ಹಾಸನ: ನಾಪತ್ತೆಯಾದ ಅಪ್ರಾಪ್ತ ಬಾಲಕಿಯನ್ನು ಪತ್ತೆಹಚ್ಚಿದ ಪೊಲೀಸರು
ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಹಾಸನದ ಬಾಲಮಂದಿರ ಸುಪರ್ದಿಗೆ ಒಪ್ಪಿಸಿ ರಕ್ಷಣೆ ನೀಡಲಾಗುತ್ತಿದೆ.
ಹಾಸನ: ಶಾಲೆಯಿಂದ ಮನೆಗೆ ವಾಪಸ್ ಆಗದೇ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿ ನಂದಿತಾಳನ್ನು ತುಮಕೂರಿನಲ್ಲಿ ಪತ್ತೆಹಚ್ಚಿದ ಪೊಲೀಸರು ಆಕೆಯನ್ನು ರಕ್ಷಿಸಿ ಜಿಲ್ಲೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಶಾಲೆ ಬಳಿಯಿಂದ ದಾಸರಹಳ್ಳಿಯ ನಂದಿತಾ ನವೆಂಬರ್ 7ರಂದು ಕಾರೆಹಳ್ಳಿಗೆ ಆಟೋದಲ್ಲಿ ಹೋಗಿ ತಿಪಟೂರಿಗೆ ಬಸ್ ಹತ್ತಿದ್ದಾಳೆ. ಬಾಲಕಿಯ ಹುಡುಕಾಟದಲ್ಲಿ ಪೋಷಕರು ಹಾಗೂ ಪೊಲೀಸರು ಅಂದಿನಿಂದ ಹತ್ತುದಿನಗಳ ಕಾಲ ತೊಡಗಿದ್ದರು. ಹಾಗಿದ್ದರೆ ಹತ್ತು ದಿನಗಳ ಕಾಲ ಬಾಲಕಿ ಎಲ್ಲಿ ಹೋಗಿದ್ದಳು? ಯಾರೊಂದಿಗೆ ಇದ್ದಳು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಚನ್ನರಾಯಪಟ್ಟಣ ತಾಲ್ಲೂಕಿನ ದಾಸರಹಳ್ಳಿಯ ನಂದಿತಾ ನವೆಂಬರ್ 7ರಂದು ಶಾಲೆ ಮುಗಿಸಿ ಮನೆಗೆ ವಾಪಸ್ ಆಗದೆ ನಾಪತ್ತೆಯಾಗಿದ್ದಳು. ಇತ್ತ ಗಾಬರಿಗೊಂಡ ಪೋಷಕರು ನುಗ್ಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿದ ಪೊಲೀಸರು ಬಾಲಕಿಯ ಹುಡುಕಾಟದಲ್ಲಿ ತೊಡಗಿದ್ದರು. ಈ ವೇಳೆ ಓರ್ವ ಮಹಿಳೆ ಜೊತೆ ನಂದಿತಾ ಇರುವ ಬಗ್ಗೆ ತುಮಕೂರು ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಪೊಲೀಸರು ತುಮಕೂರಿಗೆ ಹೋಗಿ ನಂದಿತಾಳನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ: Hassan: ಮಕ್ಕಳನ್ನು ನೋಡಲು ಬಿಡದಿದ್ದಕ್ಕೆ ಮಡದಿ ಮಕ್ಕಳನ್ನೂ ಸೇರಿಸಿ ಮನೆಗೆ ಬೆಂಕಿ ಹಚ್ಚಿದ ಪಾಪಿ ಪತಿ
ಶಾಲೆ ಮುಗಿದ ಬಳಿಕ ನಂದಿತಾ ಕಾರೆಹಳ್ಳಿಗೆ ಆಟೋದಲ್ಲಿ ಹೋಗಿ ತಿಪಟೂರಿಗೆ ಬಸ್ ಹತ್ತಿದ್ದಾಳೆ. ಈ ಬಸ್ನಲ್ಲಿ ಮಹಿಳೆಯೊಬ್ಬರ ಪರಿಚಯವಾಗಿದ್ದು, ಈ ವೇಳೆ ನಂದಿತಾ, ತನಗೆ ತಂದೆ ತಾಯಿ ಇಲ್ಲ ಎಂದು ಕಣ್ಣೀರಿಡುತ್ತಾ ನೋವು ಹೇಳಿಕೊಂಡಿದ್ದಾಳೆ. ಹೀಗಾಗಿ ಆ ಮಹಿಳೆ ನಂದಿತಾಳನ್ನು ತಮ್ಮ ಮನೆಗೆ ಕರೆದೊಯ್ದಿದ್ದರು.
