AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾರ್ಮಾಡಿ ಘಾಟಿಯಲ್ಲಿಯೂ ಭೂಕುಸಿತದ ಆತಂಕ: ಕಟ್ಟೆಚ್ಚರ ಘೋಷಿಸಿದ ಜಿಲ್ಲಾಡಳಿತ

ಮುಂಗಾರು ಮಳೆ ಅಬ್ಬರದಿಂದ ಸಂಭವಿಸಿದ ಭೂಕುಸಿತಗಳಿಂದಾಗಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು, ಹಾಸನ ಹಾಗೂ ಬೆಂಗಳೂರು ಮಧ್ಯದ ಸಂಪರ್ಕ ದುಸ್ತರವಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿ ಘಾಟಿ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದ ಕೆಲವೇ ದಿನಗಳಲ್ಲಿ ಇದೀಗ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿ ರಸ್ತೆಯಲ್ಲಿಯೂ ಭೂಕುಸಿತ ಆತಂಕ ಎದುರಾಗಿದೆ.

ಚಾರ್ಮಾಡಿ ಘಾಟಿಯಲ್ಲಿಯೂ ಭೂಕುಸಿತದ ಆತಂಕ: ಕಟ್ಟೆಚ್ಚರ ಘೋಷಿಸಿದ ಜಿಲ್ಲಾಡಳಿತ
ಚಾರ್ಮಾಡಿ ಘಾಟಿ ರಸ್ತೆ (ಸಾಂದರ್ಭಿಕ ಚಿತ್ರ)
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: Ganapathi Sharma|

Updated on: Jul 20, 2024 | 12:07 PM

Share

ಚಿಕ್ಕಮಗಳೂರು, ಜುಲೈ 20: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿ ಘಾಟಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಭೂಕುಸಿತ ಸಂಭವಿಸಿದ ನಂತರ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದೆ. ಪರಿಣಾಮವಾಗಿ ಇದೀಗ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಕೂಡ ಭೂಕುಸಿತದ ಆತಂಕ ಎದುರಾಗಿದ್ದು ಜಿಲ್ಲಾಡಳಿತ ಕಟ್ಟೆಚ್ಚರ ಘೋಷಿಸಿದೆ.

ಮುನ್ನೆಚ್ಚರಿಕೆ ಕಾರ್ಯಕ್ರಮವಾಗಿ, ಈ ಹಿಂದೆ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಎಲ್ಲೆಲ್ಲಿ ಮೂಗುಸಿತ ಸಂಭವಿಸಿತ್ತೋ ಅಲ್ಲೆಲ್ಲ ಪರಿಶೀಲನೆ ನಡೆಸುವಂತೆ ಜಿಲ್ಲಾಡಳಿತ ಅಧಿಕಾರಿಗಳಿಗೆ ಸೂಚನೆ ನೀಡಿದೆ. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಜೊತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಭೆ ನಡೆಸಿದ್ದು ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ಇದರ ಬೆನ್ನಲ್ಲೇ ಎಸ್‌ಪಿ ವಿಕ್ರಂ ಅಮ್ಟೆ ಸೇರಿದಂತೆ ಅಧಿಕಾರಿಗಳು ಚಾರ್ಮಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಾರ್ಮಾಡಿ ಘಾಟಿಯ ಅಲೇಖಾನ್ ಫಾಲ್ಸ್ ಬಳಿ 15 ದಿನಗಳ ಹಿಂದೆ ಭೂಕುಸಿತ ಸಂಭವಿಸಿತ್ತು. ಹೀಗಾಗಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಂಭಾವ್ಯ ಪರಿಸ್ಥಿತಿಗಳ ಬಗ್ಗೆ ಅವಲೋಕನ ನಡೆಸಿದ್ದಾರೆ.

ಶಿರಾಡಿ ಘಾಟಿ ರಸ್ತೆಯಲ್ಲಿ ಸಂಚಾರ ಪುನರಾರಂಭ

ಸಕಲೇಶಪುರದ ದೊಡ್ಡತಪ್ಲು ಬಳಿ ಭೂಕುಸಿತದಿಂದಾಗಿ ಶಿರಾಡಿ ಘಾಟಿ ರಸ್ತೆಯಲ್ಲಿ ಸ್ಥಗಿತಗೊಂಡಿದ್ದ ವಾಹನ ಸಂಚಾರ ಶನಿವಾರದಿಂದ ಪುನರಾರಂಭಗೊಂಡಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ತನಕ ಘಾಟಿ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಶನಿವಾರದಿಂದ ಸಂಚಾರ ಆರಂಭಗೊಂಡಿದೆ.

ಇದನ್ನೂ ಓದಿ: ಶಿರಾಡಿ ಘಾಟ್​ನಲ್ಲಿ ವಾಹನ ಸಂಚಾರಕ್ಕೆ ಅವಕಾಶ, ಷರತ್ತುಗಳು ಅನ್ವಯ

ದೊಡ್ಡತಪ್ಲು ಬಳಿ ಪದೇ ಪದೇ ಭೂಕುಸಿತ ಸಂಭವಿಸುತ್ತಿದ್ದು, ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳದಲ್ಲಿ ಇದ್ದು ಕಾರ್ಯಚರಣೆ ನಡೆಸುವ ಮೂಲಕ ವಾಹನ ಸವಾರರಿಗೆ ಅನುವು ಮಾಡಿಕೊಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