ಸಕಲೇಶಪುರ ದೊಡ್ಡತಪ್ಪಲು ಗುಡ್ಡ ಕುಸಿತ ಪ್ರದೇಶಕ್ಕೆ ಹೆಚ್​ಡಿ ಕುಮಾರಸ್ವಾಮಿ ಭೇಟಿ

| Updated By: ಆಯೇಷಾ ಬಾನು

Updated on: Jul 21, 2024 | 12:12 PM

ಸಕಲೇಶಪುರ ದೊಡ್ಡತಪ್ಪಲು ಗುಡ್ಡ ಕುಸಿತ ಪ್ರದೇಶಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರದಿಂದ ಉದ್ದಕ್ಕೂ ಭೂಕುಸಿತವಾಗುತ್ತಲೇ ಇದೆ. ಕಳಪೆ ಹಾಗೂ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹಾಸನ, ಜುಲೈ.21: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಡ್ಡ ಕುಸಿತಕ್ಕೆ ಸಂಬಂಧಿಸಿ ಸಕಲೇಶಪುರ ದೊಡ್ಡತಪ್ಪಲು ಗುಡ್ಡ ಕುಸಿತ ಪ್ರದೇಶಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ (R Ashok) ಭೇಟಿ ನೀಡಿದ್ದಾರೆ. ಹೆಚ್​ಡಿಕೆಗೆ ಶಾಸಕರುಗಳಾದ ಸಿಮೆಂಟ್ ಮಂಜು, ಹೆಚ್.ಪಿ.ಸ್ವರೂಪ್‌ಪ್ರಕಾಶ್, ಸಿ.ಎನ್.ಬಾಲಕೃಷ್ಣ, ಹೆಚ್.ಕೆ.ಸುರೇಶ್ ಸಾಥ್ ನೀಡಿದ್ದಾರೆ. ಡಿಸಿ ಸತ್ಯಭಾಮ, ಎಸ್ಪಿ ಮಹಮದ್ ಸುಜೇತಾ, ಎಸಿ ಶೃತಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.

ಇನ್ನು ಪರಿಶೀಲನೆ ನಂತರ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದು, ಕಳೆದ ಐದಾರು ದಿನಗಳಿಂದ ದೊಡ್ಡಮಟ್ಟದ ಮಳೆ ಆರಂಭವಾಗಿದೆ. 2018ರಲ್ಲಿ ನಾನು ಸಿಎಂ ಆಗಿದ್ದಾಗ ಇದೇ ರೀತಿ ಮಳೆಯಾಗಿತ್ತು. 2018ರ ನಂತರ ಈ‌ಗ ಈ ರೀತಿ ಮಳೆಯಾಗಿದೆ. ಒಂದೆಡೆ ಜಲಾಶಯಗಳು ತುಂಬಿದ್ದು ಪಕ್ಕದ ರಾಜ್ಯಗಳ ಜೊತೆ ಸಂಘರ್ಷಕ್ಕೆ ಒಂದು ವರ್ಷ ವಿರಾಮ ಸಿಕ್ಕಿದೆ. ಮಳೆಯಿಂದ ಆಗಿರುವ ಅನಾಹುತಗಳು, ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು. ಶಿರೂರಿನಲ್ಲಿ ಮಳೆ ಮುಂದುವರೆದರೆ ಇನ್ನೂ ಭೂಕುಸಿತವಾಗುತ್ತದೆ. ಸಕಲೇಶಪುರದಿಂದ ಉದ್ದಕ್ಕೂ ಭೂಕುಸಿತವಾಗುತ್ತಲೇ ಇದೆ.

ಎಂಟು ವರ್ಷದ ಹಿಂದಿನಿಂದ ಗುತ್ತಿಗೆದಾರ ಕೆಲಸ ಮಾಡುತ್ತಿದ್ದಾನೆ. ಕಳಪೆ ಹಾಗೂ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಲಾಗುತ್ತಿದೆ. ಕೇಂದ್ರದ ಭೂಸಾರಿಗೆ ಸಚಿವರಿಗೆ ಎಲ್ಲಾ ಮಾಹಿತಿ ಕೊಡುತ್ತೇನೆ. ಗಡ್ಕರಿ ಅವರ ಪಾತ್ರವೂ ಜಾಸ್ತಿ ಇದೆ. ವೈಜ್ಞಾನಿಕವಾಗಿ ಕಾಮಗಾರಿ ಮಾಡಲು ಗಡ್ಕರಿ ಅವರ ಜೊತೆ ಚರ್ಚೆ ಮಾಡುತ್ತೇನೆ. ಸ್ಥಳಕ್ಕೆ ಒಮ್ಮೆ ಭೇಟಿ ನೀಡಲು ಮನವಿ ಮಾಡುತ್ತೇನೆ. ರಾಜ್ಯ ಸರ್ಕಾರದ ಮಂತ್ರಿಗಳು ಭೇಟಿ ನೀಡಿ ಜನಗಳಿಗೆ ಮಾನಸಿಕವಾಗಿ ಧೈರ್ಯ ತುಂಬಬೇಕು. ಆದ್ದರಿಂದ ನಾನು ನಿನ್ನೆಯಿಂದ ಭೇಟಿ ನೀಡುತ್ತಿದ್ದೇನೆ ಎಂದರು.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ; ದಿನೇ ದಿನೆ ಹೆಚ್ಚುತ್ತಿದೆ ನಾಪತ್ತೆಯಾದವರ ಸಂಖ್ಯೆ

TV9ಇಂಪ್ಯಾಕ್ಟ್.. ಗುಡ್ಡ ಕುಸಿತ ಸ್ಥಳಕ್ಕೆ ಡಿಸಿ ದೌಡು

ಶೃಂಗೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಗುಡ್ಡ ಕುಸಿತದ ಬಗ್ಗೆ ನಿರಂತರವಾಗಿ TV9 ಕನ್ನಡ ಸುದ್ದಿ ಮಾಡಿದ ಬೆನ್ನಲ್ಲೇ ಜಿಲ್ಲಾಡಳಿತ ಅಲರ್ಟ್ ಆಗಿದೆ. ಸ್ಥಳಕ್ಕೆ ಚಿಕ್ಕಮಗಳೂರು ಡಿ.ಸಿ ಮೀನಾ ನಾಗರಾಜ್, ಎಸ್ಪಿ ವಿಕ್ರಂ ಆಮ್ಟೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ನೆಮ್ಮಾರು ಸಮೀಪ ಹತ್ತಾರು ಕಡೆ ಗುಡ್ಡ ಕುಸಿದಿದ್ದು, ಅವೈಜ್ಞಾನಿಕ ಕಾಮಗಾರಿ ಆರೋಪ ಕೇಳಿಬಂದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:39 am, Sun, 21 July 24