ಗುಂಪುಗಾರಿಕೆ ನಿಮ್ಮಿಂದ, ನಿಮ್ಮ ಕುಟುಂಬದಿಂದ ಆಗುತ್ತಿದೆ: ರೇವಣ್ಣ, ಕುಮಾರಸ್ವಾಮಿ ವಿರುದ್ಧ JDS ಶಾಸಕ ರಾಮಸ್ವಾಮಿ ವಾಗ್ದಾಳಿ

|

Updated on: Feb 27, 2023 | 1:23 PM

ಲೋಕಸಭೆ ಅಭ್ಯರ್ಥಿ ಆಯ್ಕೆ ಮಾಡುವಾಗ ಪ್ರಜ್ವಲ್ ಹೆಸರೇ ಇರಲಿಲ್ಲ. ಕಾರಣ ದೇವೇಗೌಡರು ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಹೇಳಿರಲಿಲ್ಲ. ಪ್ರಜ್ವಲ್​ ಹೆಸರೇಳದಿದ್ದಕ್ಕೆ ಅಂದಿನಿಂದ ನನ್ನ ಮೇಲೆ ದ್ವೇಷ ಶುರುವಾಯ್ತು. ಹಿರಿಯ ಮುತ್ಸದ್ಧಿಯನ್ನೇ ಮನೆ, ಜಿಲ್ಲೆಯಿಂದ ಆಚೆ ಕಳಿಸಿದವರು ಇವರು. ಇನ್ನು ಇವರ ಮುಂದೆ ನಾನು ಯಾವ ಲೆಕ್ಕ. ಈಗಲೂ ಆ ಹಿರಿಯ ಜೀವ ನೋವಿನಿಂದ ನರಳಾಡುತ್ತಿದೆ ಎಂದು ಜೆಡಿಎಸ್ ಶಾಸಕ ಎಟಿ ರಾಮಸ್ವಾಮಿ ಹೇಳಿದ್ದಾರೆ

ಗುಂಪುಗಾರಿಕೆ ನಿಮ್ಮಿಂದ, ನಿಮ್ಮ ಕುಟುಂಬದಿಂದ ಆಗುತ್ತಿದೆ: ರೇವಣ್ಣ, ಕುಮಾರಸ್ವಾಮಿ ವಿರುದ್ಧ JDS ಶಾಸಕ ರಾಮಸ್ವಾಮಿ ವಾಗ್ದಾಳಿ
ಜೆಡಿಎಸ್​ ಶಾಸಕ ಎಟಿ ರಾಮಸ್ವಾಮಿ
Follow us on

ಹಾಸನ: ರಾಮಸ್ವಾಮಿ ಒಳ್ಳೆಯವರು ಅಂತೀರಾ ಯಾಕೆ ಒದ್ದು ಹೊರಗೆ ಹಾಕಿದ್ರಿ? ಬನ್ನಿ ರಾಜಕೀಯ ರಣರಂಗಕ್ಕೆ ಜನರನ್ನ ಎದುರಿಸಿ. ಗುಂಪುಗಾರಿಕೆ ನಿಮ್ಮಿಂದ, ನಿಮ್ಮ ಕುಟುಂಬದಿಂದ ಆಗುತ್ತಿದೆ ಸ್ವಪಕ್ಷದ ವಿರುದ್ಧ ಜೆಡಿಎಸ್ ಶಾಸಕ ಎಟಿ ರಾಮಸ್ವಾಮಿ (AT Ramaswamy) ಹರಿಹಾಯ್ದಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್​. ಡಿ ಕುಮಾರಸ್ವಾಮಿ (HD Kumaraswamy) ಅವರು ಮಾಜಿ ಸಚಿವ ಎ.ಮಂಜು ಅವರಿಗೆ ಅರಕಲಗೂಡು ಜೆಡಿಎಸ್ ಟಿಕೆಟ್ ಘೋಷಿಸಿದಾಗಿನಿಂದ ರಾಮಸ್ವಾಮಿ ಜೆಡಿಎಸ್​ನಿಂದ (JDS) ದೂರು ಉಳಿದಿದ್ದಾರೆ. ಹಾಗೂ ಇದರಿಂದ ಅಸಮಾಧಾನಗೊಂಡು ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿಲ್ಲ.