ಬಸ್ ಹತ್ತಿ ಅಳುತ್ತಿದ್ದ ನಂದಿತಾಳನ್ನು ಬಸ್ ನಲ್ಲಿ ಪ್ರಯಾಣಿಕ ಮಹಿಳೆ ತುಮಕೂರು ದೇವಾಲಯಕ್ಕೆ ಕರೆದುಕೊಂಡು ಹೋಗಿ ನಂತರ ತಮ್ಮ ಮನೆಗೆ ಕರೆದೊಯ್ದಿದ್ದರು. ಆದರೆ ಮಹಿಳೆಯೊಂದಿಗೆ ಬಾಲಕಿಯೊಬ್ಬಳು ಪತ್ತೆಯಾಗಿರುವುದನ್ನ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಕಾರ್ಯಪ್ರವೃತ್ತರಾದ ಪೊಲೀಸರು ನಂದಿತಾಳನ್ನು ರಕ್ಷಿಸಿ ಹಾಸನದ ಬಾಲಮಂದಿರ ಸುಪರ್ದಿಗೆ ಒಪ್ಪಿಸಿ ರಕ್ಷಣೆ ನೀಡಿದ್ದಾರೆ.
ನಾರಾಯಣಪುರ ಡ್ಯಾಂ ಹಿನ್ನೀರಿನಲ್ಲಿ ತಂದೆ, ಮಗ ನೀರುಪಾಲು
ರಾಯಚೂರು: ನಾರಾಯಣಪುರ ಡ್ಯಾಂ ಹಿನ್ನೀರಿನಲ್ಲಿ ತಂದೆ ಮತ್ತು ಮಗ ನೀರುಪಾಲಾದ ಘಟನೆ ಲಿಂಗಸುಗೂರು ತಾಲೂಕಿನ ಪಲಗದಿನ್ನಿ ಗ್ರಾಮದ ಬಳಿ ನಡೆದಿದೆ. ತಾಲೂಕಿನ ಪಲಗದಿನ್ನಿ ಗ್ರಾಮದ ರಮೇಶ್(37) ಮತ್ತು ಇವರ ಮಗ ಲಕ್ಕಪ್ಪ(4) ಮೃತ ದುರ್ದೈವಿಗಳು. ನಿನ್ನೆ ಪತ್ನಿ, ಮಗನ ಜೊತೆ ರಮೇಶ್ ಅವರು ಡ್ಯಾಂ ಬಳಿ ಬಂದಿದ್ದರು. ಈ ವೇಳೆ ರಮೇಶ್ ಪತ್ನಿ ದಡದಲ್ಲಿ ನಿಂತುಕೊಂಡಿದ್ದರೆ, ಮಗ ಲಕ್ಕಪ್ಪ ದಡದಲ್ಲಿ ಆಟವಾಡುತ್ತಿದ್ದ. ಹೀಗೆ ಆಡುತ್ತಿದ್ದ ಲಕ್ಕಪ್ಪ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಮಗನನ್ನು ರಕ್ಷಿಸಲು ಹೋದ ತಂದೆ ರಮೇಶ್ ಕೂಡ ನೀರುಪಾಲಾಗಿದ್ದಾರೆ. ಘಟನೆ ಬಗ್ಗೆ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಸತಿ ಶಾಲೆಯ 26 ವಿದ್ಯಾರ್ಥಿನಿಯರು ಅಸ್ವಸ್ಥ
ಚಿಕ್ಕಮಗಳೂರು: ರಾತ್ರಿ ಊಟ ಮಾಡಿದ ಬಳಿಕ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 26 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ತರೀಕೆರೆ ಪಟ್ಟಣದಲ್ಲಿ ನಡೆದಿದೆ. ತರೀಕೆರೆ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಂದಿನಂತೆ ಊಟ ಮಾಡಿದ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಳಪೆ ಗುಣಮಟ್ಟದ ಆಹಾರ ಸೇವನೆಯಿಂದ ಅಸ್ವಸ್ಥರಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:25 am, Sat, 19 November 22