ಹಾಸನ: ಜನುಮ ಜನುಮದ ಅನುಬಂಧ ಮದುವೆ ಎನ್ನುತ್ತಾರೆ. ಒಮ್ಮೆ ಮದುವೆ ಆದರೆ ಏಳೇಳು ಜನ್ಮಕ್ಕೂ ನೀನೆ ನನ್ನ ಸಂಗಾತಿಯಾಗಬೇಕು ಎಂದು ಬಯಸುತ್ತಾರೆ. ಆದರೆ ಇತ್ತೀಚೆಗೆ ಈ ಸಂಬಂಧಗಳೇ ಹಾಳಾಗುತ್ತಿವೆ. ಇದಕ್ಕೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಅಬ್ಬರವೂ ಕಾರಣೀಭೂತವಾಗುತ್ತಿದೆ. ಪ್ರೀತಿ- ಪ್ರೇಮ, ಮದುವೆ ಬಂಧಗಳೆಲ್ಲಾ ಸಾಮಾಜಿಕ ಜಾಲತಾಣದಲ್ಲೇ ಎನ್ನುವಂತಹ ವಾತಾವರಣ ನಮ್ಮ ನಡುವೆ ನುಸುಳಿಬಿಟ್ಟಿ ದೆ. ಇನ್ನು ಬೆಳಗ್ಗೆ ಮದುವೆ ಆದೋರು, ಮರುದಿನ ವಿಚ್ಛೇದನಕ್ಕೆ ಮುಂದಾದ ಸಂಗತಿಗಳೂ ಇತ್ತೀಚೆಗೆ ಕಾಣ ಸಿಗುತ್ತವೆ.
ಯಾರನ್ನೋ ಮದುವೆಯಾಗಬೇಕಿದ್ದೋರು ಇನ್ಯಾರನ್ನೋ ವರಿಸಿ ಬಿಡುತ್ತಾರೆ. ಋಣಾನುಬಂಧ, ಜನ್ಮ ಜನ್ಮದ ಅನುಬಂಧ ಅನ್ನೋದೆಲ್ಲಾ ಈಗ ಕತೆ ಕವಿತೆಗಳಿಗೆ ಸೀಮಿತವಾಗಿಬಿಟ್ಟಿವೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಅರಳಿದ ಪ್ರೀತಿಯೊಂದು ಮದುವೆಗೆ ಬಂದು ನಿಂತಾಗ ತಿರುವು ಪಡೆದಿದೆ. ಹಾಸನದಲ್ಲಿ ಇಂತಹ ಒಂದು ಮದುವೆ ಆಗಿದೆ. ಈ ಮದುವೆಯ ಕಹಾನಿ ಕೇಳಿದರೆ ಹೀಗೂ ಮದುವೆ ಆಗುತ್ತಾ ಎಂದು ಹುಬ್ಬೇರಿಸುವ ಸರದಿ ನಿಮ್ಮದಾಗುತ್ತದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಗ್ರಾಮವೊಂದರ ಯುವಕ ಅಕ್ಕಪಕ್ಕದೂರಿನ ಇಬ್ಬರು ಯುವತಿಯರನ್ನು ಏಕ ಕಾಲದಲ್ಲಿ ಪ್ರೀತಿ ಮಾಡುತ್ತಿದ್ದ! ಆದರೆ ಮದುವೆಯಾಗುವ ಸಂದರ್ಭ ಬರುತ್ತಲೇ ಈ ತ್ರಿಕೋನ ಪ್ರೇಮ ಬದಲಾಗಿ ಹೋಗಿತ್ತು. ಇಬ್ಬರಲ್ಲಿ ಯಾರನ್ನು ನಾನು ಮದುವೆಯಾಗಲಿ ಎಂದು ಮದುಮಗ ಇಕ್ಕಟ್ಟಿಗೆ ಸಿಲುಕಿದರೆ, ಹುಡುಗಿಯರು ಮಾತ್ರ ನೀನು ನನ್ನನ್ನೇ ವರಿಸಬೇಕು ಎಂದು ಪಟ್ಟು ಹಿಡಿದಿದ್ದು ಸೋಜಿಗವಾಗಿ ಕಂಡುಬಂದಿತು.