ಇದರಿಂದ ಬೇಸತ್ತು ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನನಗೆ ಗೊತ್ತಿದೆ, ಇದು ರಾಜಕೀಯ ಸಂಕ್ರಮಣ ಕಾಲ. ನಾನು ಒಳ್ಳೆಯವನಾದರೆ ಆಶೀರ್ವಾದ ಮಾಡಿ, ಇಲ್ಲವಾದರೆ ಬೇಡ. ಯಾರಿಗೂ ಅನುಮಾನ ಬೇಡ ನಾನು ಚುನಾವಣೆಗೆ ಸ್ಪರ್ಧೆ ಮಾಡಿಯೇ ಮಾಡುತ್ತೇನೆ. ಜನರ ಆಶೀರ್ವಾದದಿಂದ ಗೆದ್ದು ಬರುತ್ತೇನೆ. ಜನರು ಸ್ವಾಭಿಮಾನ ಬೆಳೆಸಿಕೊಳ್ಳಬೇಕಿದೆ. ಎಲ್ಲ ಪಕ್ಷದ ನಾಯಕರು ನನ್ನ ಜೊತೆ ಮಾತನಾಡುತ್ತಿರೋದು ನಿಜ. ಕ್ಷೇತ್ರದ ಜನರ ಜತೆ ಚರ್ಚೆಮಾಡಿ ಮುಂದಿನ ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.

ರಾಜಕೀಯ ಯುದ್ದ ಆರಂಭ ಆಗಿದೆ. ಎಲ್ಲಿಯವರೆಗೆ ಸಹಿಸೋದು ಹೇಳಿ. ಭೂಮಿ ಮಟ್ಟದವರೆಗೆ ಬಾಗಬಹುದು ಅದಕ್ಕಿಂತ ಕೆಳಗೆ ಬಾಗೋಕೆ ಆಗತ್ತಾ? ಮನೆಯ ಒಳ ಕರೆದು ಕೂರಿಸಿ ಮಾತನಾಡುವ ಸ್ಥಿತಿ ಕೂಡ ಇಲ್ಲ. ಹಾಸನದಲ್ಲಿ ಗುಲಾಮಗಿರಿ ಇದೆ, ಕೈಕಟ್ಟಿ ನಿಲ್ಲಬೇಕಿದೆ. ಆದಿ ಇರೋದಕ್ಕೆ ಅಂತ್ಯ ಇದ್ದೇ ಇರುತ್ತದೆ. ವಿನಾಶ ಕಾಲೇ ವಿಪರೀತ ಬುದ್ದಿ ಎನ್ನುತ್ತಾರೆ. ಅವರೇ ರಾಜಕೀಯ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಾಗ ಏನಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕಾಂಗ ಸಭೆಗೆ ಎ.ಟಿ.ರಾಮಸ್ವಾಮಿ ಬಂದಿಲ್ಲ ಎಂಬ ಹೆಚ್​.ಡಿ.ಕುಮಾರಸ್ವಾಮಿ ಹೇಳಿಕೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಹೆಚ್​​ಡಿ ಕುಮಾರಸ್ವಾಮಿ ಅವರ ಬಗ್ಗೆ ಅಪಾರ ಗೌರವವಿದೆ. ಆದರೆ ಸತ್ಯ ಮರೆಮಾಚಬಾರದು. ಕುಮಾರಸ್ವಾಮಿಯೇ ಶಾಸಕಾಂಗ ಸಭೆಗೆ ಬಂದಿರಲಿಲ್ಲ, ನಾನು ಹೋಗಿದ್ದೆ. ಬೇಕಿದ್ದರೆ ಸಹಿ ಪುಸ್ತಕ ತೆಗೆದು ನೋಡಿ ಎಂದರು.

