
ಹಾಸನ, ಅಕ್ಟೋಬರ್ 05: ಸಾಮಾಜಿಕ ಆರ್ಥಿಕ ಶೈಕ್ಷಣಿಕ ಗಣತಿಗೆ (Caste Census Survey) ತೆರಳಿದ್ದ ಶಿಕ್ಷಕಿ ಮೇಲೆ 10ಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ (Stray Dogs) ಮಾಡಿರುವಂತಹ ಘಟನೆ ಜಿಲ್ಲೆಯ ಬೇಲೂರಿನ ನೆಹರುನಗರದಲ್ಲಿ ನಡೆದಿದೆ. ಬೇಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಚಿಕ್ಕಮ್ಮನವರ ಮುಖ, ಕೈ ಕಾಲಿಗೆ ಬೀದಿ ನಾಯಿಗಳು ಕಚ್ಚಿದ್ದು, ಶಿಕ್ಷಕಿ ರಕ್ಷಿಸಲು ಮುಂದಾಗಿದ್ದ ಅವರ ಪತಿ ಶಿವಕುಮಾರ್ ಸೇರಿದಂತೆ ಇನ್ನು 7 ಜನರ ಮೇಲೆ ನಾಯಿಗಳು ದಾಳಿ ಮಾಡಿವೆ. ಸದ್ಯ ತಾಲೂಕು ಆಸ್ಪತ್ರೆಯಲ್ಲಿ ಶಿಕ್ಷಕಿ ಸೇರಿದಂತೆ ಎಲ್ಲಾ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ.
ಶಿಕ್ಷಕಿ ಚಿಕ್ಕಮ್ಮಗೆ ನೀಡಿದ್ದ ಸಮೀಕ್ಷೆ ಅವಧಿ ಇಂದು ಕೊನೆಯಾಗಿತ್ತು. ಅವರಿಗೆ ನೀಡಿದ್ದ ಮನೆಗಳ ಪೈಕಿ 3 ಮನೆಗಳ ಸಮೀಕ್ಷೆ ಬಾಕಿ ಇತ್ತು. ನವೀನ್ ಎಂಬುವರ ಮನೆ ಸಮೀಕ್ಷೆಗೆ ಚಿಕ್ಕಮ್ಮ ತೆರಳಿದ್ದು, ಈ ವೇಳೆ 10ಕ್ಕೂ ಹೆಚ್ಚು ನಾಯಿಗಳು ದಾಳಿ ಮಾಡಿವೆ. ಪತ್ನಿ ರಕ್ಷಿಸಲು ಮುಂದಾದ ಪತಿ ಶಿವಕುಮಾರ್ಗೂ ನಾಯಿಗಳು ಕಚ್ಚಿವೆ.
ಇದನ್ನೂ ಓದಿ: ಹಲಗೂರಲ್ಲಿ ಬೀದಿ ನಾಯಿ ಕಾಟ: ಮೂರೇ ದಿನಗಳಲ್ಲಿ 18 ಮಂದಿ ಮೇಲೆ ಅಟ್ಯಾಕ್!
ಚಿಕ್ಕಮ್ಮ ಮತ್ತು ಪತಿ ಶಿವಕುಮಾರ್ ರಕ್ಷಣೆಗೆ ಮುಂದಾಗಿದ್ದ ಧರ್ಮ, ಪೃಥ್ವಿ ಮತ್ತು ಸಚಿನ್ ಸೇರಿದಂತೆ 7 ಜನರ ಮೇಲೂ ಅಟ್ಯಾಕ್ ಮಾಡಿವೆ. ಅಷ್ಟೇ ಅಲ್ಲದೆ ಅಲ್ಲೇ ಆಟವಾಡುತ್ತಿದ್ದ 5 ವರ್ಷದ ಬಾಲಕ ಕಿಶನ್ಗೂ ನಾಯಿಗಳು ಕಚ್ಚಿವೆ. ಸದ್ಯ ತಾಲೂಕಾಸ್ಪತ್ರೆಯಲ್ಲಿ ಎಲ್ಲಾ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ. ಇದೇ ವೇಳೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಬೇಲೂರು ಶಾಸಕ ಹೆಚ್.ಕೆ.ಸುರೇಶ್, ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.
ಶಿಕ್ಷಕಿ ಪತಿ ಶಿವಕುಮಾರ್ ಹೇಳಿಕೆ ನೀಡಿದ್ದು, ಅಕ್ಟೋಬರ್ 7 ರ ಒಳಗೆ ಗಣತಿ ಮುಗಿಸಬೇಕೆಂಬ ಒತ್ತಡ ಇದೆ. ಹಾಗಾಗಿ ರಜೆ ಇದ್ದರೂ ಇಂದು ಗಣತಿಗೆ ತೆರಳಿದ್ದರು ಪ್ರತಿಯೊಂದು ಮನೆಯಲ್ಲಿ 60 ಪ್ರಶ್ನೆ ಕೇಳಬೇಕು.