ಮದುವೆ ಸಂಧಾನಕ್ಕೆ ಗ್ರಾಮಸ್ಥರ ಮಧ್ಯಸ್ಥಿಕೆ
ಯಾವಾಗ ಒಂದು ಹುಡುಗ, ಇಬ್ಬರು ಹುಡುಗಿಯರ ನಡುವಣ ಈ ಪ್ರೇಮ ಕಗ್ಗಂಟಾಯ್ತೋ ಗ್ರಾಮಸ್ಥರು ಮಧ್ಯಪ್ರವೇಶ ಮಾಡಿದರು. ಮೂವರನ್ನೂ ಕೂರಿಸಿ ಒಂದು ಹುಡುಗಿಯನ್ನು ಸಮಾಧಾನ ಪಡಿಸಲು ಶುರು ಮಾಡಿದರು. ಆದರೆ ಪಟ್ಟು ಬಿಡದ ಪ್ರೇಯಸಿಯರು ಮಾತ್ರ ಈ ಹುಡುಗ ನನಗೇ ಬೇಕು ಎಂದು ಹಠಕ್ಕೆ ಬಿದ್ದಿದ್ದರು.
ಒಬ್ಬಳಂತೂ ನಾನು ಪ್ರೀತಿಸಿದ ಹುಡುಗ ಸಿಗದಿದ್ದರೆ ನಾ ಬದುಕೋದೆ ಇಲ್ಲಾ ಎಂದು ವಿಷವನ್ನೆ ಕುಡಿದುಬಿಟ್ಟಳು. ಅಯ್ಯಯ್ಯೋ ಇದೊಳ್ಳೆ ಸಂಕಷ್ಟ ಆಯ್ತಲ್ಲಾ ಎಂದು ಸಂಧಾನಕಾರರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದರು. ಹೇಗೋ ಆಕೆ ಪ್ರಾಣಾಪಾಯದಿಂದ ಪಾರಾಗಿದ್ಲು. ಮತ್ತೆ ಆಕೆ ಗುಣಮುಖವಾಗಿ ಬಂದ ಬಳಿಕ ಮತ್ತೆ ರಾಜಿ ಪಂಚಾಯ್ತಿ ಮಾಡಿದರು. ಆದರೆ ಸಮಸ್ಯೆ ಮಾತ್ರ ಬಗೆಹರಿಯಲಿಲ್ಲ. ಸರಿಯಾಗಿ ಆಗಲೇ ಗ್ರಾಮಸ್ಥರು ಟಾಸ್ ಮೊರೆ ಹೋಗಿದ್ದು!
ಹುಡುಗನ ನಿಶ್ಚಯ ಶಾಸ್ತ್ರಕ್ಕೆ ಟಾಸ್ ಹಾಕಿ ಹುಡುಗಿಯ ಆಯ್ಕೆ!
ಯಾವಾಗ ಎಷ್ಟೇ ಪ್ರಯತ್ನ ಮಾಡಿದರೂ ಈ ತ್ರಿಕೋನ ಪ್ರೇಮ ಪುರಾಣ ಸರಿ ಆಗೋದಿಲ್ಲ ಎಂದು ಗೊತ್ತಾಯ್ತೋ ರೋಸಿಹೋದ ಊರಿನ ಮುಖಂಡರು, ಮೂರೂ ಕುಟುಂಬಕ್ಕೆ ವಾರ್ನಿಂಗ್ ಕೊಟ್ಟರು. ನಾವು ಈ ಪ್ರಕರಣ ಇತ್ಯರ್ಥ ಮಾಡ್ತೀವಿ, ಅದಕ್ಕೆ ನೀವು ಒಪ್ಪಬೇಕು ಎಂದರು.
ಹುಡುಗನನ್ನು ಯಾರು ಮದುವೆಯಾಗಬೇಕು ಎಂದು ಟಾಸ್ ಹಾಕೋಣ, ಯಾರಿಗೆ ಅದೃಷ್ಟ ಇರುತ್ತೋ ಅವರು ಸತಿ-ಪತಿಗಳಾಗಲಿ ಎಂದು ತೀರ್ಮಾನಿಸಿದರು. ಟಾಸ್ ಆದ ಬಳಿಕ ಯಾರೂ ಮರು ಮಾತನಾಡೋಹಾಗಿಲ್ಲ, ಮತ್ತೆ ದೂರು ಕೊಡುವ ಹಾಗಿಲ್ಲ ಎಂದು ಮೂರೂ ಕಡೆಯವರಿಂದ ಅಗ್ರಿಮೆಂಟ್ ಕೂಡ ರೆಡಿಯಾಯಿತು. ಬಳಿಕ ಟಾಸ್ಗೆ ದಿನ ನಿಗದಿಯಾಯಿತು.