ಹಿರಿಯ ಮುತ್ಸದ್ಧಿಯನ್ನೇ ಮನೆ, ಜಿಲ್ಲೆಯಿಂದ ಆಚೆ ಕಳಿಸಿದವರು ಇವರು

ಕ್ಷೇತ್ರದಲ್ಲಿ ಒಬ್ಬರು ನಾನೇ ಅಭ್ಯರ್ಥಿ ಎಂದು ಸಭೆ ಮಾಡುತ್ತಿದ್ದಾರೆ. ರೇವಣ್ಣ ಅನುಮತಿ ಇಲ್ಲದೆ ಇದೆಲ್ಲವೂ ನಡೆಯಲು ಸಾಧ್ಯವೇ? ಲೋಕಸಭೆ ಅಭ್ಯರ್ಥಿ ಆಯ್ಕೆ ಮಾಡುವಾಗ ಪ್ರಜ್ವಲ್ ಹೆಸರೇ ಇರಲಿಲ್ಲ. ಕಾರಣ ದೇವೇಗೌಡರು ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಹೇಳಿರಲಿಲ್ಲ. ಪ್ರಜ್ವಲ್​ ಹೆಸರೇಳದಿದ್ದಕ್ಕೆ ಅಂದಿನಿಂದ ನನ್ನ ಮೇಲೆ ದ್ವೇಷ ಶುರುವಾಯ್ತು. ಹಿರಿಯ ಮುತ್ಸದ್ಧಿಯನ್ನೇ ಮನೆ, ಜಿಲ್ಲೆಯಿಂದ ಆಚೆ ಕಳಿಸಿದವರು ಇವರು. ಇನ್ನು ಇವರ ಮುಂದೆ ನಾನು ಯಾವ ಲೆಕ್ಕ. ಈಗಲೂ ಆ ಹಿರಿಯ ಜೀವ ನೋವಿನಿಂದ ನರಳಾಡುತ್ತಿದೆ ಎಂದು ಮಾಜಿ ಸಚಿವ ಹೆಚ್​.ಡಿ.ರೇವಣ್ಣ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಕಳೆದ ಚುನಾವಣಾ ವೇಳೆ ಸೂಟ್​​ಕೇಸ್ ಕೊಟ್ಟವರಿಗೆ ಟಿಕೆಟ್ ಎಂದಿದ್ದರೂ. ಸಂಸದ ಪ್ರಜ್ವಲ್​ ರೇವಣ್ಣ ಮಾತಿಗೆ ಯಾವುದೇ ಲಂಗು ಲಗಾಮು ಇಲ್ಲವೇ? ಹಾಗಿದ್ದರೆ ಟಿಕೆಟ್​​ ಕೊಡುತ್ತಿದ್ದವರು ಯಾರು? ಬೇರೆ ಯಾರಾದರೂ ಈ ಮಾತನ್ನು ಹೇಳಿದ್ದರೆ ಸುಮ್ಮನೆ ಬಿಡುತ್ತಿದ್ದರೇ? ನಾನು ಏನೂ ಪ್ರಶ್ನೆಯನ್ನೇ ಮಾಡಬಾರದು ಎಂದಾದರೆ ನಾನ್ಯಾಕೆ ಶಾಸಕನಾಗಿ ಇರಬೇಕು? ನಾನು ಎದೆ ಗುಂದೊದಿಲ್ಲ, ಇದನ್ನೆಲ್ಲ ಪ್ರೀತಿಯಿಂದಲೇ ಸ್ವೀಕಾರ ಮಾಡುತ್ತೇನೆ. ನನ್ನ ಋಣ ಇರೊದು ಜನರ ಮೇಲೆ. ರೈತರ ಭೂ ಮಂಜೂರಾತಿ ಮಾಡಬೇಡಿ ಅಂತಾರೆ. ಜನರ ಮುಂದೆ ರೈತರ ಪಕ್ಷ ರೈತರ ಪರ ಅಂತಾರೆ. ಇವರಿಗೆ ಬಹುಪರಾಕ್ ಹಾಕಿಕೊಂಡು ನಾನಿರಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರ್ಮದ ಸತ್ಯದ ಹಾದಿ ಕಷ್ಟ ಎಂದು ಗೊತ್ತಿದೆ, ಆದರೂ ಅದನ್ನ ಬಿಡೋದಿಲ್ಲ. ನಾನು ಯಾವಾಗಲು ರಾಜಕೀಯ ವ್ಯಭಿಚಾರ ವಿರೋಧಿಸಿದವನು. ಹಾಸನ ಜಿಲ್ಲೆಯಲ್ಲಿ ಏನೇನೂ ನಡೆಯುತ್ತಿದೆ ಇದನ್ನು ಜನರು ಮಾಡುತ್ತಿದ್ದಾರಾ? ಈ ದೊಂಬರಾಟಕ್ಕೆ ಯಾರು ಕಾರಣ ಮನೆಯವರೇ ಅಲ್ಲವಾ? ರಾಮಸ್ವಾಮಿ ಪ್ರಾಮಾಣಿಕ ಎನ್ನುತ್ತಲೆ ಮನೆ ಬಳಿ ಜನ ಸೇರಿಸಿ ಕೆಟ್ಟವನು ಎಂದು ಹೇಳಿಸುತ್ತಿದ್ದಾರೆ. ಸ್ವರೂಪ್ ವಿಚಾರದಲ್ಲೂ ಏನಾಗುತ್ತಿದೆ? ಕುಮಾರಸ್ವಾಮಿ ಸ್ವರೂಪ್ ಅಭ್ಯರ್ಥಿ ಎಂದು 8 ತಿಂಗಳ ಹಿಂದೆಯೇ ಹೇಳಿದ್ದರು. ಅಭ್ಯರ್ಥಿ ಅಯ್ಕೆಗೆ ಕರೆದ ಸಭೆ ರದ್ದಾದರೆ ಅದಕ್ಕೆ ಯಾರದೋ ಕೈವಾಡ ಇದೆ ಅಂತಾರೆ. ಯಾರ ಕೈವಾಡ ಇವರಿಗೆ ಗೊತ್ತಿಲ್ಲವಾ, ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಾರಾ? ಎಂದು ಪ್ರಶ್ನೆ ಮಾಡಿದರು.

