ್ರವೇಶ ಮಾಡಿದ ಸರ್ಕಾರ ಕಂದಾಯ ಇಲಾಖೆ ಪ್ರದಾನ ಕಾರ್ಯದರ್ಶಿ ಮೂಲಕ ಆದೇಶ ಹೊರಡಿಸಿ ಎರಡು ಕಡೆಯವರು ಸರ್ಕಾರದ ವಿರುದ್ಧ ಸಿಟ್ಟಾಗದಂತೆ ಎಚ್ಚರಿಕೆ ನಡೆ ಅನುಸರಿಸಿದೆ.
ಭೂ ಕಂದಾಯ ಕಾಯಿದೆ 1964 ಕಲಂ 71 ರ ಪ್ರಕಾರ ಕೆಂಚಟ್ಟಹಳ್ಳಿಯ ಗೋಮಾಳ ಸರ್ವ ನಂಬರ್ 31 ರಲ್ಲಿ 3.24 ಎಕರೆ ಭೂಮಿಯನ್ನು ಟ್ರಕ್ ಟರ್ಮಿನಲ್ ಗೆ ಕಾಯ್ದಿರಿಸಿದೆ, ಜೊತೆಗೆ ಡಿಸೆಂಬರ್ ತಿಂಗಳಿನಲ್ಲಿ ಇದೇ ಜಾಗವನ್ನು ಹಾಸನ ತಾಲೂಕು ಪಂಚಾಯ್ತಿ ಇಒಗೆ ಮೀಸಲಿಟ್ಟ ಡಿಸಿ ಮಾಡಿದ್ದ ಆದೇಶ ಮಾರ್ಪಡಿಸಿ ಈಭೂಮಿಯನ್ನು ಕಂದಾಯ ಇಲಾಖೆಯಲ್ಲೇ ಉಳಿಸಿಕೊಳ್ಳಬೇಕು, ಬೇರೆ ಯಾವುದೇ ಉದ್ದೇಶಕ್ಕೆ ಈ ಭೂಮಿ ಬಳಸಬೇಕಾದರೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಶರತ್ತು ವಿಧಿಸಿ ತಕ್ಷಣ ಅಲ್ಲಿ ಯಾವುದೇ ಕೆಲಸ ನಡೆಸದಂತೆ ಪರೋಕ್ಷವಾಗಿ ಟ್ರಕ್ ಟರ್ಮಿನಲ್ ಹೆಸರಿನಲ್ಲಿ ನಡೆಯುತ್ತಿರೊ ಕೆಲಸಕ್ಕೆ ಬ್ರೇಕ್ ಹಾಕಲಾಗಿದೆ. ಈ ಮೂಲಕ ಅದೇ ಜಾಗದಲ್ಲಿ ಟ್ರಕ್ ಟರ್ಮಿನಲ್ ಆಗಬೇಕು ಎಂಬ ಬಿಜೆಪಿ ನಿಲುವು ಗೆದ್ದಂತಾಗಿದೆ. ಅಲ್ಲಿ ಟ್ರಕ್ ಟರ್ಮಿನಲ್ ಕಾಮಗಾರಿ ನಡೆಯಬಾರದು ಎಂದು ಹೋರಾಟ ನಡೆಸಿದ್ದ ಜೆಡಿಎಸ್ ಕೂಡ ತಣ್ಣಗಾಗುವಂತೆ ಮಾಡಿದೆ. ಸದ್ಯ ಇನ್ನು ಟರ್ಮಿನಲ್ ಸ್ಥಳದಲ್ಲಿ ನಿಷೇಧಾಜ್ಞೆ ಮುಂದುವರೆದಿದ್ದು, ಮುಂದೆ ಟ್ರಕ್ ಟರ್ಮಿನಲ್ ನಿರ್ಮಾಣ ಸಂಬಂಧ ಸರ್ಕಾರ ಕೈಗೊಳ್ಳೊ ತೀರ್ಮಾನ ಮತ್ತೆ ಜೆಡಿಎಸ್ ನಡುವೆ ಜಟಾಪಟಿ ಹೆಚ್ಚಿಸುತ್ತಾ ಅಥವಾ ಭೂಮಿ ಕಾಯ್ದಿಟ್ಟು ಕಾದು ನೋಡೋ ತಂತ್ರದ ಮೂಲಕ ಸರ್ಕಾರ ತಮ್ಮ ಶಾಸಕರ ಉದ್ದೇಶ ಈಡೇರಿಸಿದಂತೆ ಮಾಡಿ ಮುಂದೆ ಕಾದು ನೋಡೋ ತಂತ್ರದ ಮೂಲಕ ಹೊಸ ಪ್ಲಾನ್ ಹೆಣೆಯುತ್ತಾ ಎನ್ನೋದಕ್ಕೆ ಕಾಲವೇ ಉತ್ತರ ಹೇಳಬೇಕಿದೆ.
ವರದಿ: ಮಂಜುನಾಥ್ ಕೆಬಿ, ಟಿವಿ9 ಹಾಸನ
Published On - 12:24 pm, Thu, 5 May 22