
ಅದ್ಭುತ ದೃಶ್ಯ, ಮನೋಹರ ಚಿತ್ರಣ. ದೃಶ್ಯಕಾವ್ಯದಂತಿರೋ ಇಲ್ಲಿನ ಪ್ರಕೃತಿ ಸಿರಿ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತೆ. ಆದ್ರೆ ಪ್ರವಾಸಿಗರು ಹೋಗೋಕೆ ಅಲ್ಲಿಗೆ ದಾರಿಯೇ ಇಲ್ಲ. ಕಲ್ಲುಮುಳ್ಳುಗಳ ಹಾದಿಯಲ್ಲಿರೋ ಪ್ರಕೃತಿಯ ಆ ಚಲುವಿನ ಚಿತ್ತಾರ ಇಲ್ಲಿದೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿಯ ಗವಿಗುಡ್ಡ ಪ್ರವಾಸಿಗರಿಗೆ ಅಷ್ಟೊಂದು ಪರಿಚಯ ಇಲ್ಲ. ಆದ್ರೆ ಚಾರಣಿಗರಿಗೆ, ಸಾಹಸಿಗರಿಗೆ ಇದೇ ನೆಚ್ಚಿನ ತಾಣ.

ಮುಗಿಲು ಚುಂಬಿಸೋ ಬೆಟ್ಟಗಳ ಸಾಲು. ಹಸಿರ ಕಾನನದ ನಡುವೆ ಕಂಗೊಳಿಸೋ ಬೆಟ್ಟ ಗುಡ್ಡಗಳ ತಪ್ಪಲು. ನಡೆದಷ್ಟೂ ಸಾಗದ ದುರ್ಗಮ ಹಾದಿ. ಚಾರಣಿಗರ ಹಾಟ್ ಸ್ಪಾಟ್. ಇದೇ ಗವಿಗುಡ್ಡ.

ಹಾಸನದಿಂದ ಸಕಲೇಶಪುರ ಮಾರ್ಗವಾಗಿ ಸಾಗಿದ್ರೆ ಯಸಳೂರಿನಿಂದ ಹತ್ತು ಕಿಲೋಮೀಟರ್ ದೂರದಲ್ಲಿರೋ ಈ ನಿಸರ್ಗ ಪ್ರಿಯರ ನೆಚ್ಚಿನ ತಾಣ ಎಲ್ಲರನ್ನ ಆಕರ್ಷಣೆ ಮಾಡುತ್ತೆ.

ಓಡಳ್ಳಿಯಿಂದ 3 ಕಿಲೋಮೀಟರ್ ದುರ್ಗಮ ಹಾದಿಯಲ್ಲಿ ಸಾಗಿದ್ರೆ ಕಾಣೋದೆ ಮುಗಿಲು ಚುಂಬಿಸೋ ಬೆಟ್ಟ ಗುಡ್ಡಗಳು. ಕಣ್ಣು ಹಾಯಿಸಿದಷ್ಟು ಕಣ್ಮನ ಸೆಳೆಯೋ ಕಾರ್ಗಲ್ಲುಗಳ ಸಾಲು.

ಇನ್ನು ಈ ಬೆಟ್ಟಕ್ಕೆ ಗವಿಬೆಟ್ಟ ಅನ್ನೋ ಹೆಸರು ಬರಲು ಕಾರಣವೇ ಇಲ್ಲಿರೋ ಗವಿ. ಇಳಿಜಾರಿನಂತಾ ಪ್ರಪಾತದ ಬೆಟ್ಟವನ್ನ ಇಳಿದು ಮುಂದೆ ಹೋದರೆ ಕಾರ್ಗಲ್ಲುಗಳು ಕಾಣುತ್ವೆ. ಗವಿಯಂತಿರೋ ಇದೇ ಕಲ್ಲುಗಳ ನಡುವೆ ಸಾಗಿದ್ರೆ ಗವಿರುದ್ರೇಶ್ವರನ ದರ್ಶನವಾಗುತ್ತೆ .

ಇಲ್ಲಿನ ಹತ್ತಾರು ಹಳ್ಳಿಯ ಜನ ವರ್ಷಕ್ಕೊಮ್ಮೆ ಬಂದು ಬಂಡೆಗಳ ನಡುವೆ ನೆಲಸಿರೋ ಗವಿ ರುದ್ರೇಶ್ವರನಿಗೆ ಪೂಜೆ ಮಾಡುತ್ತಾರೆ. ಇನ್ನು ಈ ಬೆಟ್ಟದ ಸಮೀಪವೇ ಕೊಡಗು ಜಿಲ್ಲೆಯ ಮಲ್ಲಳ್ಳಿ ಜಲಪಾತ, ಹಾಸನ ಜಿಲ್ಲೆಯ ಬಿಸಿಲೆ ಅರಣ್ಯ ಕೂಡ ಇರೋದ್ರಿಂದ ಈ ಮೂರು ತಾಣಗಳನ್ನ ಸೇರಿಸಿ ಒಂದು ಪ್ರವಾಸಿ ಹಬ್ ಮಾಡಿ ಅನ್ನೋದು ಸ್ಥಳೀಯರ ಆಗ್ರಹ.

ಒಟ್ನಲ್ಲಿ ಪಶ್ಚಿಮ ಘಟ್ಟಗಳ ಸಾಲಲ್ಲಿ ಅಸಂಖ್ಯಾತ ರಮ್ಯತಾಣಗಳಿವೆ. ಇವುಗಳ ಸಾಲಿನಲ್ಲಿ ಈ ಗವಿಗುಡ್ಡ ನಿಲ್ಲುತ್ತೆಯಾದ್ರೂ ಸರಿಯಾದ ರಸ್ತೆ, ಮೂಲ ಸೌಕರ್ಯ ಇಲ್ಲದೆ ಇರೋದು ಪ್ರವಾಸೋದ್ಯಮದಿಂದ ಹಿಂದೆ ಉಳಿಯುವಂತೆ ಮಾಡಿದೆ.
Published On - 7:47 am, Sat, 19 November 22