ಸ್ವರೂಪ್ ತಂದೆ ಕಳೆದುಕೊಂಡು, ಚಿಕ್ಕಪ್ಪನ ಕಳಕೊಂಡರು. ಸಾಲ ಮಾಡಿ ರಾಜಕಾರಣಮಾಡುತ್ತಿದ್ದರೆ. ಯುವಕರ ರಾಜಕೀಯದ ಜೊತೆ ಚಲ್ಲಾಟ ಆಡುತ್ತೀರಾ? ಅವರು ಸಭೆ ಮಾಡಿದರು ಅಂತ ಈಗ ಪ್ರತ್ಯೇಕ ಸಭೆ ಅಂತೆ. ಬೇರೆ ಯಾರಾದ್ರು ಹೀಗೆ ಮಾಡಿದ್ರೆ ಸುಮ್ಮನೆ ಬಿಡುತ್ತಿದ್ದಿರಾ? ಎಂದು ಸ್ವರೂಪ್ ಪರವಾಗಿ ಬ್ಯಾಟ್ ಬೀಸಿದರು.

2018ರ ಚುನಾವಣೆಯ ಫಲಿತಾಂಶಕ್ಕೂ ಮುನ್ನವೇ ಮೈತ್ರಿ ಆಗಿತ್ತು

2018ರ ಚುನಾವಣೆಯ ಫಲಿತಾಂಶಕ್ಕೂ ಮುನ್ನವೇ ಮೈತ್ರಿ ಆಗಿತ್ತು. ಹೆಚ್​​ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಅಂತ ಕಾಂಗ್ರೆಸ್ ಜತೆ ಮೈತ್ರಿಗೆ ನಿರ್ಧಾರವಾಗಿತ್ತು. ನಾನು ಸರ್ಕಾರಿ ಭೂಮಿ ಒತ್ತುವರಿ ತೆರವು ಸಮಿತಿಯ ಅಧ್ಯಕ್ಷನಾಗಿದ್ದೆ. ನಾನು ಪಕ್ಷ, ಜನರಿಗೆ ಗೌರವ ಬರುವಂತೆ ನಾನು ನಡೆದುಕೊಂಡಿದ್ದೇನೆ. ಅಧ್ಯಕ್ಷನಾಗಿದ್ದಾಗ ಒತ್ತುವರಿ ಭೂಮಿ ತೆರವು ಮಾಡುವ ಕೆಲಸ ಮಾಡಿದೆ. ಆಗ ಭೂ ಮಾಫಿಯಾದಿಂದ ಬೆದರಿಕೆ ಬರಬಹುದು ಎಂದು ಹೇಳುತ್ತಿದ್ದರು. ಆದ್ರೆ ಈವರೆಗೂ ನಾನು ಅಂಗರಕ್ಷಕನನ್ನು ಪಡೆದಿಲ್ಲ. ಕೆಲವರು ಸ್ವಾರ್ಥಕ್ಕಾಗಿ ಯಾರನ್ನು ಬೇಕಾದರೂ ಬಲಿ ಕೊಡುತ್ತಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:22 pm, Mon, 27 February 23