ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಗುಡ್ಡ ಕುಸಿತ: ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಚಿಕ್ಕಮಗಳೂರು ಜಿಲ್ಲಾದ್ಯಂತ ಕಳೆದೊಂದು ವಾರದಿಂದ ಧಾರಾಕಾರವಾಗಿ ಮಳೆ ಸುರಿದಿದ್ದು, ಇದೀಗ ಕೊಂಚ ಬಿಡುವು ಕೊಟ್ಟಿದೆ. ಆದರೆ ಮಳೆಯಿಂದ ಉಂಟಾಗುತ್ತಿರುವ ಅವಾಂತರ ಮಾತ್ರ ಕಡಿಮೆಯಾಗಿಲ್ಲ. ಚಂದ್ರದ್ರೋಣ ಪರ್ವತದ ಸಾಲಿನಲ್ಲಿನ ದತ್ತಪೀಠಕ್ಕೆ ತೆರಳುವ ಕವಿಕಲ್ ಗಂಡಿ ಬಳಿ ಗುಡ್ಡ ಕುಸಿತವಾಗಿದೆ. ಇದರಿಂದ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ.
ಚಿಕ್ಕಮಗಳೂರು, ಜುಲೈ 21: ಕಾಫಿನಾಡು ಚಿಕ್ಕಮಗಳೂರು (Chikkamagaluru) ಜಿಲ್ಲೆಯಾದ್ಯಂತ ವರುಣ (Rain) ಕಳೆದ ನಾಲ್ಕು ದಿನದಿಂದ ಅಬ್ಬರಿಸಿ ಇಂದು (ಜು.21) ಕೊಂಚ ವಿರಾಮ ನೀಡಿದ್ದಾನೆ. ಮಳೆನಿಂತರೂ ಮಳೆಯಿಂದ ಅವಾಂತರಗಳ ಸರಮಾಲೆಗಳೇ ಸೃಷ್ಟಿಯಾಗಿದ್ದು ಜನ ವರುಣಾರ್ಭಟಕ್ಕೆ ಕಂಗೆಟ್ಟು ಹೋಗಿದ್ದಾರೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಮತ್ತೆ ಗುಡ್ಡ ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ದತ್ತಪೀಠಕ್ಕೆ (Dattapeeta) ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ.
ಚಿಕ್ಕಮಗಳೂರು ನಗರದಿಂದ ದತ್ತಪೀಠಕ್ಕೆ ಸಂಪರ್ಕಿಸುವ ಮಾರ್ಗದಲ್ಲಿ ಕವಿಕಲ್ ಗಂಡಿ ಬಳಿ ಗುಡ್ಡ ಕುಸಿದಿದೆ. ರಸ್ತೆ ಮೇಲೆ ಮಣ್ಣು ಮತ್ತು ಕಲ್ಲು ಬಿದ್ದಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ದತ್ತಪೀಠಕ್ಕೆ ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ.
ನಿರಾಶ್ರಿತರ ರಕ್ಷಣೆ
ಧಾರಾಕಾರ ಮಳೆಯ ನಡುವೆ ಪರದಾಟ ಪಡುತ್ತಿದ್ದ ಬಸ್ ನಿಲ್ದಾಣ ಸೇರಿದಂತೆ ಚಿಕ್ಕಮಗಳೂರು ನಗರದ ಅಂಗಡಿಗಳ ಮುಂದೆ ಮಲಗಿದ್ದ 15 ಜನ ನಿರಾಶ್ರಿತರನ್ನು ರಕ್ಷಣೆ ಮಾಡಿ, ಆರೈಕೆ ಕೇಂದ್ರಕ್ಕೆ ಕಳುಹಿಸಲಾಗಿದೆ.
ಇದನ್ನೂ ಓದಿ: ಭಾರೀ ಮಳೆ; ಚಿಕ್ಕಮಗಳೂರು ಪ್ರವಾಸ ಮುಂದೂಡುವಂತೆ ಜಿಲ್ಲಾಡಳಿತ ಮನವಿ
ಮಳೆಗೆ ಕುಸಿದುಬಿದ್ದ ಮನೆ
ಕಳಸ ತಾಲೂಕಿನ ಹಳುವಳ್ಳಿ ಗ್ರಾಮ ಹಳುವಳ್ಳಿ ಗ್ರಾಮದಲ್ಲಿ ಧಾರಾಕಾರ ಮಳೆಗೆ ಮನೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯ ಹಿಂಭಾಗದ ಗೋಡೆ, ಮೇಲ್ಚಾವಣಿ ಏಕಾಏಕಿ ಕುಸಿದು ಬಿದ್ದಿದ್ದರಿಂದ ಮನೆಯಲ್ಲಿದ್ದ ದಿನಸಿ ಹಾಗೂ ಗೃಹೋಪಯೋಗಿ ವಸ್ತುಗಳು ಹಾನಿಯಾಗಿವೆ. ಮನೆಯನ್ನು ಕಳೆದುಕೊಂಡು ರಮೇಶ್ ಕುಟುಂಬ ಕಂಗಾಲಾಗಿದೆ.
ಕಡಿಮೆಯಾದ ಮಳೆ
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕು ಚಿಕ್ಕಮಗಳೂರು ನಗರ, ಕೊಪ್ಪ, ಶೃಂಗೇರಿ, ಮೂಡಿಗೆರೆ, ಕಳಸ ಎನ್. ಆರ್.ಪುರ ತಾಲೂಕಿನಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿತ್ತು. ಇದರಿಂದ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಸಾಲು ಸಾಲು ಗುಡ್ಡು ಕುಸಿತವಾಗಿತ್ತು. ತುಂಗಾ ನದಿ ಭೋರ್ಗರೆತಕ್ಕೆ ತೂಗು ಸೇತುವೆ ಶಿಥಿಲಗೊಂಡಿದ್ದವು. ಇದರಿಂದ ಜನರ ಸಂಚಾರಕ್ಕೆ ಅಡಚಣೆ ಉಂಟಾಯಿತು. ಇದೀಗ ಮಳೆ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ದುರಸ್ಥಿ ಕಾರ್ಯ ನಡೆಯುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