ಟಾಸ್ ಹಾಕೋ ವೇಳೆಯಲ್ಲಿ ರೋಚಕ ತಿರುವು
ತ್ರಿಕೋನ ಪ್ರೇಮ ಸಿನಿಮೀಯ ರೀತಿಯಲ್ಲಿ ಕುತೂಹಲ ಮೂಡಿಸಿತ್ತು. ನಿನ್ನೆ ಶುಕ್ರವಾರ ಟಾಸ್ ಗೆ ಮುಹೂರ್ತ ಸಿದ್ಧ ಮಾಡಿದ ಹಿರಿಯರು ಎಲ್ಲರೂ ಒಂದೆಡೆ ಸೇರಿದರು. ಟಾಸ್ ಹಾಕಿದರೆ ಯಾರಿಗೆ ಅದೃಷ್ಟ ಒಲಿಯುತ್ತೆ ಎಂದು ಎಲ್ಲರಲ್ಲೂ ಕಾತರ ಇರುವಾಗ ಹುಡುಗ ಸೀದಾ ಅಲ್ಲಿಂದ ಓಡಿ ಹೋಗಿದ್ದಾನೆ!
ನನಗಾಗಿ ವಿಷ ಕುಡಿದವಳೆ ನನ್ನ ಅರ್ಧಾಂಗಿ ಅಂದುಬಿಟ್ಟಿದ್ದಾನೆ. ಇದೆಲ್ಲವನ್ನೂ ನೋಡುತ್ತಿದ್ದ ಇನ್ನೊಬ್ಬಳು ಸಿಟ್ಟಿಗೆದ್ದು ಪ್ರೇಮಿಗೆ ಕಪಾಳ ಮೋಕ್ಷ ಮಾಡಿ ಅಲ್ಲಿಂದ ಮರಳಿದ್ದಾಳೆ. ಅಲ್ಲಿಗೆ ವಾರಗಟ್ಟಲೆಯಿಂದ ಕಗ್ಗಂಟಾಗಿದ್ದ ಪ್ರಕರಣ ಹೀಗೆ ಕೊನೆಯಾಯಿತು ಅನ್ನೀ. ಕೊನೆಯಲ್ಲಿ ಇಬ್ಬರು ಮಾತ್ರವೇ ಒಂದಾಗಿದ್ದು, ಇದು ಸುಖಾಂತ್ಯವೋ, ಸಮಸ್ಯೆಯ ಆರಂಭವೊ ಎಂಬ ಗೊಂದಲದಲ್ಲೇ ಎಲ್ಲರೂ ಅಲ್ಲಿಂದ ತೆರಳಿದ್ದಾರೆ.
ವರದಿ: ಮಂಜುನಾಥ್ ಕೆಬಿ
ಇದನ್ನೂ ಓದಿ:
ಪ್ರೀತಿ ವಿಷಯಕ್ಕೆ ಪೋಷಕರು ಬುದ್ಧಿ ಹೇಳಿದಕ್ಕೆ ಆಚಾರ್ಯ ಕಾಲೇಜಿನ ವಿದ್ಯಾರ್ಥಿನಿ ಪಿಜಿಯಲ್ಲಿ ನೇಣಿಗೆ ಶರಣು
ಪ್ರೀತಿ ಕೊಂದ ಕೊಲೆಗಾತಿಗೆ ಜೀವಾವಧಿ ಶಿಕ್ಷೆ; ಮಗನ ಸಾವಿಗೆ ನ್ಯಾಯ ಸಿಗಲಿ ಎಂದು ಐದು ವರ್ಷ ಅಲೆದ ತಾಯಿಗೆ ಸಿಕ್ಕ ಜಯ!
Published On - 2:19 pm, Sat, 4 September 21