Hassan: ಮಕ್ಕಳನ್ನು ನೋಡಲು ಬಿಡದಿದ್ದಕ್ಕೆ ಮಡದಿ ಮಕ್ಕಳನ್ನೂ ಸೇರಿಸಿ ಮನೆಗೆ ಬೆಂಕಿ ಹಚ್ಚಿದ ಪಾಪಿ ಪತಿ
ದಂಪತಿಗಳ ನಡುವೆ ಜಗಳ ನಡೆದು ಬೇರೆಬೇರೆಯಾಗಿದ್ದರು. ಆದರೂ ಪತಿ ಮಕ್ಕಳನ್ನು ನೋಡಲು ಆಗಾಗ ಬರುತ್ತಿದ್ದ. ಆದರೆ ಮಕ್ಕಳನ್ನು ನೋಡಲು ಬಿಡಲಿಲ್ಲ ಎನ್ನುವ ಕಾರಣಕ್ಕೆ ಆತ ಮಕ್ಕಳ ಸಹಿತ ಹೆಂಡತಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದ್ದಾನೆ.
ಹಾಸನ: ದಂಪತಿಗಳ ನಡುವೆ ಜಗಳ ನಡೆದು ಬೇರೆಬೇರೆಯಾಗಿದ್ದರು. ಆದರೂ ಪತಿ ಮಕ್ಕಳನ್ನು ನೋಡಲು ಆಗಾಗ ಬರುತ್ತಿದ್ದ. ಆದರೆ ನಿನ್ನೆ ಮಕ್ಕಳನ್ನು ನೋಡಲು ಬಿಡಲಿಲ್ಲ ಎನ್ನುವ ಕಾರಣಕ್ಕೆ ಕೋಪಗೊಂಡ ಪತಿಮಹಾಶಯ ತನ್ನ ಮಡದಿ ಮಕ್ಕಳನ್ನೂ ಸೇರಿಸಿ ಮನೆಗೆ ಬೆಂಕಿ ಹಚ್ಚಿದ ಘಟನೆ ತಾಲೂಕಿನ ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಗೀತಾ, ಚಿರಂತನ್ (7), ನಂದನ್ (5) ಗಾಯಗೊಂಡಿದ್ದು, ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಂದೆಡೆ ಹಚ್ಚಿದ ಬೆಂಕಿಯಿಂದಾಗಿ ಮನೆಯೊಳಗಿದ್ದ ಪೀಠೋಪಕರಣಗಳು ಸುಟ್ಟಭಸ್ಮವಾಗಿವೆ.
ಅಂಕನಹಳ್ಳಿಯ ರಂಗಸ್ವಾಮಿ ಮತ್ತು ಗೀತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ದಂಪತಿಗಳ ನಡುವೆ ಜಮೀನು ವಿಚಾರವಾಗಿ ಪದೇಪದೇ ಜಗಳ ನಡೆಯುತ್ತಿತ್ತು. ಈ ವಿಚಾರವಾಗಿ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಆದರೆ ಸಂಸಾರದಲ್ಲಿ ಹೊಂದಾಣಿಕೆ ಕಾಣದ ಹಿನ್ನೆಲೆ ಕಳೆದ ನಾಲ್ಕು ತಿಂಗಳಿನಿಂದ ದಂಪತಿಗಳು ಬೇರೆಯಾಗಿದ್ದರು. ಈ ವೇಳೆ ಗೀತಾ ಮಕ್ಕಳನ್ನು ತನ್ನೊಂದಿಗೆ ಇರಿಸಿಕೊಂಡಿದ್ದಳು.
ಇದನ್ನೂ ಓದಿ: Crime News: ನವಿಲು ತೀರ್ಥ ಜಲಾಶಯದ ಹಿನ್ನೀರಿನಲ್ಲಿ ಇಬ್ಬರು ಮಕ್ಕಳು ಹಾಗೂ ತಾಯಿ ಶವ ಪತ್ತೆ
ಮಕ್ಕಳು ತಾಯಿಯ ಜೊತೆ ಇರುವ ಹಿನ್ನೆಲೆ ತನ್ನ ಮಕ್ಕಳನ್ನು ನೋಡಲೆಂದು ರಂಗಸ್ವಾಮಿ ಆಗ್ಗಾಗೆ ಬರುತ್ತಿದ್ದನು. ಹೀಗೆ ಬಂದು ಮಕ್ಕಳೊಂದಿಗೆ ಮಾತನಾಡಿ ಹೋಗುತ್ತಿದ್ದನು. ನಿನ್ನೆ ಮಕ್ಕಳನ್ನು ನೋಡಲು ಬಂದಾಗ ಗೀತಾ ತನ್ನ ಮಕ್ಕಳನ್ನು ನೋಡಲು ಬಿಡಲಿಲ್ಲ. ಇದರಿಂದ ರಂಗಸ್ವಾಮಿ ಕೋಪಗೊಂಡಿದ್ದಾನೆ. ಇದೇ ಕೋಪದಲ್ಲಿ ಅಮಾನವೀಯ ಕೃತ್ಯ ಎಸಗಿದ್ದಾನೆ.
ಪೆಟ್ರೋಲ್ ಬಂಕ್‌ನಿಂದ ಪೆಟ್ರೋಲ್ ತಂದ ರಂಗಸ್ವಾಮಿ ಹೆಂಡತಿ ಮತ್ತು ಮಕ್ಕಳು ನಿದ್ರೆಗೆ ಜಾರಿದ್ದಾಗ ಮಧ್ಯರಾತ್ರಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ವಿಚಾರ ತಿಳಿದ ಸ್ಥಳೀಯರು ಗೀತಾ ಮತ್ತು ಆಕೆಯ ಮಕ್ಕಳ ನೆರವಿಗೆ ದಾವಿಸಿದ್ದು, ಸ್ಥಳೀಯರ ಸಮಯಪ್ರಜ್ಞೆಯಿಂದ ಮೂವರ ಜೀವ ಉಳಿದಿದೆ. ಘಟನೆಯಲ್ಲಿ ತಾಯಿ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲಾ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಂಗಸ್ವಾಮಿಯನ್ನು ಬಂಧಿಸಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:59 am, Sat, 19 November 22