ಹಾಸನ: ಪಟ್ಲ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಿ ಅರಣ್ಯ ಇಲಾಖೆ ಆದೇಶ

|

Updated on: Jul 11, 2024 | 7:42 AM

ಹಾಸನ ಜಿಲ್ಲೆಯ ಗಿರಿಧಾಮ ಪಟ್ಲ ಬೆಟ್ಟದಲ್ಲಿ ಇತ್ತೀಚೆಗೆ ಸ್ಥಳೀಯ ಚಾಲಕರು ಮತ್ತು ಪ್ರವಾಸಿಗರ ನಡುವೆ ನಡೆದ ಗಲಾಟೆ ಪ್ರವಾಸಿಗರ ಆನಂದಕ್ಕೆ ತಣ್ಣೀರೆರಚಲು ಕಾರಣವಾಗಿದೆ. ಈ ಸಂಘರ್ಷದ ನಂತರ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ, ಮುಂದಿನ ನಿರ್ಧಾರ ಕೈಗೊಳ್ಳುವ ವರೆಗೆ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಿದೆ. ಘಟನೆಯ ವಿವರ ಇಲ್ಲಿದೆ.

ಹಾಸನ: ಪಟ್ಲ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಿ ಅರಣ್ಯ ಇಲಾಖೆ ಆದೇಶ
ಪಟ್ಲ ಬೆಟ್ಟ
Follow us on

ಹಾಸನ, ಜುಲೈ 11: ಇತ್ತೀಚಿಗೆ ಖಾಸಗಿ ವಾಹನಗಳನ್ನು ಬೆಟ್ಟಕ್ಕೆ ಕೊಂಡೊಯ್ಯುತ್ತಿದ್ದ ವೇಳೆ ಸ್ಥಳೀಯ ವಾಹನಗಳ ಚಾಲಕರು ಪ್ರವಾಸಿಗರ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಕರ್ನಾಟಕ ಅರಣ್ಯ ಇಲಾಖೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಪಟ್ಲ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದೆ. ಸ್ಥಳೀಯರು ಮತ್ತು ಪ್ರವಾಸಿಗರ ನಡುವೆ ಆಗಾಗ ನಡೆಯುತ್ತಿದ್ದ ಜಗಳಕ್ಕೆ ಕಡಿವಾಣ ಹಾಕಿ ಪ್ರಕೃತಿಯನ್ನು ರಕ್ಷಿಸಲು ಇಲಾಖೆ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಪಟ್ಲ ಬೆಟ್ಟ ಸಕಲೇಶಪುರ ಪಟ್ಟಣದಿಂದ 40 ಕಿಮೀ ದೂರದಲ್ಲಿದೆ.

ಪ್ರವಾಸೋದ್ಯಮ ಮತ್ತು ಅರಣ್ಯ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿ ಪ್ರವಾಸಿಗರ ಹಿತದೃಷ್ಟಿಯಿಂದ ಮಾರ್ಗಸೂಚಿಗಳನ್ನು ರೂಪಿಸಲು ಚಿಂತನೆ ನಡೆಸಲಾಗುತ್ತಿದೆ. ಭವಿಷ್ಯದಲ್ಲಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಆನ್‌ಲೈನ್ ಬುಕಿಂಗ್ ವ್ಯವಸ್ಥೆ ಪರಿಚಯಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ ಎಂದು ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಸೌರಬ್ ಕುಮಾರ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಪಟ್ಲ ಬೆಟ್ಟದಲ್ಲಿ ಗಲಾಟೆಯಾಗಿದ್ದು ಯಾಕೆ?

ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದ ಪ್ರವಾಸಿಗರೊಬ್ಬರಿಗೆ ಸ್ವಂತ ವಾಹನದಲ್ಲಿ ಗಿರಿಧಾಮಕ್ಕೆ ಭೇಟಿ ನೀಡಿದ್ದಕ್ಕೆ ಸ್ಥಳೀಯರು ಹಲ್ಲೆ ನಡೆಸಿದ್ದರು. ಘಟನೆ ಸಂಬಂಧ ಯಸಳೂರು ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಗ್ರಾಮಸ್ಥರು ಹೇಳುವ ಪ್ರಕಾರ, ಪಟ್ಲ ಬೆಟ್ಟ ಪ್ರದೇಶದಲ್ಲಿ ಪ್ರವಾಸಿಗರು ಮತ್ತು ಸ್ಥಳೀಯ ವಾಹನಗಳ ಚಾಲಕರ ನಡುವೆ ಜಗಳ ಸಾಮಾನ್ಯವಾಗಿದೆ. ಆದರೆ, ಜನರು ಸ್ಥಳೀಯರಿಗೆ ಹೆದರಿ ದೂರು ದಾಖಲಿಸಲು ಹಿಂದೆ ಸರಿಯುವುದರಿಂದ ಇದು ಈವರೆಗೆ ಗಮನಕ್ಕೆ ಬಂದಿಲ್ಲ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್’ ವರದಿ ಉಲ್ಲೇಖಿಸಿದೆ. ಏತನ್ಮಧ್ಯೆ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಘಟನೆಯ ಬಗ್ಗೆ ಡಿಸಿಎಫ್‌ನಿಂದ ವಿವರವಾದ ವರದಿಯನ್ನು ಕೇಳಿದ್ದಾರೆ.

ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಿದ ನಂತರ ಎಂಟ್ರಿ?

ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಲ ಬೆಟ್ಟವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಮುಂದಾಗಿದೆ ಎಂದು ಜಿಲ್ಲಾಧಿಕಾರಿ ಸಿ ಸತ್ಯಭಾಮಾ ತಿಳಿಸಿದ್ದಾರೆ. ಹೀಗಾಗಿ ಈ ಪ್ರಕ್ರಿಯೆಯ ನಂತರ ಪ್ರವಾಸಿಗರಿಗೆ ಬೆಟ್ಟಕ್ಕೆ ಅವಕಾಶ ದೊರೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಹಾಸನದಲ್ಲಿ 12 ವರ್ಷದ ಬಾಲಕನ ಬರ್ಬರ ಹತ್ಯೆ; ಕೊಲೆಗೈದು ರೈಲ್ವೆ ಹಳಿ ಪಕ್ಕದಲ್ಲಿ ಶವ ಎಸೆದ ದುಷ್ಕರ್ಮಿಗಳು

ಈ ಮಧ್ಯೆ, ಪ್ರವಾಸಿಗರು ಸ್ವಂತ ವಾಹನಗಳನ್ನು ಬೆಟ್ಟದ ತುದಿಗೆ ಕೊಂಡೊಯ್ದು ಗಿರಿಧಾಮವನ್ನು ಹಾಳು ಮಾಡಿದ್ದಾರೆ ಎಂದು ಬೆಟ್ಟದ ತಪ್ಪಲಿನಲ್ಲಿರುವ ಪಟ್ಲ ಗ್ರಾಮದ ರವಿಕುಮಾರ್ ಆರೋಪಿಸಿದ್ದಾರೆ. ಪ್ರವಾಸಿ ತಾಣಗಳ ನಿರ್ವಹಣೆಗೆ ಮಾರ್ಗಸೂಚಿ ರೂಪಿಸಿ ಸ್ಥಳೀಯಾಡಳಿತಕ್ಕೆ ನಿರ್ದೇಶನ ನೀಡುವುದು ಉತ್ತಮ ಎಂದು ಅವರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:40 am, Thu, 11 July 24