
ಹಾಸನ, ಡಿಸೆಂಬರ್ 02: 2023ರ ಡಿಸೆಂಬರ್ 4ರಂದು ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಕಾದಾಡಿ ಮಡಿದ ದಸರಾ ಆನೆ ಕ್ಯಾಪ್ಟನ್ ಅರ್ಜುನನಿಗೆ (Captain Arjun) ಸ್ಮಾರಕ ನಿರ್ಮಿಸಬೇಕೆಂಬ ಬೇಡಿಕೆ ಹಿನ್ನೆಲೆಯಲ್ಲಿ ಸರ್ಕಾರ ಪ್ರಾಜೆಕ್ಟ್‌ಗೆ ಅನುಮೋದನೆ ನೀಡಿತ್ತು. ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆಯ ಅರಣ್ಯದಲ್ಲಿ ಹುತಾತ್ಮ ಕಾಡಾನೆ ಅರ್ಜುನನ ಸ್ಮಾರಕ ನಿರ್ಮಾಣ ಪೂರ್ಣಗೊಂಡಿದ್ದು, ಈಗ ಉದ್ಘಾಟನೆಗಾಗಿ ಸ್ಥಳೀಯರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸ್ಥಳೀಯರು 5 ಕೋಟಿ ರೂ. ವೆಚ್ಚದಲ್ಲಿ ಭವ್ಯ ಸ್ಮಾರಕ ನಿರ್ಮಿಸಬೇಕೆಂದು ಆಗ್ರಹಿಸಿದ್ದರು. ಸರ್ಕಾರ ಮೊದಲ ಹಂತದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಶುರುಮಾಡಿತ್ತು. ಇದೀಗ ಮೂಲ ಸೌಲಭ್ಯಗಳ ಕೊರತೆ ಇದ್ದರೂ ಸ್ಮಾರಕ ಉದ್ಘಾಟನೆಗೆ ಸಿದ್ದವಾಗಿದೆ. ಡಿಸೆಂಬರ್ 6 ರಂದು ಹಾಸನಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸ್ಮಾರಕ ಲೋಕಾರ್ಪಣೆ ಮಾಡಬೇಕೆಂಬ ಆಗ್ರಹ ಹೊರಹೊಮ್ಮಿದೆ. ಅರ್ಜುನ ಹುತಾತ್ಮನಾಗಿ ಎರಡು ವರ್ಷ ಪೂರ್ತಿಯಾಗುತ್ತಿರುವುದರಿಂದ ಪುತ್ಥಳಿಯ ಉದ್ಘಾಟನೆ ವಿಳಂಬವಾಗಬಾರದೆಂದು ಸ್ಥಳೀಯರು ಹೇಳುತ್ತಿದ್ದಾರೆ.
ದಕ್ಷಿಣ ಕನ್ನಡ ಮೂಲದ ಶಿಲ್ಪಿ ಧನಂಜಯ್ ಪಡು ಅವರ ತಂಡ 10 ತಿಂಗಳ ಹಿಂದೆಯೇ 9.8 ಅಡಿ ಎತ್ತರ, 12.4 ಅಡಿ ಉದ್ದದ ಅರ್ಜುನನ ಪುತ್ಥಳಿ ನಿರ್ಮಾಣ ಪೂರ್ಣಗೊಳಿಸಿದೆ. ಅರ್ಜುನನ ಸಮಾದಿ ಮೇಲೆಯೇ ಮೂರ್ತಿಯನ್ನು ನಿಲ್ಲಿಸಲಾಗಿದೆ. ಸರ್ಕಾರ ಇದುವರೆಗೆ 50 ಲಕ್ಷ ರೂ. ವೆಚ್ಚದಲ್ಲಿ ಸ್ಮಾರಕದ ಪ್ರಮುಖ ಭಾಗಗಳನ್ನು ನಿರ್ಮಿಸಿದ್ದು, ಇನ್ನೂ ಶೌಚಾಲಯ, ವಿಶ್ರಾಂತಿ ಗೃಹ, ಭದ್ರತಾ ಸಿಬ್ಬಂದಿ ಕೊಠಡಿ ಸೇರಿದಂತೆ ಹಲವಾರು ಮೂಲ ಸೌಲಭ್ಯಗಳು ಬಾಕಿ ಇವೆ ಎಂದು ತಿಳಿದು ಬಂದಿದೆ. ಈ ಕುರಿತು ಮಾತನಾಡಿರುವ ಶಾಸಕ ಸಿಮೆಂಟ್ ಮಂಜು, ಅರ್ಜುನ ಈ ದೇಶದ ಆಸ್ತಿ. ಅದಕ್ಕೆ ಗೌರವ ಇದ್ದರೆ ಸರ್ಕಾರ ಶೀಘ್ರ ಸ್ಮಾರಕ ಉದ್ಘಾಟನೆ ಮಾಡಬೇಕು. ಕಂಚಿನ ಪ್ರತಿಮೆ ಬೇಡಿಕೆ ಇದ್ದರೂ ಫೈಬರ್ ಮೂರ್ತಿ ನಿರ್ಮಾಣವಾಗಿದೆ. ಈ ವಿಷಯವನ್ನು ಅರಣ್ಯ ಸಚಿವರ ಗಮನಕ್ಕೆ ತರುತ್ತೇನೆ ಎಂದು ಹೇಳಿದ್ದಾರೆ.
ಮೈಸೂರಿನ ವಿಶ್ವವಿಖ್ಯಾತ ದಸರಾದಲ್ಲಿ 8 ಬಾರಿ ಚಾಮುಂಡೇಶ್ವರಿಯನ್ನು ಹೊತ್ತು ಅಂಬಾರಿ ಮೆರಗಿಸಿದ ಅರ್ಜುನ, ಕಾಡಾನೆ ಸೆರೆ ಕಾರ್ಯಾಚರಣೆಗಳಲ್ಲಿ ತನ್ನ ಶೌರ್ಯ ಪ್ರದರ್ಶಿಸಿದ್ದ. ತನ್ನ ಕೊನೆಯ ಕಾರ್ಯಾಚರಣೆಯಲ್ಲಿಯೇ ಕಾಡಾನೆ ವಿರುದ್ಧ ಹೋರಾಡಿ ಮಡಿದಿದ್ದರೂ ಹತ್ತಾರು ಜನರ ಜೀವ ಉಳಿಸಿದ್ದ. ಇದರಿಂದ ಅರ್ಜುನ ಕರ್ನಾಟಕದ ಕೋಟ್ಯಾಂತರ ಜನರ ಅಭಿಮಾನವನ್ನು ಗಳಿಸಿದ್ದ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.