ನೆಟ್ವರ್ಕ್ ಸರಿ ಇಲ್ಲಾ, ಆ್ಯಪ್ ಸರಿಯಾಗಿ ಕೆಲಸ ಮಾಡಲ್ಲ. ಮಹಡಿ ಹತ್ತಿ, ಇಳಿಯಬೇಕು. ಇಷ್ಟೆಲ್ಲ ಸವಾಲು ಎದುರಿಸಿ ಕೊಟ್ಟ ಸಮಯದಲ್ಲಿ ಗಣತಿ ಮುಗಿಸಲು ಆಗುತ್ತಾ? ಸರ್ಕಾರಕ್ಕೆ ಇದೆಲ್ಲಾ ಅರ್ಥ ಆಗಲ್ಲವಾ? ಅವರು ಗಣತಿ ಮಾಡಿದರೆ ಸಮಸ್ಯೆ ಏನೆಂದು ಅರ್ಥ ಆಗಿರುವುದು ಎಂದು ಅಳಲು ತೋಡಿಕೊಂಡರು.
ಇದನ್ನೂ ಓದಿ: ನಾಯಿ ಕಡಿತ: ರೇಬಿಸ್ ರೋಗದಿಂದ ಬೆಂಗಳೂರಿನಲ್ಲಿ 17 ಜನರ ಸಾವು
ಇಂದು ರಜೆ ಇದ್ದರೂ ಬೇಗ ಮುಗಿಸಬೇಕೆಂದು ಕರೆದಿದ್ದರು. ನಾನೂ ಪತ್ನಿ ಜೊತೆ ಹೋಗಿದ್ದೆ. ಮನೆಯೊಂದರ ಗೇಟ್ ಒಳಗೆ ಹೋದ ಕೂಡಲೇ ನಾಯಿ ಬಂದು ದಾಳಿ ನಡೆಸಿತು. ನಾನು ನಾಯಿಯಿಂದ ಬಚಾವ್ ಮಾಡಲು ಪ್ರಯತ್ನ ಮಾಡಿದೆ. ಅಷ್ಟರೊಳಗೆ ನನ್ನ ಪತ್ನಿ ಮೇಲೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿದೆ. ಇನ್ನೂ ಏಳು ಜನರ ಮೇಲೆ ನಾಯಿ ದಾಳಿ ನಡೆಸಿದೆ. ನಾಲ್ವರು ಗಂಭೀರ ಗಾಯಗೊಂಡು ಹಾಸನದ ಆಸ್ಪತ್ರೆಗೆ ಕರೆತರಲಾಗಿದೆ. ದಾಳಿ ಮಾಡಿದ್ದ ನಾಯಿಯನ್ನೂ ಜನರು ಹೊಡೆದು ಕೊಂದಿದ್ದಾರಂತೆ. ಬೇಲೂರು ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿ ಇದೆ. ಸ್ಥಳೀಯ ಆಡಳಿತ ಸೂಕ್ತ ಕ್ರಮ ಕೈಗೊಳ್ಳುವಂತೆ ಟಿವಿ9 ಮೂಲಕ ಮನವಿ ಮಾಡಿದ್ದಾರೆ.
ಇನ್ನು ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ವಡ್ಡರಹಳ್ಳಿಯಲ್ಲಿ ಸಮೀಕ್ಷೆಗೆ ತೆರಳುತ್ತಿದ್ದ ಶಿಕ್ಷಕಿಯ ದ್ವಿಚಕ್ರ ವಾಹನಕ್ಕೆ ನಾಯಿ ಅಡ್ಡ ಬಂದಿದ್ದರಿಂದ ಅಪಘಾತವಾಗಿ ಪ್ರಜ್ಞೆತಪ್ಪಿ ಬಿದ್ದಿದ್ದ ಘಟನೆ ನಡೆದಿದೆ. ವಡ್ಡರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ರಾಧಾಗೆ ಗಾಯಗಳಾಗಿವೆ. ಸದ್ಯ ಸ್ಥಳೀಯರು ಶಿಕ್ಷಕಿ ರಾಧಾರನ್ನು ಚನ್ನರಾಯಪಟ್ಟಣ ಆಸ್ಪತ್ರೆಗೆ ದಾಖಲಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.